ಮೇಕೆದಾಟು ಜಲಾಶಯ ಯೋಜನೆ ಪ್ರದೇಶದಲ್ಲಿ ಪರಿಸರ ಪರಿಣಾಮ ಮೌಲ್ಯಮಾಪನ ಅಧ್ಯಯನ ನಡೆಸಲು ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದೆ. ಸುಪ್ರೀಂಕೋರ್ಟ್ ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದ್ದು, ಯೋಜನೆ ಅನುಷ್ಠಾನದತ್ತ ದೊಡ್ಡ ಹೆಜ್ಜೆಯಾಗಿದೆ.

ನವದೆಹಲಿ (ನ.24): ಮೇಕೆದಾಟು ಜಲಾಶಯ ಯೋಜನೆ(Mekedatu Reservoir Project) ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣದಿಂದ ಪರಿಸರದ ಮೇಲಾಗುವ ಪರಿಣಾಮಗಳ ಮೌಲ್ಯಮಾಪನದ ಅಧ್ಯಯನ ನಡೆಸಲು ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ(Central Wildlife Board) ನೀಡಿದೆ. ದೆಹಲಿಯಲ್ಲಿ ಸೋಮವಾರ ನಡೆದ ಕೇಂದ್ರ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಸಮ್ಮತಿ ಸೂಚಿಸಲಾಗಿದೆ.

ಕೇಂದ್ರ ವನ್ಯಜೀವಿ ಮಂಡಳಿಯಿಂದ ಒಪ್ಪಿಗೆ

2026ರ ಜೂನ್ 30ರಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯು ಈ ಸಮೀಕ್ಷೆಗೆ ಒಪ್ಪಿಗೆ ನೀಡಿ ಅಂತಿಮ ಅನುಮತಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಇದೇ ವೇಳೆ, ಯೋಜನೆಗೆ ಯಾವುದೇ ಕಾನೂನು ತೊಡಕಿಲ್ಲ ಹಾಗೂ ಡಿಪಿಆರ್ ಸಿದ್ಧತೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ ಎಂದು ಕರ್ನಾಟಕ ಸರ್ಕಾರ ಇತ್ತೀಚೆಗೆ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಸ್ಪಷ್ಟನೆ ನೀಡಿತ್ತು. ಇದರ ಬೆನ್ನಲ್ಲೇ ದೆಹಲಿಯಲ್ಲಿ ಸೋಮವಾರ ನಡೆದ ಕೇಂದ್ರ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಯೋಜನೆ ಪ್ರದೇಶದಲ್ಲಿ ಪರಿಸರದ ಮೇಲಾಗುವ ಪರಿಣಾಮಗಳ ಮೌಲ್ಯಮಾಪನದ ಅಧ್ಯಯನ ನಡೆಸಲು ಒಪ್ಪಿಗೆ ನೀಡಲಾಗಿದೆ.

ಯೋಜನೆ ಅನುಷ್ಠಾನದತ್ತ ಮಹತ್ವದ ನಡೆ

ಇದರಿಂದಾಗಿ ಮೇಕೆದಾಟು ಜಲಾಶಯ ಯೋಜನೆ ಪ್ರದೇಶದಲ್ಲಿ ತಾಂತ್ರಿಕ ಮತ್ತು ಪರಿಸರ ಸಂಬಂಧಿತ ಸರ್ವೇ/ತನಿಖಾ ಅಧ್ಯಯನಗಳನ್ನು ನಡೆಸಲು ಅನುವಾಗಲಿದೆ.

ಮೇಕೆದಾಟು ಡ್ಯಾಂ ನಿರ್ಮಾಣ ವಿಚಾರದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಸಮೀಕ್ಷೆ ಮತ್ತು ಪರಿಸರ ಪರಿಣಾಮ ಮೌಲ್ಯಮಾಪನ ವರದಿ ಸಿದ್ಧವಾದ ನಂತರ, ಯೋಜನೆಯ ನಿರ್ಮಾಣ ಕಾಮಗಾರಿ ಆರಂಭಕ್ಕೆ ಕೇಂದ್ರ ಪರಿಸರ ಸಚಿವಾಲಯ, ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಪ್ರತ್ಯೇಕ ಮತ್ತು ಅಂತಿಮ ಶಾಸನಬದ್ಧ ಅನುಮತಿಗಳನ್ನು ಪಡೆಯಬೇಕಿದೆ.