ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮೋದನೆ ನೀಡಬಾರದೆಂದು ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಯೋಜನೆಯು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದ್ದು, ರೈತರಿಗೆ ಧಕ್ಕೆಯಾಗುತ್ತದೆ ಎಂದು ತಮಿಳುನಾಡು ಕಳವಳ ವ್ಯಕ್ತಪಡಿಸಿದೆ.
ನವದೆಹಲಿ (ನ.18): ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ 'ಮೇಕೆದಾಟು ಅಣೆಕಟ್ಟು ಯೋಜನೆ'ಗೆ (Mekedatu Dam Project) ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ಅನುಮೋದನೆ ನೀಡಬಾರದು ಎಂದು ತಮಿಳುನಾಡು ಸರ್ಕಾರ ಬುಧವಾರ ಮತ್ತೊಮ್ಮೆ ತೀವ್ರ ಒತ್ತಡ ಹೇರಿದೆ. ತಮಿಳುನಾಡಿನ ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವ ಎನ್. ಆನಂದ್ (N Anand) ಅವರು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ (C R Patil) ಅವರನ್ನು ಖುದ್ದಾಗಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದು, ಯೋಜನೆಯ ಜಾರಿಯನ್ನು ತಡೆಯಲು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಯು 2007ರ ಫೆಬ್ರವರಿ 5ರ ಕಾವೇರಿ ಜಲವಿವಾದ ನ್ಯಾಯಮಂಡಳಿಯ (CWDT) ಅಂತಿಮ ತೀರ್ಪು ಮತ್ತು 2018 ಫೆಬ್ರವರಿ 16ರ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಒಂದು ವೇಳೆ ಈ ಯೋಜನೆ ಜಾರಿಯಾದರೆ ತಮಿಳುನಾಡಿನ ರೈತರ ಜೀವನೋಪಾಯಕ್ಕೆ ತೀವ್ರ ಧಕ್ಕೆಯಾಗಲಿದೆ ಎಂದು ತಮಿಳುನಾಡು ಆತಂಕ ವ್ಯಕ್ತಪಡಿಸಿದೆ.
ಕಾನೂನು ಹೋರಾಟದ ಎಚ್ಚರಿಕೆ ನೀಡಿದ ತಮಿಳುನಾಡು ಸಚಿವರು
ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ತಮಿಳುನಾಡು ಸರ್ಕಾರ ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ವಿವಿಧ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸಚಿವರ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎನ್. ಆನಂದ್, ಮೇಕೆದಾಟು ವಿಚಾರವಾಗಿ ನಾವು ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇವೆ. ಈ ವಿಷಯವನ್ನು ನಾವು ಕಾನೂನು ಮಾರ್ಗಗಳ ಮೂಲಕವೇ ಎದುರಿಸುತ್ತೇವೆ ಎಂದು ಅವರಿಗೆ ತಿಳಿಸಿದ್ದೇವೆ. ತಮಿಳುನಾಡಿನ ಹಕ್ಕುಗಳನ್ನು ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ನಮ್ಮ ಅನುಮತಿಯಿಲ್ಲದೆ ಕರ್ನಾಟಕ ಸರ್ಕಾರ ಈ ಯೋಜನೆ ಮುಂದುವರಿಸುವಂತಿಲ್ಲ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ತಮಿಳುನಾಡು ಸಚಿವ ಆಧವ್ ಅರ್ಜುನ (Aadhav Arjuna), 2018ರ ಸುಪ್ರೀಂ ಕೋರ್ಟ್ ತೀರ್ಪೇ ಅಂತಿಮವಾದದ್ದು, ಯಾರೂ ಆ ತೀರ್ಪನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಆ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಿದ್ದರೂ ಸಹ, ಅದರ ಮೇಲೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ನಾವು ಒತ್ತಾಯಿಸಿದ್ದೇವೆ. ಕೇಂದ್ರ ಸಚಿವರು ನಮ್ಮ ಅಭಿಪ್ರಾಯಗಳನ್ನು ಎಚ್ಚರಿಕೆಯಿಂದ ಆಲಿಸಿದ್ದು, ಡಿಪಿಆರ್ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, 2018ರ ಸುಪ್ರೀಂ ಕೋರ್ಟ್ ತೀರ್ಪು ತಮಿಳುನಾಡಿಗೆ ಅತ್ಯಂತ ಪೂರಕವಾಗಿದೆ ಮತ್ತು ಅದನ್ನು ಉಲ್ಲಂಘಿಸಿ ಏನನ್ನೂ ಮಾಡಲು ಸಾಧ್ಯವಿಲ್ಲ. ಎರಡೂ ರಾಜ್ಯಗಳ ಜನರು ಪರಸ್ಪರ ಪ್ರೀತಿ-ವಿಶ್ವಾಸ ಹೊಂದಿದ್ದಾರೆ. ಆದ್ದರಿಂದ ಕೆಲವು ರಾಜಕಾರಣಿಗಳು ನೀಡುವ ಹೇಳಿಕೆಗಳಿಗೆ ನಾವು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಕಾನೂನು ತಜ್ಞರಿಗೆ 2018ರ ತೀರ್ಪಿನ ಸ್ಪಷ್ಟ ಅರಿವಿದೆ ಎಂದರು.
ಮೇಕೆದಾಟು ತಡೆಯಲು ತಮಿಳುನಾಡು ಈವರೆಗೆ ಕೈಗೊಂಡಿರುವ ಪ್ರಮುಖ ಕ್ರಮಗಳು
2026 ಮೇ 27ರಂದು ಮೇಕೆದಾಟು ಯೋಜನೆ ವಿರೋಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಮುಂದೆ ತಮಿಳುನಾಡು ಸರ್ಕಾರದಿಂದ ಪ್ರಕರಣ ದಾಖಲು ಮಾಡಲಾಗಿತ್ತು. ಆ ಬಳಿಕ ಅದೇ ವರ್ಷದ ಜೂನ್ 19 ರಂದು ಮೇಕೆದಾಟು ಯೋಜನೆಗೆ ಯಾವುದೇ ಅನುಮೋದನೆ ನೀಡದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ ಮಾಡಲಾಗಿತ್ತು.
ಆಗಸ್ಟ್ 3ರಂದು ಡಿಸೆಂಬರ್ 2025ರಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಹೊರಡಿಸಿದ್ದ ಕಾವೇರಿ ಕಣಿವೆ ನೀರಾವರಿ ಯೋಜನೆಗಳ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆಮಾಡಿದೆ. ಅದಲ್ಲದೆ, ತಮಿಳುನಾಡು ಮುಖ್ಯಮಂತ್ರಿಗಳು ವೈಯಕ್ತಿಕ ಭೇಟಿ ಮತ್ತು ಪತ್ರಗಳ ಮೂಲಕ ಪ್ರಧಾನಮಂತ್ರಿಗಳಿಗೆ ಯೋಜನೆಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ವಿಜಯ್ ನಿರ್ದೇಶನದಂತೆ ಸಲ್ಲಿಸಿದ ಮನವಿ ಪತ್ರದಲ್ಲೇನಿದೆ?
ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಅವರ ನಿರ್ದೇಶನದ ಮೇರೆಗೆ ಸಚಿವರು ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಖುದ್ದಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. ಕಾವೇರಿ ನದಿಗೆ ಅಡ್ಡಲಾಗಿ ನೀರು ತಿರುಗಿಸುವ ಯಾವುದೇ ಹೊಸ ಅಣೆಕಟ್ಟು ಅಥವಾ ಯೋಜನೆಗೆ ಕಾವೇರಿ ಕಣಿವೆಯ ಎಲ್ಲಾ ರಾಜ್ಯಗಳ ಕಾನೂನುಬದ್ಧ ಒಪ್ಪಿಗೆ ಮತ್ತು ಅನುಮೋದನೆ ಕಡ್ಡಾಯವಾಗಿದೆ ಎಂದು ತಮಿಳುನಾಡು ಹೇಳಿದೆ.
'ಒಕ್ಕೂಟ ವ್ಯವಸ್ಥೆಯ ತತ್ವಗಳು ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವ ಹಿತದೃಷ್ಟಿಯಿಂದ, ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗ (CWC) ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸಲ್ಲಿಸಿರುವ ಡಿಪಿಆರ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು' ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಾವೇರಿ ಕಣಿವೆಯ ಎಲ್ಲಾ ರಾಜ್ಯಗಳ ಕಾನೂನುಬದ್ಧ ಒಪ್ಪಿಗೆ ಇಲ್ಲದೆ, ಕಾವೇರಿ ನದಿ ಮತ್ತು ಅದರ ಉಪನದಿಗಳಲ್ಲಿ ಜಲಾಶಯಗಳ ನಿರ್ಮಾಣ ಅಥವಾ ನೀರು ತಿರುಗಿಸುವ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಅಂತರರಾಜ್ಯ ನದಿ ನೀರಿನ ಹಕ್ಕುಗಳು ಮತ್ತು ಒಕ್ಕೂಟ ಆಡಳಿತದ ತತ್ವಗಳನ್ನು ರಕ್ಷಿಸಲು ಅನ್ವಯವಾಗುವ ಎಲ್ಲಾ ಕಾನೂನು ನಿಬಂಧನೆಗಳು ಮತ್ತು ಸ್ಥಾಪಿತ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿರುವ ಸಚಿವ ಆನಂದ್, ಈ ಕುರಿತು ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.












