ನವದೆಹಲಿ(ಫೆ.08): ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತದಾರರ ನಿರಾಸ ಪ್ರಕ್ರಿಯೆ ನಡುವೆಯೇ ರಾಜಕೀಯ ಪಕ್ಷಗಳು ಫೆ.11(ಮಂಗಳವಾರ)ರ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿವೆ.

ಸಂಜೆ ಆರು ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ.54.65ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮತದಾರರ ಈ ನಿರಸ ಪ್ರತಿಕ್ರಿಯೆ ಮೂರೂ ಪ್ರಮುಖ ಪಕ್ಷಗಳ ನಿದ್ದೆಗೆಡೆಸಿದೆ.

ಇನ್ನು ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೇ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಶುರುವಾಗಿದ್ದು, ಪ್ರಮುಖ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ದೆಹಲಿ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ.

ಎಲ್ಲಾ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಲಾಗಿದೆ.

ಇನ್ನು ಕಾಂಗ್ರೆಸ್’ಗೆ ಈ ಬಾರಿಯೂ ನಿರಾಸೆ ಕಾದಿದ್ದು, ದೆಹಲಿ ಚುನಾವಣೆ ದಂಗಲ್’ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ಮಾಡಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ.

ಆದರೆ ಚುನಾವಣೋತ್ತರ ಸಮೀಕ್ಷೆಗಳ ಅಂಕಿ ಸಂಖ್ಯೆಗಳನ್ನು ತಾವು ಒಪ್ಪುವುದಿಲ್ಲ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ತಿವಾರಿ, ಫೆ.11ರ ಫಲಿತಾಂಶದ ಬಳಿಕ ಬಿಜೆಪಿ ದೆಹಲಿಯಲ್ಲಿ ಅಧಿಕಾರ ಪಡೆಯವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಮುಗಿದ ದೆಹಲಿ ದಂಗಲ್: ರಾಜಧಾನಿ ಈಗ ಸಮೀಕ್ಷೆಗಳ ಜಂಗಲ್!

ಚುನಾವಣೋತ್ತರ ಫಲಿತಾಂಶಗಳು ಹೇಳುವಂತೆ ಆಪ್ ಮತ್ತೆ ಅಧಿಕಾರಕ್ಕೆ ಬರುವುದು ಸುಳ್ಳು ಎಂದಿರುವ ಮನೋಜ್ ತಿವಾರಿ, ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.