4th Monkeypox Case in India: ವಿದೇಶಕ್ಕೇ ಹೋಗದ ವ್ಯಕ್ತಿಗೆ ಬಂತು ಮಂಕಿಪಾಕ್ಸ್‌..!

ದೇಶದಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು 4ಕ್ಕೆ ಏರಿಕೆಯಾಗಿದೆ. ಹಾಗೆ, ದೆಹಲಿಯಲ್ಲಿ ದಾಖಲಾಗಿರುವ ಮೊದಲ ಮಂಕಿಪಾಕ್ಸ್ ಪ್ರಕರಣ ಇದಾಗಿದೆ.

man with no history of foreign travel tests positive for monkeypox in delhi

ದೇಶದಲ್ಲಿ ಮಂಕಿ ಪಾಕ್ಸ್‌ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಹೊಸದಿಲ್ಲಿಯಲ್ಲಿ ಮಂಕಿಪಾಕ್ಸ್‌ ಬಂದಿರುವುದು ದೃಢಪಟ್ಟಿದೆ. ಈವರೆಗೆ ಕೇರಳದಲ್ಲಿ ಮಾತ್ರ ದೇಶದ ಮೂರು ಮಮಕಿಪಾಕ್ಸ್‌ ಪ್ರಕರಣಗಳು ಕಂಡುಬಂದಿದ್ದವು. ಆದರೀಗ ದೆಹಲಿ ನಿವಾಸಿಗೆ ಮಂಕಿಪಾಕ್ಸ್‌ ಬಂದಿದ್ದು, ಈ ಹಿನ್ನೆಲೆ ರಾಷ್ಟ್ರ ರಾಜಧಾನಿಯ ಜನತೆಗೆ ಆತಂಕ ತಂದಿರುವುದಂತೂ ನಿಜ.

ದೆಹಲಿಯ 34 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್‌ ವೈರಸ್‌ ಬಂದಿರುವುದು ದೃಢಪಟ್ಟಿದೆ ಎಂದು ಭಾನುವಾರ ಅಧಿಕರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಅಚ್ಚರಿಯೆಂದರೆ ಈ ವ್ಯಕ್ತಿಗೆ ಯಾವುದೇ ಇತರೆ ದೇಶಗಳಿಗೆ ಪ್ರಯಾಣ ಬೆಳೆಸಿರುವ ಇತಿಹಾಸವೇ ಇಲ್ಲ ಎಂಬುದು ಆರೋಗ್ಯ ಅಧಿಕಾರಿಗಳಿಗೇ ಅಚ್ಚರಿ ತಂದಿದೆ. ಈ ಪ್ರಕರಣದ ಬಳಿಕ ದೇಶದಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು 4ಕ್ಕೆ ಏರಿಕೆಯಾಗಿದೆ. ಹಾಗೆ, ದೆಹಲಿಯಲ್ಲಿ ದಾಖಲಾಗಿರುವ ಮೊದಲ ಮಂಕಿಪಾಕ್ಸ್ ಪ್ರಕರಣ ಇದಾಗಿದೆ. ದೆಹಲಿಯ ಈ ವ್ಯಕ್ತಿ ಇತ್ತೀಚೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಸ್ಟ್ಯಾಗ್‌ ಪಾರ್ಟಿಗೆ ತೆರಳಿದ್ದರೂ ಎಂದೂ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಮಂಕಿಪಾಕ್ಸ್‌ ಈಗ ಜಾಗತಿಕ ತುರ್ತು: ಭಾರತ ಸೇರಿ 74 ದೇಶದಲ್ಲಿ 16,000 ಕೇಸ್‌

34 ವರ್ಷದ ವ್ಯಕ್ತಿ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು, ಇವರನ್ನು ದೆಹಲಿಯ ಮೌಲಾನಾ ಆಜಾದ್ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಕಳೆದ 3 ದಿನಗಳ ಹಿಂದೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ. ಮಂಕಿಪಾಕ್ಸ್‌ ವೈರಾಣುವಿನ ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ನಂತರ ಅವರ ಸ್ಯಾಂಪಲ್ಸ್‌ ಅನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ)ಗೆ ಕಳಿಸಲಾಗಿತ್ತು. ಶನಿವಾರ ಬಂದಿರುವ ಆ ಸ್ಯಾಂಪಲ್ಸ್‌ ವರದಿಯಲ್ಲಿ ಅವರಿಗೆ ಮಂಕಿಪಾಕ್ಸ್‌ ವೈರಾಣು ತಗುಲಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ,ಈ ವ್ಯಕ್ತಿಯ ಸಂಪರ್ಕಿತರನ್ನು ಪತ್ತೆಹಚ್ಚಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. 

ಮಂಕಿಪಾಕ್ಸ್‌ ಜಾಗತಿಕ ಆರೋಗ್ಯ ತುರ್ತುಸ್ಥಿತಿ: ವಿಶ್ವ ಆರೋಗ್ಯಸಂಸ್ಥೆ
ಮಂಕಿಪಾಕ್ಸ್ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ಘೋಷಿಸಿದೆ.ಜಾಗತಿಕವಾಗಿ,75 ದೇಶಗಳಿಂದ 16,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಮತ್ತು ಏಕಾಏಕಿ ಇದುವರೆಗೆ ಐದು ಸಾವುಗಳು ಸಂಭವಿಸಿವೆ.ಇನ್ನು,ಆಗ್ನೇಯ ಏಷ್ಯಾ ಪ್ರದೇಶದಲ್ಲಿ, ಭಾರತವನ್ನು ಹೊರತುಪಡಿಸಿ, ಥೈಲ್ಯಾಂಡ್‌ನಿಂದ ಒಂದು ಪ್ರಕರಣ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯಸಂಸ್ಥೆ ಮಾಹಿತಿ ನೀಡಿದೆ.

ಭಾರತ ಸೇರಿ 74 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ವ್ಯಾಧಿಯನ್ನು ‘ಜಾಗತಿಕ ತುರ್ತು ಪರಿಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶನಿವಾರ ಘೋಷಿಸಿದೆ. ಡಬ್ಲ್ಯುಎಚ್‌ಒ ತುರ್ತು ಸಮಿತಿಯ ಸದಸ್ಯರ ಒಮ್ಮತದ ಕೊರತೆಯ ನಡುವೆಯೇ ಮಹಾ ನಿರ್ದೇಶಕ ಟೆಡ್ರೋಸ್‌ ಅಧಾನೋಮ್‌ ಘೆಬ್ರೆಯೆಸೆಸ್‌ ಅವರು ಘೋಷಣೆ ಮಾಡಿದ್ದಾರೆ. ಡಬ್ಲ್ಯುಎಚ್‌ಒ ಮುಖ್ಯಸ್ಥರು ಒಮ್ಮತದ ಕೊರತೆ ನಡುವೆ ಮಹತ್ವದ ನಿರ್ಧಾರ ಪ್ರಕಟಿಸಿದ್ದು ಇದೇ ಮೊದಲು.

‘ಮಂಕಿಪಾಕ್ಸ್‌ ಸೋಂಕು ಜಗತ್ತಿನ ವಿವಿದ ರಾಷ್ಟ್ರಗಳಲ್ಲಿ ವೇಗವಾಗಿ, ಬೇರೆ ಬೇರೆ ವಿಧಾನಗಳ ಮೂಲಕ ಹರಡುತ್ತಿದೆ. ದಶಕಗಳಿಂದಲೂ ಕೇಂದ್ರ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತಿದ್ದ ಮಂಕಿಪಾಕ್ಸ್‌, ಮೇ ತಿಂಗಳ ನಂತರ ಯುರೋಪ್‌, ಉತ್ತರ ಅಮೆರಿಕ ಸೇರಿದಂತೆ ಜಗತ್ತಿನ ವಿವಿಧ ಭಾಗದಲ್ಲಿ ಪತ್ತೆಯಾಗುತ್ತಿದೆ. ಆದರೆ ಇದರ ಬಗ್ಗೆ ನಮಗೆ ತಿಳಿದಿರುವ ಮಾಹಿತಿ ಅತ್ಯಂತ ಅಲ್ಪವಾಗಿದೆ. ದಶಕಗಳ ಹೀಗಾಗಿ ಇದು ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆಯ ‘ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳಲ್ಲಿನ ಮಾನದಂಡ’ವನ್ನು ಪೂರೈಸುತ್ತದೆ’ ಎಂದು ಟೆಡ್ರೋಸ್‌ ಹೇಳಿದ್ದಾರೆ.

ಇಡೀ ದೇಶಕ್ಕೇ ವ್ಯಾಪಿಸುತ್ತಾ ಮಂಕಿಪಾಕ್ಸ್‌? ICMR ವಿಜ್ಞಾನಿ ಹೇಳಿದ್ದೇನು?

ಮಂಕಿಪಾಕ್ಸ್ ವೈರಸ್ ಹೇಗೆ ಹರಡುತ್ತದೆ..?
ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಪರೋಕ್ಷ ಅಥವಾ ನೇರ ಸಂಪರ್ಕದ ಮೂಲಕ ಹರಡುತ್ತದೆ. ಮುಖಾಮುಖಿ, ಚರ್ಮದಿಂದ ಚರ್ಮ ಮತ್ತು ಉಸಿರಾಟದ ದ್ರವ ಸೇರಿದಂತೆ ಸಾಂಕ್ರಾಮಿಕ ಚರ್ಮ ಅಥವಾ ಗಾಯಗಳೊಂದಿಗೆ ನೇರ ಸಂಪರ್ಕದ ಮೂಲಕ ಒಬ್ಬರು ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವಿಕೆ ಸಂಭವಿಸಬಹುದು. 

Latest Videos
Follow Us:
Download App:
  • android
  • ios