Weight Loss Treatment: ನಗರದ ಖಾಸಗಿ ಆಸ್ಪತ್ರೆಯಲ್ಲಿ ತೂಕ ಇಳಿಕೆ ಶಸ್ತ್ರಚಿಕಿತ್ಸೆ ವೇಳೆ ಬಿಜೆಪಿ ನಾಯಕನ ಸೋದರಿ ರಜನಿ ದೇವಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಲಕ್ನೋ: ಆಧುನಿಕ ಜೀವನಶೈಲಿಯನ್ನು ರೂಢಿಸಿಕೊಂಡು ಜನರು ತೂಕ ಹೆಚ್ಚಳದ ಕಿರಿಕಿರಿಯನ್ನು ಅನುಭವಿಸುತ್ತಾರೆ. ಹೆಚ್ಚಾಗಿ ಭಾರವಾಗಿರುವ ತೂಕ ಇಳಿಸಿಕೊಳ್ಳಲು ಡಯಟ್, ವ್ಯಾಯಾಮ ಸೇರಿದಂತೆ ಇನ್ನಿತರ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಇದೀಗ ಆಸ್ಪತ್ರೆಗಳಲ್ಲಿ ಬೊಜ್ಜು ಕಡಿಮೆ ಮಾಡುವ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಕಡಿಮೆ ಸಮಯದಲ್ಲಿ ತೂಕ ಇಳಿಸಿಕೊಳ್ಳಲು ಕೆಲವರು ಇಂತಹ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಾರೆ. ಇದೇ ರೀತಿ ಮಹಿಳೆಯೊಬ್ಬರು ತೂಕ ಇಳಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಮಹಿಳೆಯ ಸಾವು ಆಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿವೆ.

ರಜನಿ ದೇವಿ ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಉತ್ತರ ಪ್ರದೇಶದ ಮೀರತ್‌ನ ಘರ್ ರಸ್ತೆಯಲ್ಲಿರುವ ನ್ಯೂಟಿಮಾ ಆಸ್ಪತ್ರೆಗೆ ಬೊಜ್ಜು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆಗೆ ರಜನಿ ದೇವಿ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ರಿಷಿ ಸಿಂಘಾಲ್ ನಿರ್ಲಕ್ಷ್ಯದಿಂದಾಗಿ ಸಾವು ಆಗಿದೆ ಎಂದು ರಜನಿ ದೇವಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಬಿಜೆಪಿ ನಾಯಕನ ಸೋದರಿ ರಜನಿ ದೇವಿ

ಮೃತ ರಜನಿ ದೇವಿ ಅವರು ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಅರವಿಂದ್ ಮಾರ್ವಾಡಿ ಸೋದರಿಯಾಗಿದ್ದಾರೆ. ರಜನಿ ದೇವಿ ಅವರ ಪುತ್ರ ಸನ್ನಿ ಗುಪ್ತಾ ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ರಜನಿ ದೇವಿ ಸಾವಿನ ಬಳಿಕ ಆಸ್ಪತ್ರೆ ಮುಂಭಾಗ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮೀರತ್ ಪೊಲೀಸರು, ರಜನಿ ದೇವಿ ಕುಟುಂಬಸ್ಥರನ್ನು ಸಮಾಧಾನಗೊಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರಜನಿ ದೇವಿ ಅವರ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಯಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ವರದಿಗಾಗಿ ಕಾಯುತ್ತಿದ್ದಾರೆ. ಮರಣೋತ್ತರ ಶವ ಪರೀಕ್ಷೆ ವರದಿ ಬಂದ ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಮುಂಜಾಗ್ರತ ಕ್ರಮವಾಗಿ ನ್ಯೂಟಿಮಾ ಆಸ್ಪತ್ರೆ ಆವರಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುಟುಂಬಸ್ಥರ ಆರೋಪ ಏನು?

ರಜನಿ ದೇವಿ ಮತ್ತು ಅವರ ಮಗಳು ಬೊಜ್ಜು ಕಡಿಮೆ ಮಾಡಿಕೊಳ್ಳಲು ನ್ಯೂಟಿಮಾ ಆಸ್ಪತ್ರೆಯಲ್ಲಿ 3.70 ಲಕ್ಷ ರೂ.ಗಳ ಪ್ಯಾಕೇಜ್ ತೆಗೆದುಕೊಂಡಿದ್ದರು. ಜುಲೈ 11 ರಂದು ರಜನಿ ದೇವಿ ಮತ್ತು ಮಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಲ್ಲಿ ಕರುಳಿನ ಶಸ್ತ್ರಚಿಕಿತ್ಸೆಯೂ ಸೇರಿತ್ತು. ಈ ಶಸ್ತ್ರಚಿಕಿತ್ಸೆಯ ನಂತರ ರಜನಿ ದೇವಿ ಆರೋಗ್ಯ ಕ್ಷೀಣಿಸುತ್ತಲೇ ಬಂತು. ಆದ್ರೆ ಆಸ್ಪತ್ರೆ ಸಿಬ್ಬಂದಿ ಕೂಡಲೇ ರಜನಿ ದೇವಿಯನ್ನು ಐಸಿಯುಗೆ ಶಿಫ್ಟ್ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ. ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿಲ್ಲ. ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾದ್ರೂ ಬೇರೆ ಯಾವುದೇ ಉನ್ನತ ಆಸ್ಪತ್ರೆಗೂ ಶಿಫಾರಸ್ಸು ಮಾಡುವ ಪ್ರಯತ್ನಿಸಿಲ್ಲ ಎಂದು ರಜನಿ ದೇವಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಮಂಗಳವಾರ ರಜನಿ ದೇವಿ ನಿಧನ

ಜುಲೈ 11 ರಂದು ತೂಕ ಇಳಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ರಜನಿ ದೇವಿ ಜುಲೈ 15ರಂದು ನಿಧನರಾಗಿದ್ದಾರೆ. ರಜನಿ ದೇವಿ ಸಾವಿನ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಸ್ಥಳೀಯ ರಾಜಕೀಯ ಮುಖಂಡರು ಮತ್ತು ಗಣ್ಯರು ಆಗಮಿಸಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬ ಸದಸ್ಯರ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದರಿಂದ ಗದ್ದಲ ಉಂಟಾಗಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಮತ್ತು ತೆಗೆದುಕೊಳ್ಳಬಹುದಾದ ಕಾನೂನು ಕ್ರಮಗಳ ಬಗ್ಗೆ ತಿಳಿಸಿ ಆಸ್ಪತ್ರೆ ಮುಂಭಾಗ ಸೇರಿದ್ದ ಉದ್ರಿಕ್ತ ಜನರನ್ನು ತಿಳಿಗೊಳಿಸಿದ್ದಾರೆ.

ಆಸ್ಪತ್ರೆ ಆಡಳಿತ ಮಂಡಳಿ ಹೇಳಿಕೆ ಏನು?

ಬೊಜ್ಜು ಕಡಿಮೆ ಮಾಡುವ ಶಸ್ತ್ರಚಿಕಿತ್ಸೆಯನ್ನು ನಿಗದಿತ ಶಿಷ್ಟಾಚಾರದ ಪ್ರಕಾರವೇ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯ ನಂತರದ ತೊಂದರೆಗಳಿಂದಾಗಿ ರೋಗಿಯ ಸ್ಥಿತಿ ಹದಗೆಟ್ಟಿತ್ತು. ಮರಣೋತ್ತರ ಶವ ಪರೀಕ್ಷೆ ವರದಿ ನಂತರವಬೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಹೇಳಿಕೆ ನೀಡಿದೆ. ಸದ್ಯ ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು, ನ್ಯೂಟಿಮಾ ಆಸ್ಪತ್ರೆ ಮತ್ತು ರಜನಿ ದೇವಿ ಕುಟುಂಬಸ್ಥರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.