ನವದೆಹಲಿ[ಜ.18]: ನಿರ್ಭಯಾ ಗ್ಯಾಂಗ್‌ರೇಪ್‌ ದೋಷಿಯೊಬ್ಬನ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡ ಕಾರಣ, ಜನವರಿ 22ರ ಬದಲು ಫೆಬ್ರವರಿ 1ಕ್ಕೆ ಗಲ್ಲುಶಿಕ್ಷೆ ಮರುನಿಗದಿ ಮಾಡಿ ದಿಲ್ಲಿ ಕೋರ್ಟ್‌ ಹೊಸ ಡೆತ್‌ ವಾರಂಟ್‌ ಹೊರಡಿಸಿದೆ. ಆದರೆ ಪ್ರಕರಣದ ದೋಷಿಗಳ ಮುಂದೆ ಕಾನೂನಿನ ಇನ್ನೂ ಕೆಲವು ಆಯ್ಕೆಗಳು ಇರುವ ಕಾರಣ, ಫೆ.1ಕ್ಕೂ ನೇಣು ಜಾರಿ ಅನುಮಾನ ಎನ್ನಲಾಗುತ್ತಿದೆ.

'ನಾನು ಬಾಲಾಪರಾಧಿ': ನೇಣು ತಪ್ಪಿಸಿಕೊಳ್ಳಲು ನಿರ್ಭಯಾ ರೇಪಿಸ್ಟ್ ಪವನ್‌ ಹೊಸ ದಾಳ!

ನಾಲ್ವರು ಅಪರಾಧಿಗಳ ಪೈಕಿ ವಿನಯ್‌ ಶರ್ಮಾ ಹಾಗೂ ಮುಕೇಶ್‌ ಅವರ ಕ್ಯುರೇಟಿವ್‌ ಅರ್ಜಿಗಳು ಈಗಾಗಲೇ ತಿರಸ್ಕಾರಗೊಂಡಿವೆ. ಆದರೆ ಪವನ್‌ ಗುಪ್ತಾ ಹಾಗೂ ಅಕ್ಷಯ್‌ ಸಿಂಗ್‌ ಅವರು ಇನ್ನೂ ಕ್ಯುರೇಟಿವ್‌ ಅರ್ಜಿ ಸಲ್ಲಿಸಿಲ್ಲ. ಈ ಇಬ್ಬರ ಕ್ಯುರೇಟಿವ್‌ ಅರ್ಜಿಗಳನ್ನು ಸಲ್ಲಿಸಲು ಅವರ ವಕೀಲರು ಈಗ ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಈ ಅರ್ಜಿಯೇನಾದರೂ ಈಗ ಸಲ್ಲಿಕೆಯಾದರೆ ಅದು ಇತ್ಯರ್ಥ ಆಗುವ ತನಕ ಮುಂದಿನ ಪ್ರಕ್ರಿಯೆ ಬಗ್ಗೆ ಖಚಿತವಾಗಿ ಹೇಳಲು ಆಗುವುದಿಲ್ಲ.

ದೋಷಿಗಳ ಮುಂದೆ ಇರುವ ಇನ್ನೊಂದು ಆಯ್ಕೆಯೆಂದರೆ ಕ್ಷಮಾದಾನ ಅರ್ಜಿ. ಶುಕ್ರವಾರ ಮುಕೇಶ್‌ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ. ಈ ಹಿಂದೆ ವಿನಯ್‌ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ತಾನು ಸಹಿ ಹಾಕಿರಲಿಲ್ಲ ಎನ್ನುತ್ತಿದ್ದಾನೆ ಆತ. ಹೀಗಾಗಿ ವಿನಯ್‌ ಸೇರಿದರೆ ಇನ್ನೂ ಮೂವರ ಕ್ಷಮಾದಾನ ಅರ್ಜಿ ಸಲ್ಲಿಕೆ ಇನ್ನೂ ಬಾಕಿ ಉಳಿದಂತಾಗುತ್ತದೆ. ಕ್ಷಮಾದಾನ ಅರ್ಜಿ ಸಲ್ಲಿಕೆಯಾದರೆ, ಅದು ಇತ್ಯರ್ಥ ಆಗುವ ತನಕ ಗಲ್ಲು ಜಾರಿ ಅನುಮಾನ.

ಇನ್ನು ಡೆತ್‌ ವಾರಂಟ್‌ ವಿರುದ್ಧ ಮುಕೇಶ್‌ ಸಲ್ಲಿಸಿದ್ದ ಅರ್ಜಿ ಶುಕ್ರವಾರ ವಜಾ ಆಗಿದೆ. ಆದರೆ, ಇನ್ನೂ ಮೂವರು ಡೆತ್‌ ವಾರಂಟ್‌ ಮುಂದೂಡಿಕೆ ಪ್ರಶ್ನಿಸಿಲ್ಲ. ಹೀಗೆ ಒಟ್ಟು ಮೂರು ಅವಕಾಶಗಳು ದೋಷಿಗಳ ಮುಂದೆ ಇರುವ ಕಾರಣ, ಫೆಬ್ರವರಿ 1ರಂದು ನೇಣು ಜಾರಿ ಆಗಿಯೇ ತೀರುತ್ತದೆ ಎನ್ನಲಾಗದು ಎನ್ನುತ್ತಾರೆ ಕಾನೂನು ತಜ್ಞರು.

ಯೋಗ್ಯರಲ್ಲ ನೀವು ಬದುಕಲು: ಫೆ.1ರಂದು ಹತ್ಯಾಚಾರಿಗಳಿಗೆ ಗಲ್ಲು!

ಇದೇ ವೇಳೆ, ತಾನು ಕೃತ್ಯ ಎಸಗಿದಾಗ ಬಾಲಕನಾಗಿದ್ದೆ ಎಂದು ಪವನ್‌ ಹೊಸ ದಾಳ ಉರುಳಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾನೆ. ಇದು ವಿಚಾರಣೆಗೆ ಅಂಗೀಕಾರವಾದರೆ ಅರ್ಜಿ ಇತ್ಯರ್ಥದವರೆಗೆ ‘ನಿರ್ಭಯಾ ರಕ್ಕಸರು’ ನಿರಾಳ.