Man Eats Spoons:ದುಶ್ಚಟಗಳಿಗೆ ದಾಸನಾಗಿದ್ದ ವ್ಯಕ್ತಿಯೊಬ್ಬನನ್ನು ಆತನ ಮನೆಯವರು ವ್ಯಸನಮುಕ್ತ ಶಿಬಿರಕ್ಕೆ ಸೇರಿಸಿದ್ದರು. ಆದರೆ ಅಲ್ಲಿ ಆತನಗೆ ತೀವ್ರ ಹೊಟ್ಟೆನೋವು ಆಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ, ಸ್ಕ್ಯಾನಿಂಗ್ ಮಾಡಿದ ವೈದ್ಯರು ಒಳಗಿರೋದು ನೋಡಿ ಬೆಚ್ಚಿ ಬಿದ್ದಿದ್ದರು.
ವ್ಯಸನಮುಕ್ತ ಕೇಂದ್ರಕ್ಕೆ ಬಂದವನಿಗಿತ್ತು ಅಪರೂಪದ ವಿಲಕ್ಷಣ ವ್ಯಸನ
ದುಶ್ಚಟಗಳಿಗೆ ದಾಸನಾಗಿದ್ದ ವ್ಯಕ್ತಿಯೊಬ್ಬನನ್ನು ಆತನ ಮನೆಯವರು ವ್ಯಸನಮುಕ್ತ ಶಿಬಿರಕ್ಕೆ ಸೇರಿಸಿದ್ದರು. ಆದರೆ ಆತ ಅಲ್ಲಿ ಹೊಸ ಚಟವನ್ನು ಕಲಿತಿದ್ದ..! ಹೌದು ವ್ಯಸನಮುಕ್ತ ಕೇಂದ್ರಕ್ಕೆ ದಾಖಲಾಗಿದ್ದ ವ್ಯಕ್ತಿಯೊಬ್ಬನಿಗೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಕರೆದೊಯ್ದ ಕುಟುಂಬದವರಿಗೆ ಆಘಾತ ಕಾದಿತ್ತು. ಆತನ ಹೊಟ್ಟೆಯಲ್ಲಿ 29 ಸ್ಟೀಲ್ ಸ್ಪೂನ್‌ಗಳು, 19 ಹಲ್ಲುಜ್ಜುವ ಬ್ರಶ್, ಎರಡು ಪೆನ್ ಪತ್ತೆಯಾಗಿದ್ದವು..!
ಹೊಟ್ಟೆಯ ಸ್ಕ್ಯಾನ್ ಮಾಡಿದ ವೈದ್ಯರಿಗೆ ಆಘಾತ
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ವ್ಯಸನಮುಕ್ತ ಕೇಂದ್ರದಲ್ಲಿ ಸರಿಯಾಗಿ ಊಟ ನೀಡುತ್ತಿರಲಿಲ್ಲ, ಹೀಗಾಗಿ ಸಿಟ್ಟಿನಿಂದ ನಾನು ಸ್ಪೂನ್‌ಗಳನ್ನು ಹಲ್ಲುಜ್ಜುವ ಬ್ರಶ್‌ಗಳನ್ನು ನುಂಗಿ ನೀರು ಕುಡಿದೆ ಎಂದು ಆತ ಹೇಳಿದ್ದಾನೆ. ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡ ನಂತರ ಆಸ್ಪತ್ರೆಯಲ್ಲಿ ಈತನಿಗೆ ವೈದ್ಯರು ಸ್ಕ್ಯಾನಿಂಗ್ ಮಾಡಿದ್ದಾರೆ. ಮಾಡಿದಾಗ ಆತನ ಹೊಟ್ಟೆಯಲ್ಲಿ ಸ್ಪೂನ್ ಹಾಗೂ ಹಲ್ಲುಜ್ಜುವ ಬ್ರಶ್‌ಗಳ ರಾಶಿಯೇ ಸಿಕ್ಕಿದೆ.
ವ್ಯಸನಮುಕ್ತ ಕೇಂದ್ರದಲ್ಲಿ ಊಟ ಕೊಡ್ತಿರಲಿಲ್ಲ ಎಂದ ವೈದ್ಯ
ಹಾಪುರದ ನಿವಾಸಿ 35 ವರ್ಷದ ಸಚಿನ್ ಎಂಬಾತನೇ ಹೀಗೆ ಸ್ಪೂನ್ ಹಾಗೂ ಹಲ್ಲುಜ್ಜುವ ಬ್ರಶ್ ನುಂಗಿದಾತ. ಹಾಪುರದಲ್ಲಿರುವ ವ್ಯಸನಮುಕ್ತ ಶಿಬಿರಕ್ಕೆ ಆತನನ್ನು ಕುಟುಂಬದವರು ಸೇರಿಸಿದ್ದರು. ಆದರೆ ಅಲ್ಲಿ ಆತ ಸರಿಯಾಗಿ ಊಟ ಕೊಡುತ್ತಿಲ್ಲ ಎಂದು ದೂರುತ್ತಿದ್ದ. ಪುನರ್ವಸತಿ ಕೇಂದ್ರದಲ್ಲಿ ಸರಿಯಾಗಿ ಆಹಾರ ನೀಡುತ್ತಿರಲಿಲ್ಲ, ಇಡೀ ದಿನ ನಮಗೆ ಕೆಲವೇ ಸ್ವಲ್ಪವೇ ಸ್ವಲ್ಪ ತರಕಾರಿ ಹಾಗೂ ಕೆಲವು ಚಪಾತಿಗಳನ್ನು ನೀಡಲಾಗುತ್ತಿತ್ತು. ಒಂದು ವೇಳೆ ಕುಟುಂಬದವರು ನಮಗಾಗಿ ಆಹಾರ ಕಳುಹಿಸಿದರೆ ಅದೂ ನಮಗೆ ಸಿಗುತ್ತಿರಲಿಲ್ಲ, ಕೆಲವೊಮ್ಮೆ ಇಡೀ ದಿನದಲ್ಲಿ ನಮಗೆ ಕೇವಲ 1 ಬಿಸ್ಕೆಟ್ ಮಾತ್ರ ನೀಡುತ್ತಿದ್ದರು ಎಂದು ಸಚಿನ್ ಚಮಚವೇಕೆ ನುಂಗಿದೆ ಎಂದು ವೈದ್ಯರು ಕೇಳಿದಾಗ ಉತ್ತರಿಸಿದ್ದಾನೆ.
ತನಗೆ ಸರಿಯಾಗಿ ಆಹಾರ ನೀಡದೇ ಹೋಗಿದ್ದರಿಂದ ಕೋಪಗೊಂಡು ತಾನು ಸ್ಟೀಲ್ ಚಮಚಗಳನ್ನು ಕದಿಯಲು ಶುರು ಮಾಡಿದೆ, ಬಾತ್‌ರೂಮ್‌ಗೆ ಹೋಗಿ ಅವುಗಳನ್ನು ಸಣ್ಣ ಪೀಸ್‌ಗಳಾಗಿ ಮುರಿದು ಬಾಯೊಳಗೆ ಹಾಕಿ ಗಂಟಲಿಗೆ ನೂಕುತ್ತಿದೆ ನಂತರ ಕೆಲವೊಮ್ಮೆ ಅದರ ಜೊತೆಗೆ ನೀರು ಕುಡಿಯುತ್ತಿದ್ದೆ ಎಂದು ಆತ ಹೇಳಿದ್ದಾನೆ. ಆದರೆ ಆತನಿಗೆ ಹೊಟ್ಟೆನೋವು ತೀವ್ರವಾದ ಹಿನ್ನೆಲೆ ವೈದ್ಯರು ತಪಾಸಣೆ ಮಾಡಲು ಸ್ಕ್ಯಾನಿಂಗ್ ಹಾಗೂ ಎಕ್ಸ್‌ರೇ ಮಾಡಿದಾಗ ಆತನ ಹೊಟ್ಟೆಯಲ್ಲಿ ಚಮಚ ಹಾಗೂ ಹಲ್ಲುಜ್ಜುವ ಬ್ರಶ್‌ಗಳ ರಾಶಿಯೇ ಸಿಕ್ಕಿದೆ. ಮೊದಲಿಗೆ ಎಂಡೋಸ್ಕೋಪಿ ಮೂಲಕ ಈ ವಸ್ತುಗಳನ್ನು ಹೊರತೆಗೆಯಲು ವೈದ್ಯರು ಮುಂದಾದರು ಆದರೆ ನಂತರ ಹೊಟ್ಟೆಯಲ್ಲಿ ಅಪಾರ ಪ್ರಮಾಣದ ಬಾಹ್ಯ ವಸ್ತುಗಳು ಇರುವುದನ್ನು ಗಮನಿಸಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಮುಂದಾದರು..
ಮಾನಸಿಕ ಸಮಸ್ಯೆ ಇರುವವರಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ ಎಂದು ಸಚಿನ್‌ಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಪ್ಲೇಹೋಮ್‌ನಲ್ಲಿ 3 ವರ್ಷದ ಕಂದನ ಮೇಲೆ ಶಿಕ್ಷಕಿಯ ಹಲ್ಲೆ: ವೀಡಿಯೋ ವೈರಲ್ ಬಳಿಕ ಪೋಷಕರ ಗಮನಕ್ಕೆ ಘಟನೆ
ಇದನ್ನೂ ಓದಿ: 15 ದಿನದ ಮಗುವಿನ ತುಟಿಗೆ ಗಮ್ ಅಂಟಿಸಿ ಕಾಡಲ್ಲಿ ಬಿಟ್ಟ ಕಟುಕರು
ಇದನ್ನೂ ಓದಿ: ನೆಟ್‌ಫ್ಲಿಕ್ಸ್ ಸಿರೀಸ್, ಶಾರುಖ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಮೀರ್ ವಾಂಖೆಡೆ
