ಪಾಕಿಸ್ತಾನದ ಉಗ್ರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಸೂದ್ ಅಜರ್ ಹೇಳಿಕೆ ನೀಡಿದ್ದು, ಆತ ಏನು ಹೇಳಿದ್ದಾನೆ ನೋಡಿ.

ನವದೆಹಲಿ: ಪಾಕಿಸ್ತಾನದ ಉಗ್ರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ತನ್ನ ಇಡೀ ಕುಟುಂಬವೇ ಸಾವಿಗೀಡಾಗಿದ್ದರೂ ಘಟನೆಗೆ ಸಂಬಂಧಿಸಿದಂತೆ ತನಗೆ ಯಾವುದೇ ವಿಷಾದವಾಗಲಿ, ಹತಾಶೆಯಾಗಲಿ ಇಲ್ಲ ಜೈಶ್ ಇ ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ ಹೇಳಿಕೆ ನೀಡಿದ್ದಾನೆ. ಭಾರತ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯಲ್ಲಿ 56 ವರ್ಷದ ಮಸೂದ್ ಅಜರ್ ಕುಟುಂಬದ 10 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಭಾರತದ ಆಪರೇಷನ್‌ ಸಿಂಧೂರ್ ಕಾರ್ಯಾಚರಣೆಯಲ್ಲಿ ತನ್ನ ಕುಟುಂಬದ 10 ಜನ ಹಾಗೂ ತನ್ನ ನಾಲ್ವರು ಸಹಾಯಕರು ಸಾವನ್ನಪ್ಪಿದ್ದಾರೆ ಎಂದು ಆತ ಹೇಳಿಕೆ ನೀಡಿದ್ದಾನೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಜೈಶ್ ಇ ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿದ್ದಾನೆ.

ಭಾರತದಲ್ಲಿ ನಡೆಸಿದ ಭಯೋತ್ಫಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ಮಸೂದ್ ಆಜರ್‌ನನ್ನು 1994 ರಲ್ಲಿ ಭಾರತದಲ್ಲಿ ಬಂಧಿಸಲಾಗಿತ್ತು. ಆದರೆ ನಂತರ ಏರ್ ಇಂಡಿಯಾ ಐಸಿ 814 ವಿಮಾನ ಹೈಜಾಕ್ ಮಾಡಿದ ನಂತರ ಒಪ್ಪಂದದ ಭಾಗವಾಗಿ ಈತನನ್ನು ಬಿಡುಗಡೆ ಮಾಡಲಾಗಿತ್ತು. ಇದಾದ ನಂತರ ಆತ ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ.

ಈಗ ಆತ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಬಹಾಲ್ಪುರದ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್‌ ನಲ್ಲಿದ್ದ ಜೆಇಎಂ ಉಗ್ರ ಸಂಘಟನೆಯ ಮುಖ್ಯ ಕಚೇರಿ ಮೇಲೆ ನಡೆದ ದಾಳಿಯಲ್ಲಿ ತನ್ನ ಹಿರಿಯ ಸೋದರಿ, ಆಕೆಯ ಪತಿ, ತನ್ನ ಅಳಿಯ ಹಾಗೂ ಆತನ ಪತ್ನಿ, ಹಾಗೂ ಸೊಸೆ ಹಾಗೂ ಅವರ ವಿಸ್ತೃತವಾದ ಕುಟುಂಬದ ಐವರು ಮಕ್ಕಳು ಸಾವನ್ನಪ್ಪಿದ್ದಾರೆ.

ಇಂದು ರಾತ್ರಿ ನನ್ನ ಕುಟುಂಬದ ಹತ್ತು ಸದಸ್ಯರು ಒಟ್ಟಿಗೆ ಈ ಸಂತೋಷವನ್ನು ಪಡೆದರು. ಐವರು ಮುಗ್ಧ ಮಕ್ಕಳು, ನನ್ನ ಅಕ್ಕ, ಅವರ ಪತಿ. ನನ್ನ ವಿದ್ವಾಂಸ ಫಜಿಲ್ ಭಂಜೆ (ಸೋದರಳಿಯ) ಮತ್ತು ಅವರ ಪತ್ನಿ ಮತ್ತು ನನ್ನ ಪ್ರೀತಿಯ ವಿದ್ವಾಂಸ ಫಜಿಲಾ (ಭಂಜಿ) ... ನನ್ನ ಪ್ರೀತಿಯ ಸಹೋದರ ಹುಜೈಫಾ ಮತ್ತು ಅವರ ತಾಯಿ. ಇನ್ನೂ ಇಬ್ಬರು ಆತ್ಮೀಯ ಸಹಚರರು ಕೊಲ್ಲಲ್ಲಪಟ್ಟಿದ್ದು, ಅವರು ಅಲ್ಲಾಹನ ಅತಿಥಿಗಳಾಗಿದ್ದಾರೆ ಎಂದು ಮಸೂದ್ ಅಜರ್‌ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ತನಗೆ ಯಾವುದೇ ವಿಷಾದ ಅಥವಾ ಹತಾಶೆ ಇಲ್ಲ, ಬದಲಿಗೆ, ನಾನು ಕೂಡ ಈ ಹದಿನಾಲ್ಕು ಸದಸ್ಯರ ಸಂತೋಷದ ಕಾರವಾನ್‌ಗೆ ಸೇರುತ್ತಿದ್ದೆ ಎಂದು ನನಗೆ ಮತ್ತೆ ಮತ್ತೆ ಅನಿಸುತ್ತಿದೆ ಎಂದು ಆತ ಹೇಳಿದ್ದಾನೆ. ಅವರು ಹೊರಡುವ ಸಮಯ ಬಂದಿತ್ತು, ಆದರೆ ಭಗವಂತ ಅವರನ್ನು ಕೊಲ್ಲಲಿಲ್ಲ ಎಂದು ಅಜರ್ ಹೇಳಿದ್ದು, ಅವರ ಅಂತ್ಯಕ್ರಿಯೆಯ ಪ್ರಾರ್ಥನೆಗೆ ಬರುವಂತೆ ಜನರನ್ನು ಆಹ್ವಾನಿಸಿದ್ದಾರೆ. 

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಹಣೆಪಟ್ಟಿ ಹೊತ್ತಿರುವ ಮಸೂದ್ ಅಜರ್, 2001 ರ ಭಾರತದ ಸಂಸತ್ತಿನ ಮೇಲಿನ ದಾಳಿ, 2008 ರ ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಭಯಾನಕ ಭಯೋತ್ಪಾದಕ ದಾಳಿಗಳ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ. ಈತ ಪಾಕಿಸ್ತಾನದಲ್ಲಿದ್ದಾನೆ ಎಂಬುದು ಬಹಿರಂಗ ರಹಸ್ಯವಾಗಿದ್ದರೂ, ಇಸ್ಲಾಮಾಬಾದ್ ಅವನ ಇರುವಿಕೆಯನ್ನು ಪದೇ ಪದೇ ನಿರಾಕರಿಸುತ್ತಲೇ ಬಂದಿದೆ. 

ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26ಪ್ರವಾಸಿಗರು ಪ್ರಾಣ ಬಿಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ನಿನ್ನೆ ರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳ ಮೇಲೆ 24 ಕ್ಷಿಪಣಿಗಳನ್ನು ಹಾರಿಸಿ ದಾಳಿ ಮಾಡಿದ್ದು, ಈ ಕಾರ್ಯಾಚರಣೆಯಲ್ಲಿ 70 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸರ್ಕಾರಿ ಮೂಲಗಳು ವರದಿ ಮಾಡಿವೆ. 

ಪಾಕಿಸ್ತಾನಿ ನಾಗರಿಕರ ಸಾವುನೋವಿಗೆ ಭಾರತೀಯ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ ಆದರೆ ನಾಗರಿಕರ ಸಾವುಗಳನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು. ಎಲ್ಲಾ ಗುರಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿತ್ತು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ನೇರವಾಗಿ ಸಂಬಂಧಿಸಿದ ಪ್ರದೇಶಗಳನ್ನೇ ಗುರುತಿಸಿ ದಾಳಿ ಮಾಡಲಾಗಿತ್ತು ಎಂದು ಭಾರತೀಯ ಭದ್ರತಾ ಪಡೆ ಮಾಹಿತಿ ನೀಡಿದೆ.