ಮಂಕಿಪಾಕ್ಸ್ ಈಗ ಜಾಗತಿಕ ತುರ್ತು: ಭಾರತ ಸೇರಿ 74 ದೇಶದಲ್ಲಿ 16,000 ಕೇಸ್
ಮಂಕಿಪಾಕ್ಸ್ ಸೋಂಕು ಜಗತ್ತಿನ ವಿವಿದ ರಾಷ್ಟ್ರಗಳಲ್ಲಿ ವೇಗವಾಗಿ, ಬೇರೆ ಬೇರೆ ವಿಧಾನಗಳ ಮೂಲಕ ಹರಡುತ್ತಿದೆ
ಜಿನೇವಾ(ಜು.24): ಭಾರತ ಸೇರಿ 74 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ವ್ಯಾಧಿಯನ್ನು ‘ಜಾಗತಿಕ ತುರ್ತು ಪರಿಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶನಿವಾರ ಘೋಷಿಸಿದೆ. ಡಬ್ಲ್ಯುಎಚ್‌ಒ ತುರ್ತು ಸಮಿತಿಯ ಸದಸ್ಯರ ಒಮ್ಮತದ ಕೊರತೆಯ ನಡುವೆಯೇ ಮಹಾ ನಿರ್ದೇಶಕ ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸೆಸ್ ಅವರು ಘೋಷಣೆ ಮಾಡಿದ್ದಾರೆ. ಡಬ್ಲ್ಯುಎಚ್‌ಒ ಮುಖ್ಯಸ್ಥರು ಒಮ್ಮತದ ಕೊರತೆ ನಡುವೆ ಮಹತ್ವದ ನಿರ್ಧಾರ ಪ್ರಕಟಿಸಿದ್ದು ಇದೇ ಮೊದಲು.
‘ಮಂಕಿಪಾಕ್ಸ್ ಸೋಂಕು ಜಗತ್ತಿನ ವಿವಿದ ರಾಷ್ಟ್ರಗಳಲ್ಲಿ ವೇಗವಾಗಿ, ಬೇರೆ ಬೇರೆ ವಿಧಾನಗಳ ಮೂಲಕ ಹರಡುತ್ತಿದೆ. ದಶಕಗಳಿಂದಲೂ ಕೇಂದ್ರ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತಿದ್ದ ಮಂಕಿಪಾಕ್ಸ್, ಮೇ ತಿಂಗಳ ನಂತರ ಯುರೋಪ್, ಉತ್ತರ ಅಮೆರಿಕ ಸೇರಿದಂತೆ ಜಗತ್ತಿನ ವಿವಿಧ ಭಾಗದಲ್ಲಿ ಪತ್ತೆಯಾಗುತ್ತಿದೆ. ಆದರೆ ಇದರ ಬಗ್ಗೆ ನಮಗೆ ತಿಳಿದಿರುವ ಮಾಹಿತಿ ಅತ್ಯಂತ ಅಲ್ಪವಾಗಿದೆ. ದಶಕಗಳ ಹೀಗಾಗಿ ಇದು ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆಯ ‘ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳಲ್ಲಿನ ಮಾನದಂಡ’ವನ್ನು ಪೂರೈಸುತ್ತದೆ’ ಎಂದು ಟೆಡ್ರೋಸ್ ಹೇಳಿದ್ದಾರೆ.
ಮಂಕಿಪಾಕ್ಸ್ ಪತ್ತೆಗೆ ಏರ್ಪೋರ್ಟ್, ಬಂದರಲ್ಲೇ ಪರೀಕ್ಷೆ ನಡೆಸಿ: ತಜ್ಞರು
16 ಸಾವಿರ ಕೇಸು, 5 ಸಾವು:
ಈವರೆಗೆ ಭಾರತದಲ್ಲಿ 3 ಕೇಸು ಸೇರಿದಂತೆ ಒಟ್ಟಾರೆ ಜಗತ್ತಿನಲ್ಲಿ 16,000ಕ್ಕೂ ಹೆಚ್ಚು ಮಂಕಿಪಾಕ್ಸ್ ಕೇಸುಗಳು 74 ದೇಶಗಳಲ್ಲಿ ಪತ್ತೆಯಾಗಿವೆ. ಈವರೆಗೆ ಮಂಕಿಪಾಕ್ಸ್‌ನಿಂದಾಗಿ 5 ಜನರು ಮೃತಪಟ್ಟಿದ್ದಾರೆ.
ಹೇಗೆ ಹಬ್ಬುತ್ತದೆ?:
ಹೆಚ್ಚಾಗಿ ಆಫ್ರಿಕಾದಲ್ಲಿ ಪ್ರಾಣಿಗಳಿಗೆ ಮಾನವರಿಗೆ ತಗಲುತ್ತಿದ್ದ ಸೋಂಕು ಮಂಕಿಪಾಕ್ಸ್. ಇದು ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಹರಡುತ್ತದೆ. ಸಿಡುಬಿನ ಲಕ್ಷಣಗಳನ್ನೇ ಇದು ಹೊಂದಿದೆ. ಮಂಕಿಪಾಕ್ಸ್ ಸೋಂಕಿತರ ಸಂಪರ್ಕಕ್ಕೆ ಬರುವವರಿಗೆ ಈ ಸೋಂಕು ಹರಡುತ್ತದೆ. ಸೋಂಕಿತರು ಸೀನಿದಾಗ, ಅವರನ್ನು ಮುಟ್ಟಿದಾಗ, ಅವರು ಮುಟ್ಟಿದ ವಸ್ತುಗಳನ್ನು ಬಳಸಿದಾಗ ಈ ಸೋಂಕು ತಗಲುತ್ತದೆ.
ಇಡೀ ದೇಶಕ್ಕೇ ವ್ಯಾಪಿಸುತ್ತಾ ಮಂಕಿಪಾಕ್ಸ್? ICMR ವಿಜ್ಞಾನಿ ಹೇಳಿದ್ದೇನು?
ಈ ಹಿಂದಿನ ಆರೋಗ್ಯ ತುರ್ತುಸ್ಥಿತಿಗಳು
ಈ ಮೊದಲು ಕೋವಿಡ್-19 ಸಾಂಕ್ರಾಮಿಕ, ಪಶ್ಚಿಮ ಆಫ್ರಿಕಾದಲ್ಲಿ ಎಬೋಲಾ ಹರಡುವಿಕೆ (2014), ಲ್ಯಾಟಿನ್ ಅಮೆರಿಕದಲ್ಲಿ ಝೀಕಾ ವೈರಸ್ ಸ್ಫೋಟ (2016) ಅನ್ನು ಡಬ್ಲ್ಯುಎಚ್‌ಒ ತುರ್ತು ಪರಿಸ್ಥಿತಿ ಎಂದು ಘೋಷಿಸಿತ್ತು.
ತುರ್ತುಸ್ಥಿತಿ ಯಾಕೆ?
ಮಂಕಿಪಾಕ್ಸ್ ಜಾಗತಿಕ ತುರ್ತು ಪರಿಸ್ಥಿತಿ ಎಂದು ಘೋಷಿಸುವುದರ ಅರ್ಥ- ಸೋಂಕು ಇನ್ನಷ್ಟುರಾಷ್ಟ್ರಗಳಿಗೆ ಹರಡುವ ಭೀತಿಯಿದ್ದು, ಜಾಗತಿಕ ಸಮುದಾಯ ರೋಗ ಹರಡುವಿಕೆ ನಿಯಂತ್ರಣಕ್ಕೆ ಸಂಘಟಿತ ಪ್ರಯತ್ನ ಮಾಡುವುದು ಅಗತ್ಯವಾಗಿದೆ ಎಂದಾಗಿದೆ. ತುರ್ತು ಪರಿಸ್ಥಿತಿ ಘೋಷಣೆಯು ಮಂಕಿಪಾಕ್ಸ್ ವೈರಸ್ ಅಧ್ಯಯನ ಹಾಗೂ ಲಸಿಕೆ ಸಂಶೋಧನೆಗೆ ಹೆಚ್ಚಿನ ಸಂಪನ್ಮೂಲಗಳ ಆಕರ್ಷಣೆಗೆ ನೆರವಾಗುತ್ತದೆ.