ನಕಲಿ ಹೃದಯತಜ್ಞ ಮಾಡಿದ ಶಸ್ತ್ರಚಿಕಿತ್ಸೆಗೆ ಒಳಗಾಗಿ 7 ರೋಗಿಗಳು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ದಮೋಹ್‌ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.
ಮಧ್ಯಪ್ರದೇಶ: ನಕಲಿ ಹೃದಯತಜ್ಞ ಮಾಡಿದ ಶಸ್ತ್ರಚಿಕಿತ್ಸೆಗೆ ಒಳಗಾಗಿ 7 ರೋಗಿಗಳು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ದಮೋಹ್‌ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಯಲ್ಲಿ ಈ ಹೃದಯಶಸ್ತ್ರಚಿಕಿತ್ಸೆ ನಡೆದಿದ್ದು, ನಕಲಿ ವೈದ್ಯನೋರ್ವ 12ಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಇಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದ, ಶಸ್ತ್ರಚಿಕಿತ್ಸೆಗೊಳಗಾದ ಇವರಲ್ಲಿ 7 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಘಟನೆ ನಡೆದು 45 ದಿನ ಆದರೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ದಾಮೋಹ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಕೀಲ ದೀಪಕ್ ತಿವಾರಿ ಅವರು ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಯುಕೆ ಮೂಲದ ಕಾನೂನುಬದ್ಧ ವೈದ್ಯ ಡಾ. ಎನ್. ಜಾನ್ ಕೆಮ್ ಎಂದು ಹೇಳಿಕೊಂಡ ನರೇಂದ್ರ ಯಾದವ್ ಎಂಬ ವ್ಯಕ್ತಿ ಈ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞನ ಸೋಗಿನಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು ಎಂದು ತಿವಾರಿ ಆರೋಪಿಸಿದ್ದಾರೆ. ದೂರಿನ ನಂತರ, ಜಿಲ್ಲಾಡಳಿತವು ತನಿಖಾ ಸಮಿತಿ ರಚನೆ ಮಾಡಿದೆ. ಆದರೆ ಆರೋಪಗಳ ಗಂಭೀರತೆಯ ಹೊರತಾಗಿಯೂ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಆದರೆ ಈ ರೀತಿ ನಕಲಿ ಶಸ್ತ್ರಚಿಕಿತ್ಸೆ ನಡೆದ ಆಸ್ಪತ್ರೆಯ ವೈದ್ಯ ಡಾಕ್ಟರ್ ಅಜಯ್ ಲಾಲ್ ಹಾಗೂ ನರೇಂದ್ರ ಯಾದವ್ ಅವರು ಈಗಾಗಲೇ ದೇಶ ತೊರೆದಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯಶಾಸ್ತ್ರ ಓದಿ, ಸ್ಟೆಥೋಸ್ಕೋಪ್ ಹಿಡಿದು ಡಾಕ್ಟರ್ ಆದ ವ್ಯಕ್ತಿ! ವೈದ್ಯಕೀಯ ಜಗತ್ತಿನಲ್ಲಿ ಅಚ್ಚರಿ!
ಡಾ. ಲಾಲ್ ಮತ್ತು ನರೇಂದ್ರ ಯಾದವ್ ಇಬ್ಬರೂ ಆಸ್ಪತ್ರೆ ಆಡಳಿತ ಮಂಡಳಿಯೊಂದಿಗೆ ನಿರಂತರ ಆನ್‌ಲೈನ್ ಸಂಪರ್ಕದಲ್ಲಿದ್ದರು.- ರಾತ್ರಿಯಲ್ಲಿ ಡಾ. ಲಾಲ್ ಮತ್ತು ಹಗಲಿನಲ್ಲಿ ಡಾ. ಜಾನ್ ಅಲಿಯಾಸ್ ನರೇಂದ್ರ ಯಾದವ್ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ನಾನು ದೂರು ನೀಡಿದ ಕೂಡಲೇ, ಡಾ. ಜಾನ್ ವಿದೇಶಕ್ಕೆ ಪರಾರಿಯಾಗಿದ್ದಾರೆ. ಫೆಬ್ರವರಿಯಲ್ಲಿ ವೈದ್ಯರು ಸರಿಯಾದ ರೋಗನಿರ್ಣಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೋಗಿಯೊಬ್ಬರು ದೂರು ನೀಡಿದಾಗ ಆರಂಭಿಕ ಅನುಮಾನ ಹುಟ್ಟಿಕೊಂಡಿತು. ಆಳವಾದ ವಿಚಾರಣೆಯ ನಂತರ, ಆರೋಪಿ ಪರಾರಿಯಾಗಿದ್ದಾನೆ ಎಂದು ವಕೀಲ ದೀಪಕ್ ತಿವಾರಿ ಆರೋಪಿಸಿದ್ದಾರೆ.
ನರೇಂದ್ರ ಯಾದವ್ ತಾನು ಯುಕೆಯ ಪ್ರಸಿದ್ಧ ವೈದ್ಯ ಡಾ ಕೇಮ್ ಎಂದು ಹೇಳಿಕೊಂಡು ಈ ಆಸ್ಪತ್ರೆಯ ಸಿಬ್ಬಂದಿಯ ದಾರಿ ತಪ್ಪಿಸಿರುವುದು ಆಸ್ಪತ್ರೆಯ ಅಧಿಕೃತ ದಾಖಲೆಗಳಿಂದ ಖಚಿತಗೊಂಡಿದೆ. ಆದರೆ ಈ ನಕಲಿ ಶಸ್ತ್ರಚಿಕಿತ್ಸೆಯಿಂದಾಗಿ ಇದುವರೆಗೆ ಒಟ್ಟು 7 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದಮೋಹ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಡಾ. ಮುಖೇಶ್ ಜೈನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಳು ಇನ್ನೂ ಮುಂದುವರೆದಿವೆ. ಕಲೆಕ್ಟರ್ ಸುಧೀರ್ ಕೊಚರ್ ಅವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯುತ್ತಿದೆ. ಆರೋಪಿಗಳು ಒಂದು ತಿಂಗಳ ಹಿಂದೆ ಪರಾರಿಯಾಗಿರುವುದರಿಂದ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
