ಆಪರೇಷನ್ ಸಿಂಧೂರ್ ನಲ್ಲಿ ಜೈಶ್-ಎ-ಮೊಹಮ್ಮದ್ ನ ಮುಖ್ಯ ಕಚೇರಿಯನ್ನು ಭಾರತೀಯ ಪಡೆಗಳು ಧ್ವಂಸಗೊಳಿಸಿದವು. ದಾಳಿಗೂ ಮೊದಲು ಮತ್ತು ನಂತರದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭಾರತೀಯ ಭದ್ರತಾ ಪಡೆಗಳ ಆಪರೇಷನ್ ಸಿಂಧೂರ್ ದಾಳಿಗೂ ಮೊದಲು ಭಯೋತ್ಪಾದಕ ಸಂಘಟನೆ ಜೈಶ್ ಇ ಮೊಹಮ್ಮದ್ ಸಂಘಟನೆಯ ಐಷಾರಾಮಿ ಮುಖ್ಯ ಕಚೇರಿ ಹೇಗಿತ್ತು ಹಾಗೂ ದಾಳಿ ನಂತರ ಹೇಗಾಯ್ತು ಎಂಬ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.
ಪಾಕಿಸ್ತಾನದ ಬಹವಾಲ್‌ಪುರದಲ್ಲಿರುವ ಜೈಶ್ ಈ ಮೊಹಮ್ಮದ್ ಸಂಘಟನೆಯ ಮುಖ್ಯ ಕಚೇರಿ ಮರ್ಕಜ್ ಸುಭಾನ್ ಅಲ್ಲಾಹ್ ಸೇರಿದಂತೆ ಒಟ್ಟು 9 ಭಯೋತ್ಪಾದಕ ನೆಲೆಗಳನ್ನು ಭಾರತೀಯ ಸೇನೆ ಟಾರ್ಗೆಟ್ ಮಾಡಿ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಭಾರತದ ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.
25 ನಿಮಿಷ ನಡೆದ 24 ಕ್ಷಿಪಣಿಗಳ ದಾಳಿಯಲ್ಲಿ ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಅಜರ್ ಮಸೂದ್‌ನ ಕುಟುಂಬ ವಾಸವಿದ್ದ ಜೈಶ್ ಈ ಮೊಹಮ್ಮದ್ ಸಂಘಟನೆಯ ಮುಖ್ಯ ಕಚೇರಿ ಮರ್ಕಜ್ ಸುಭಾನ್ ಅಲ್ಲಾಹ್ ಮೇಲೆ ನಡೆದ ದಾಳಿಯಲ್ಲಿ ಆತನ ಕುಟುಂಬದ 10 ಜನರು ಸಾವನ್ನಪ್ಪಿದ್ದಾರೆ. ಆ ಮನೆಯ ಮೊದಲ ಹಾಗೂ ನಂತರದ ವೀಡಿಯೋ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕ್ಷಿಪಣಿ ದಾಳಿಯಿಂದ ಇಡೀ ಕಟ್ಟಡವೇ ಳೆಯುಳಿಕೆಯಾಗಿದೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ದೃಶ್ಯಾವಳಿಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಪ್ರಧಾನಿ ಮೋದಿ ಹಾಗೂ ಭಾರತದ ಸಶಸ್ತ್ರ ಪಡೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಪುಲ್ವಾಮಾ ಮತ್ತು ಭಾರತದ ವಿರುದ್ಧ ಇತರ ದಾಳಿಗಳನ್ನು ಆಯೋಜಿಸಿದ್ದ ಭಯೋತ್ಪಾದಕ ಕಾರ್ಖಾನೆ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಮರ್ಕಜ್ ಸುಭಾನ್ ಅಲ್ಲಾಹ್ ಈಗ ಧ್ವಂಸಗೊಂಡಿದೆ. ಆಪರೇಷನ್ ಸಿಂಧೂರ್ ಜೆಇಎಂನ ಕಾರ್ಯಾಚರಣೆಯ ಪ್ರಧಾನ ಕಚೇರಿಯನ್ನು ನಾಶಪಡಿಸುವ ಮೂಲಕ ಭಯೋತ್ಪಾದನೆಯ ಹೃದಯಭಾಗಕ್ಕೆ ನಿಖರವಾಗಿ ದಾಳಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಂದೇಶ ಸ್ಪಷ್ಟವಾಗಿದೆ. ಭಾರತವು ಭಯೋತ್ಪಾದನೆಗೆ ಅರ್ಥವಾಗುವ ಏಕೈಕ ಭಾಷೆಯಲ್ಲಿ ಉತ್ತರಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಧನ್ಯವಾದಗಳು ಎಂದು ತೇಜಸ್ವಿ ಸೂರ್ಯ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಹಣೆಪಟ್ಟಿ ಹೊತ್ತಿರುವ ಮಸೂದ್ ಅಜರ್, 2001 ರ ಭಾರತದ ಸಂಸತ್ತಿನ ಮೇಲಿನ ದಾಳಿ, 2008 ರ ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಭಯಾನಕ ಭಯೋತ್ಪಾದಕ ದಾಳಿಗಳ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ. ಈತ ಪಾಕಿಸ್ತಾನದಲ್ಲಿದ್ದಾನೆ ಎಂಬುದು ಬಹಿರಂಗ ರಹಸ್ಯವಾಗಿದ್ದರೂ, ಇಸ್ಲಾಮಾಬಾದ್ ಅವನ ಇರುವಿಕೆಯನ್ನು ಪದೇ ಪದೇ ನಿರಾಕರಿಸುತ್ತಲೇ ಬಂದಿದೆ.
ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26ಪ್ರವಾಸಿಗರು ಪ್ರಾಣ ಬಿಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ನಿನ್ನೆ ರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳ ಮೇಲೆ 24 ಕ್ಷಿಪಣಿಗಳನ್ನು ಹಾರಿಸಿ ದಾಳಿ ಮಾಡಿದ್ದು, ಈ ಕಾರ್ಯಾಚರಣೆಯಲ್ಲಿ 70 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸರ್ಕಾರಿ ಮೂಲಗಳು ವರದಿ ಮಾಡಿವೆ.
ಪಾಕಿಸ್ತಾನಿ ನಾಗರಿಕರ ಸಾವುನೋವಿಗೆ ಭಾರತೀಯ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ ಆದರೆ ನಾಗರಿಕರ ಸಾವುಗಳನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು. ಎಲ್ಲಾ ಗುರಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿತ್ತು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ನೇರವಾಗಿ ಸಂಬಂಧಿಸಿದ ಪ್ರದೇಶಗಳನ್ನೇ ಗುರುತಿಸಿ ದಾಳಿ ಮಾಡಲಾಗಿತ್ತು ಎಂದು ಭಾರತೀಯ ಭದ್ರತಾ ಪಡೆ ಮಾಹಿತಿ ನೀಡಿದೆ.


