Young businessman death: ಪುತ್ತೂರಿನ ನೆಲ್ಯಾಡಿ ಮೂಲದ ಯುವ ಹೊಟೇಲ್ ಉದ್ಯಮಿ ಅಭಿಷೇಕ್ ಆಳ್ವ ಅವರು ಮೂಲ್ಕಿ ಸಮೀಪದ ಬಪ್ಪನಾಡು ಸೇತುವೆಯಿಂದ ಶಾಂಭವಿ ನದಿಗೆ ಹಾರಿ  ಸಾವಿಗೆ ಶರಣಾಗಿದ್ದಾರೆ.

ಶಾಂಭವಿ ನದಿಗೆ ಹಾರಿ ಯುವ ಉದ್ಯಮಿ ಸಾವಿಗೆ ಶರಣು

ಯುವ ಉದ್ಯಮಿಯೊಬ್ಬರು ಮೂಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಶಾಂಭವಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ಅಭಿಷೇಕ್ ಆಳ್ವ ಸಾವಿಗೆ ಶರಣಾದವರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಅಭಿಷೇಕ್ ಅವರು ತಿರುವೈಲ್ ಗುತ್ತು ಮನೆತನದ ಉದ್ಯಮಿ ನವೀನ್ ಆಳ್ವ ಅವರ ಪುತ್ರರಾಗಿದ್ದಾರೆ. ನವೆಂಬರ್‌ 6ರಿಂದಲೇ ನಾಪತ್ತೆಯಾಗಿದ್ದ ಅವರ ಶವ ಈಗ ಶಾಂಭವಿ ನದಿಯಲ್ಲಿ ಪತ್ತೆಯಾಗಿದೆ.

ಬಪ್ಪನಾಡು ಬಳಿ ನದಿಗೆ ಹಾರಿದ ಅಭಿಷೇಕ್ ಆಳ್ವ

ಪೊಲೀಸರ ಮಾಹಿತಿ ಪ್ರಕಾರ, ಅಭಿಷೇಕ್ ಆಳ್ವ ಅವರು ನವೆಂಬರ್ 6 ರಾತ್ರಿ ಮನೆಯಿಂದ ಹೊರಟು ಹೋಗಿದ್ದಾರೆ. ಮಗ ವಾಪಸ್ ಬಾರದ ಹಿನ್ನೆಲೆ ಅವರ ತಂದೆ ನವೀನ್ ಆಳ್ವ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡ ಪಡುಬಿದ್ರೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಬಪ್ಪನಾಡು ಸಮೀಪ ಸಿಸಿಟಿವಿ ಪರಿಶೀಲಿಸಿದಾಗ ಅವರ ಕಾರು ಪ್ರಯಾಣಿಸಿದ ದೃಶ್ಯಗಳು ರೆಕಾರ್ಡ್ ಆಗಿದ್ದವು. ನಂತರ ಅವರ ಕಾರು ಬಪ್ಪನಾಡು ಸಮೀಪದ ಸೇತುವೆ ಬಳಿ ಇರುವುದು ಪತ್ತೆಯಾಗಿದೆ. ನಂತರ ಮುಳುಗುತಜ್ಞ ಈಶ್ವರ್ ಮಲ್ಪೆ ಅವರನ್ನು ಸ್ಥಳಕ್ಕೆ ಕರೆಸಿ ಮಧ್ಯರಾತ್ರಿಯವರೆಗೂ ನದಿಯಲ್ಲಿ ಶೋಧ ನಡೆಸಲಾಗಿದೆ. ಆದರೆ ರಾತ್ರಿ ಅವರ ಶವ ಪತ್ತೆಯಾಗಿಲ್ಲ.

ನಂತರ ಇಂದು ಬೆಳಗ್ಗೆ ಸ್ಥಳೀಯ ಯುವಕ ಸಚಿನ್ ನಾಯಕ್ ಎಂಬುವವರು ಬೋಟ್‌ನಲ್ಲಿ ನದಿಯಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಚಂದ್ರ ಶಾನುಭಾಗರ ಕುದ್ರು ಬಳಿ ಅಭಿಷೇಕ್ ಶವ ಪತ್ತೆಯಾಗಿದೆ. ನಂತರ ಶವವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿಗೆ ಏನೂ ಕಾರಣ ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಈ ಸಂಬಂಧ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ಅವರು ತಿರುವೈಲ್ ಗುತ್ತು ಕಂಬಳದಲ್ಲಿ ಗುರುತಿಸಿಕೊಂಡಿದ್ದರು. ತಂದೆಯ ಉದ್ಯಮವನ್ನು ಇವರೇ ನೋಡಿಕೊಂಡಿದ್ದರು.

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777

ಇದನ್ನೂ ಓದಿ: ನಿಮ್ಮ ಮಗನ ತಪ್ಪಿಲ್ಲ ದು:ಖಿಸಬೇಡಿ: ಅಪಘಾತಕ್ಕೀಡಾದ ಅಹ್ಮದಾಬಾದ್ ವಿಮಾನದ ಪೈಲಟ್‌ನ ತಂದೆಗೆ ಸುಪ್ರೀಂಕೋರ್ಟ್ ಸಾಂತ್ವಾನ

ಇದನ್ನೂ ಓದಿ: ಕಂಬಳಿ ಕೇಳಿದ್ದಕ್ಕೆ ಯೋಧನನ್ನೇ ಚೂರಿಯಿಂದ ಇರಿದು ಕೊಂದ ಕೋಚ್ ಅಟೆಂಡೆಂಟ್ ಜುಬೇರ್