Massive gas leak at ONGC in Andhra pradesh ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಒಎನ್ಜಿಸಿ ಗ್ಯಾಸ್ ಸೋರಿಕೆಯಾಗಿದೆ. ಅನಾಹುತ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಆದೇಶಿಸಲಾಗಿದೆ.
ಆಂಧ್ರಪ್ರದೇಶ (ನ.17): ಭಾರೀ ಪ್ರಮಾಣದಲ್ಲಿ ONGC ಗ್ಯಾಸ್ ಲೀಕ್ ಆಗಿ ಅನಾಹುತ ಸೃಷ್ಟಿಸಿದ ಘಟನೆ ಆಂಧ್ರಪ್ರದೇಶದ ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ ರಾಜೋಳು ಕ್ಷೇತ್ರದ ಮಂಗೋಡಿಕುದುರು ಮಂಡಲದ ಗೆಡ್ಡೆದ-ನಗರಂ ಗ್ರಾಮಗಳ ಬಳಿಯ ತಡಿವರಿಮೆರಕ ಗ್ರಾಮದಲ್ಲಿ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಗಳ ಜನರ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ.
ಒಎನ್ಜಿಸಿ ಗ್ಯಾಸ್ ಸೋರಿಕೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅನಿಲ ಸೋರಿಕೆಯಾದ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಎಚ್ಚೆತ್ತ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ ವಿಷಾನಿಲದಿಂದ ಅನಾಹುತ ತಪ್ಪಿಸಲು ಸೋರಿಕೆಯಾದ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆಯೂ ಸಮರೋಪಾದಿಯಲ್ಲಿ ನಡೆದಿದೆ.
ಒಎನ್ಜಿಸಿ ಅನಿಲ ಸೋರಿಕೆ ದುರಂತ: ಗ್ರಾಮಗಳಿಗೆ ಎಚ್ಚರಿಕೆ:
ಅನಿಲ ಸೋರಿಕೆಯಾಗಿರುವ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಆದೇಶಿಸಿರುವ ಹಿನ್ನೆಲೆ ಅಧಿಕಾರಿಗಳೇ ಮುಂದಾಗಿ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮುಂದುವರಿದಿದೆ.. ಅನಿಲ ಪೀಡಿತ ಪ್ರದೇಶದ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ವಿದ್ಯುತ್ ದೀಪಗಳು, ಮನೆಯಲ್ಲಿನ ಲ್ಯಾಂಪ್ ಅಥವಾ ದೀಪಗಳು, ಅದಕ್ಕೆ ಸಂಬಂಧಿಸಿದ ಉಪಕರಣಗಳು ಬಳಸದಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ನಡುವೆ ONGC ಅಧಿಕಾರಿಗಳು ಸ್ಥಳದಲ್ಲಿ ಅನಿಲ ಸೋರಿಕೆಯನ್ನು ನಿಯಂತ್ರಣಕ್ಕೆ ತರಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡಿದ್ದಾರೆ.










