ಮಹಾರಾಷ್ಟ್ರದ ಬಾರಾಮತಿಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯು ಪವಾರ್‌ ಕುಟುಂಬದ ಜಿದ್ದಾಜಿದ್ದಿಗೆ ವೇದಿಕೆಯಾಗಿ ರೂಪುಗೊಂಡಿದೆ. ಇಲ್ಲಿ ಎನ್‌ಸಿಪಿ ಅಜಿತ್‌ ಬಣದಿಂದ ಅವರ ಪತ್ನಿ ಸುನೇತ್ರಾ ಸ್ಪರ್ಧಿಸುತ್ತಿದ್ದರೆ ಶರದ್‌ ಬಣದಿಂದ ಹಾಲಿ ಸಂಸದೆಯಾಗಿರುವ ಶರದ್‌ ಪುತ್ರಿ ಸುಪ್ರಿಯಾ ಸ್ಪರ್ಧಿಸುತ್ತಿದ್ದಾರೆ

ಪುಣೆ: ಮಹಾರಾಷ್ಟ್ರದ ಬಾರಾಮತಿಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯು ಪವಾರ್‌ ಕುಟುಂಬದ ಜಿದ್ದಾಜಿದ್ದಿಗೆ ವೇದಿಕೆಯಾಗಿ ರೂಪುಗೊಂಡಿದೆ. ರಾಜ್ಯದಲ್ಲಿ ನಡೆದ ಹಲವು ರಾಜಕೀಯ ಬದಲಾವಣೆಗಳ ಕಾರಣದಿಂದಾಗಿ ಇಬ್ಭಾಗವಾಗಿರುವ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಕುಟುಂಬ ಇಲ್ಲಿ ಸ್ಪರ್ಧೆ ನಡೆಸುತ್ತಿದೆ. ಎನ್‌ಸಿಪಿ ಅಜಿತ್‌ ಬಣದಿಂದ ಅವರ ಪತ್ನಿ ಸುನೇತ್ರಾ ಸ್ಪರ್ಧಿಸುತ್ತಿದ್ದರೆ ಶರದ್‌ ಬಣದಿಂದ ಹಾಲಿ ಸಂಸದೆಯಾಗಿರುವ ಶರದ್‌ ಪುತ್ರಿ ಸುಪ್ರಿಯಾ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವು ಮಹಾರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲ ಶಕ್ತಿ ಇರುವುದರಿಂದ ದೇಶದ ಗಮನ ಸೆಳೆಯುತ್ತಿದೆ.

ಹೇಗಿದೆ ಸುಪ್ರಿಯಾ ಪ್ರಚಾರ?

1984ರಿಂದಲೂ ಶರದ್‌ ಪವಾರ್‌ ಕುಟುಂಬದ ಭದ್ರಕೋಟೆಯಾಗಿರುವ ಬಾರಾಮತಿ ಕ್ಷೇತ್ರದಲ್ಲಿ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಕಳೆದ ಮೂರು ಬಾರಿಯಿಂದ ಸಂಸದೆಯಾಗಿದ್ದಾರೆ. ಕ್ಷೇತ್ರದಲ್ಲಿ ಜನತೆಯ ಜೊತೆಗೆ ಸಂಪರ್ಕವನ್ನಿಟ್ಟುಕೊಂಡು ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವ ಸುಪ್ರಿಯಾ, ಈ ಬಾರಿ ಅಜಿತ್ ಪವಾರ್‌ ಪಕ್ಷವನ್ನು ತ್ಯಜಿಸುವ ಮೂಲಕ ರಾಜ್ಯದ ಜನತೆಗೆ ಮಾಡಿರುವ ದ್ರೋಹವನ್ನು ಜನತಾ ನ್ಯಾಯಾಲಯದಲ್ಲಿ ತಿರಸ್ಕರಿಸಿ ಎಂದು ಭಾವನಾತ್ಮಕ ಅಸ್ತ್ರ ಪ್ರಯೋಗಿಸಿ ಮತ ಸೆಳೆಯುತ್ತಿದ್ದಾರೆ. ಆದರೆ ಚುನಾವಣಾ ಆಯೋಗವು ತಮ್ಮ ಪಕ್ಷದ ಚಿಹ್ನೆ ಮತ್ತು ಹೆಸರನ್ನು ಕಿತ್ತುಕೊಂಡು ಅಜಿತ್ ಬಣಕ್ಕೆ ನೀಡಿರುವುದು ಕೆಲವೊಂದಿಷ್ಟು ಸಾಂಪ್ರದಾಯಿಕ ಮತಗಳು ಗೊಂದಲದಿಂದ ವಿರೋಧಿ ಬಣಕ್ಕೆ ಹೋಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದರ ಜೊತೆಗೆ ತಮ್ಮ ಪ್ರತಿಸ್ಪರ್ಧಿ ಸುನೇತ್ರಾರನ್ನು ಕುಟುಂಬದ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಗುರಿ ಮಾಡಿ ಟೀಕೆ ಮಾಡುತ್ತಿರುವುದು ಅವರಿಗೆ ಮುಳುವಾಗುವ ಸಾಧ್ಯತೆಯಿದೆ.

ಅಚ್ಚರಿ ಅಭ್ಯರ್ಥಿಯಾದ ಸುನೇತ್ರಾ?

ಕಳೆದ ಲೋಕಸಭಾ ಚುನಾವಣೆಯವರೆಗೂ ಸುಪ್ರಿಯಾ ಪರ ಪ್ರಚಾರ ಮಾಡುತ್ತಿದ್ದ ಸುನೇತ್ರಾ ಈ ಬಾರಿ ಅವರ ವಿರುದ್ಧ ಅಚ್ಚರಿ ರೀತಿಯಲ್ಲಿ ಪ್ರತಿಸ್ಪರ್ಧಿಯಾಗಿದ್ದಾರೆ. ರಾಜಕೀಯ ಸ್ಥಿತ್ಯಂತರದ ಪರಿಣಾಮವಾಗಿ ಅಜಿತ್‌ ಪವಾರ್‌ ಎನ್‌ಸಿಪಿಯನ್ನು ಬಹುಸಂಖ್ಯೆಯ ಶಾಸಕರೊಂದಿಗೆ ತೊರೆದು ಬಿಜೆಪಿ ಜೊತೆ ಕೈಜೋಡಿಸಿ ಉಪಮುಖ್ಯಮಂತ್ರಿಯಾದ ಬಳಿಕ ಅವರ ಬೆಂಬಲಿತ ಶಾಸಕರ ಕೂಟಕ್ಕೆ ಚುನಾವಣಾ ಆಯೋಗ ನಿಜವಾದ ಎನ್‌ಸಿಪಿ ಪಕ್ಷ ಎಂಬ ಮಾನ್ಯತೆ ನೀಡಿದೆ. ಜೊತೆಗೆ ಅವರು ತಮ್ಮ ಕುಟುಂಬದ ವಿರುದ್ಧವೇ ಸೆಡ್ಡು ಹೊಡೆದು ಬಿಜೆಪಿ ಸೇರಿರುವುದಕ್ಕೆ ತಮ್ಮ ಸ್ವಂತ ಕ್ಷೇತ್ರದಲ್ಲಿ ಮೊದಲ ಬಾರಿಗೆ ಜನತಾ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಜನತೆಗೆ ತಮ್ಮನ್ನೇ ಅಭ್ಯರ್ಥಿ ಎಂದು ಪರಿಗಣಿಸಿ ಮತ ಹಾಕುವಂತೆ ಭಾವನಾತ್ಮಕ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇಷ್ಟೇ ಅಲ್ಲದೆ 1991ರಲ್ಲಿ ಅಲ್ಪ ಕಾಲ ಇದೇ ಕ್ಷೇತ್ರದಿಂದ ಸಂಸದರಾಗಿರುವ ಅನುಭವದ ಜೊತೆಗೆ ಆಡಳಿತಾರೂಢ ಪಕ್ಷದ ಬಲವಿರುವುದು ಅವರ ಪತ್ನಿಯನ್ನು ಗೆಲುವಿನ ದಡ ಸೇರಿಸಬಲ್ಲದು ಎಂದು ಅಂದಾಜಿಸಲಾಗಿದೆ.

ಸ್ಪರ್ಧೆ ಹೇಗೆ?

ಬಾರಾಮತಿ ಕ್ಷೇತ್ರದಲ್ಲಿ ಕಳೆದೆರಡು ಬಾರಿ ಪ್ರಧಾನಿ ಮೋದಿ ಮತ್ತು ರಾಹುಲ್‌ ಗಾಂಧಿ ನಡುವಿನ ಚುನಾವಣೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಈ ಬಾರಿ ಅದು ಪವಾರ್‌ ಕುಟುಂಬದ ಸೆಣಸಾಟವಾಗಿ ಬದಲಾಗಿದೆ. ಸುಪ್ರಿಯಾ ಸುಳೆ ಸತತ ಮೂರು ಬಾರಿಯಿಂದ ಸಂಸದರಾಗಿ ಆಯ್ಕೆಯಾಗುತ್ತಿದ್ದರೂ, ಕೊನೆಯ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಕಡಿಮೆಯಾಗಿರುವುದು ಎಚ್ಚರಿಕೆ ಗಂಟೆಯಾಗಿದೆ. ಅಲ್ಲದೆ ಈ ಬಾರಿ ಎನ್‌ಸಿಪಿ ಪಕ್ಷ ಒಡೆದಿರುವುದರಿಂದ ಮತ ವಿಭಜನೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಒಂದೆಡೆ ತಮ್ಮ ಇಳಿವಯಸ್ಸಿನಲ್ಲಿ ಸ್ವಕ್ಷೇತ್ರದಲ್ಲಿ ಗೆಲ್ಲುವ ಮೂಲಕ ತಮ್ಮ ಬಲ ತೋರಿಸಲು ಶರದ್‌ ಕಾತರಿಸುತ್ತಿದ್ದರೆ ಮತ್ತೊಂದೆಡೆ ಕುಟುಂಬಕ್ಕೆ ಸೆಡ್ಡು ಹೊಡೆದುದು ಸರಿ ಎಂಬುದನ್ನು ಜನತಾ ನ್ಯಾಯಾಲಯದಲ್ಲಿ ಸಾಬೀತು ಮಾಡಲು ಅಳಿಯ ಅಜಿತ್‌ ಪವಾರ್‌ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

  • ಸ್ಟಾರ್‌ ಕ್ಷೇತ್ರ: ಬಾರಾಮತಿ
  • ವಿಧಾನಸಭಾ ಕ್ಷೇತ್ರಗಳು: 6
  • ರಾಜ್ಯ: ಮಹಾರಾಷ್ಟ್ರ
  • ಮತದಾನದ ದಿನ: ಮೇ 7
  • ಪ್ರಮುಖ ಅಭ್ಯರ್ಥಿಗಳು
  • ಎನ್‌ಸಿಪಿ (ಶರದ್‌): ಸುಪ್ರಿಯಾ ಸುಳೆ
  • ಎನ್‌ಸಿಪಿ (ಅಜಿತ್‌): ಸುನೇತ್ರಾ ಪವಾರ್‌
  • ಬಹುಜನ್‌ ಪಾರ್ಟಿ: ಮಹೇಶ್‌ ಸೀತಾರಾಂ ಭಾಗ್ವತ್‌
  • 2019ರ ಫಲಿತಾಂಶ
  • ಗೆಲುವು: ಸುಪ್ರಿಯಾ ಸುಳೆ - ಎನ್‌ಸಿಪಿ
  • ಸೋಲು: ಕಾಂಚನ್‌ ರಾಹುಲ್‌ ಕೌಲ್‌ - ಬಿಜೆಪಿ