ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಯನ್ನು ತಬ್ಬಿಕೊಂಡ ಅಭಿಮಾನಿ: ತಳ್ಳಿದ ಕಾಂಗ್ರೆಸ್ ಕಾರ್ಯಕರ್ತರು
ಅಲ್ಲದೆ, ಕಾಂಗ್ರೆಸ್ ಪಕ್ಷ ಸಹ ಯಾವುದೇ ಭದ್ರತೆಯ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದು, ಜನರು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮುಂದುವರಿದಿದ್ದು, ಸದ್ಯ ಪಂಜಾಬ್‌ನಲ್ಲಿದೆ. ಈ ವೇಳೆ, ಮಂಗಳವಾರ ಹೋಶಿಯಾರ್‌ಪುರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿಯನ್ನು ಅಪ್ಪಿಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧದ ವಿಡಿಯೋ ಸಹ ವೈರಲ್ ಆಗಿದೆ. ಆದರೆ ಆ ವ್ಯಕ್ತಿಯನ್ನು ಕಾಂಗ್ರೆಸ್ ನಾಯಕರು ತಳ್ಳಿದ್ದಾರೆ. ಆದರೆ, ಯಾವುದೇ ಭದ್ರತಾ ಉಲ್ಲಂಘನೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷ ಸಹ ಯಾವುದೇ ಭದ್ರತೆಯ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದು, ಜನರು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಯಸುತ್ತಾರೆ ಮತ್ತು ಅವರೇ ಜನರನ್ನು ಸ್ವಾಗತಿಸಿದರು. ಭದ್ರತಾ ತಪಾಸಣೆಯ ನಂತರ ವ್ಯಕ್ತಿ ಅವರ ಬಳಿಗೆ ಬಂದು ಮತ್ತು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಉತ್ಸುಕರಾಗಿದ್ದರು. ಆದ್ದರಿಂದ ಇದ್ದಕ್ಕಿದ್ದಂತೆ ರಾಹುಲ್ ಗಾಂಧಿಯನ್ನು ತಬ್ಬಿಕೊಂಡರು" ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಹೇಳಿದ್ದಾರೆ.
ಈ ಘಟನೆಯ ವಿಡಿಯೋದಲ್ಲಿ, ಜಾಕೆಟ್ ಧರಿಸಿದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಸಂಸದರ ಕಡೆಗೆ ಧಾವಿಸಿ ಅವರನ್ನು ಮುಂದಿನಿಂದ ತಬ್ಬಿಕೊಂಡಿರುವುದನ್ನು ನೋಡಬಹುದು. ಆದರೆ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಇತರ ಪಕ್ಷದ ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ತಬ್ಬಿಕೊಳ್ಳಲು ಹೋದ ವ್ಯಕ್ತಿಯನ್ನು ತಡೆದು ಆತನನ್ನು ದೂರ ತಳ್ಳಿದರು ಎಂದು ತಿಳಿದುಬಂದಿದೆ.
ಇದನ್ನು ಓದಿ: ಜನವರಿ 30 ರಂದು ಶ್ರೀನಗರದಲ್ಲಿ ಭಾರತ್ ಜೋಡೋ ಸಮಾರೋಪ: 21 ಪಕ್ಷಕ್ಕೆ ಆಹ್ವಾನ
ಇನ್ನು, ರಾಹುಲ್ ಗಾಂಧಿ ಸುತ್ತಮುತ್ತ ಭದ್ರತಾ ಪೆಟ್ಟಿಗೆಯನ್ನು ಪ್ರವೇಶಿಸಲು ಯಾರನ್ನೂ ಬಿಡುವುದಿಲ್ಲ ಎಂದೂ ಹೋಶಿಯಾರ್‌ಪುರದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಜಿ.ಎಸ್ ಧಿಲ್ಲೋನ್ ಹೇಳಿದ್ದಾರೆ. ನಾವು ಎಲ್ಲರನ್ನೂ ಮೆಟಲ್ ಡಿಕೆಕ್ಟರ್‌ನಿಂದ ಪರಿಶೀಲಿಸುತ್ತೇವೆ. ಈ ಹಿನ್ನೆಲೆ, ಭದ್ರತಾ ಉಲ್ಲಂಘನೆ ಎಂದು ಹೇಳಬಹುದಾದ ಯಾವ ಘಟನೆಯನ್ನೂ ಇಲ್ಲಿಯವರೆಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಸುದ್ದಿಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ.
ಕಾಂಗ್ರೆಸ್ ಕಳೆದ ತಿಂಗಳು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಭದ್ರತಾ ಉಲ್ಲಂಘನೆ ಎಂದು ಆರೋಪಿಸಿತ್ತು ಮತ್ತು ಯಾತ್ರೆಯಲ್ಲಿ ಭಾಗವಹಿಸುವ ರಾಹುಲ್ ಗಾಂಧಿ ಹಾಗೂ ಇತರರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ಒತ್ತಾಯಿಸಿತ್ತು. ಆದರೆ, ಈ ಆರೋಪಗಳನ್ನು ತಳ್ಳಿಹಾಕಿದ್ದ ಕೇಂದ್ರ ಸರ್ಕಾರವು ರಾಹುಲ್ ಗಾಂಧಿಗೆ ಸಂಪೂರ್ಣ ಭದ್ರತಾ ವ್ಯವಸ್ಥೆಗಳನ್ನು ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಾಡಲಾಗಿದೆ. ಆದರೆ ಅವರು ಸ್ವತಃ 2020 ರಿಂದ 113 ಬಾರಿ ಭದ್ರತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿರುಗೇಟು ನೀಡಿತ್ತು.
ಇದನ್ನೂ ಓದಿ: ಚಳಿ ತಡೆಗೆ ಟೀಶರ್ಟ್‌ನೊಳಗೆ ಥರ್ಮಲ್ಸ್ ಬಳಕೆ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರ ಟೀಕೆ
ಭಾರತ್ ಜೋಡೋ ಯಾತ್ರೆಯು ಮಂಗಳವಾರ ಬೆಳಗ್ಗೆ ಪಂಜಾಬ್‌ನಲ್ಲಿ ಕೊರೆಯುವ ಚಳಿಯ ನಡುವೆಯೂ ಪುನಾರಂಭವಾಯಿತು. ಮುಕೇರಿಯನ್‌ನ ಎಂಬ ಪ್ರದೇಶದವರೆಗೆ ಇಂದಿನ ಯಾತ್ರೆ ನಡೆಯುತ್ತದೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ನಡಿಗೆ, ಜನವರಿ 30 ರೊಳಗೆ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದ್ದು, ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿಯಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದು ಇಲ್ಲಿಯವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರ್ಯಾಣವನ್ನು ಒಳಗೊಂಡಿದೆ. ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ನಿಧನದ ಹಿನ್ನೆಲೆಯಲ್ಲಿ ಶನಿವಾರ 24 ಗಂಟೆಗಳ ಕಾಲ ಮೆರವಣಿಗೆಯನ್ನು ಸ್ಥಗಿತಗೊಳಿಸಲಾಗಿತ್ತು. ಭಾರತ್ ಜೋಡೋ ಯಾತ್ರೆ ವೇಳೆ ಸಂಸದರಿಗೆ ಹೃದಯಾಘಾತವಾಗಿತ್ತು. ಬಳಿಕ, ಜಲಂಧರ್‌ನಲ್ಲಿ ಭಾನುವಾರ ಮಧ್ಯಾಹ್ನ ಮೆರವಣಿಗೆ ಪುನಾರಂಭಗೊಂಡಿತ್ತು ಅಲ್ಲದೆ,. ಲೋಹ್ರಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಭಾರತ್ ಜೋಡೋ ಯಾತ್ರೆಗೆ ವಿರಾಮ ನೀಡಲಾಗಿತ್ತು.
ಇದನ್ನು ಓದಿ: ಭಾರತ್ ಜೋಡೋ ಯಾತ್ರೆ ಪುನಾರಂಭ ಯುಪಿಯಲ್ಲಿ ರಾಹುಲ್‌ಗೆ ಭರ್ಜರಿ ಸ್ವಾಗತ