Sameer Wankhede sues Shah Rukh Khan: ಡ್ರಗ್ ಕೇಸಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ನಟ ಶಾರುಖ್ ಖಾನ್ ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಡ್ರಗ್ ಕೇಸಲ್ಲಿ ಅರ್ಯನ್ ಖಾನ್ ವಿಚಾರಣ ನಡೆಸಿದ್ದ ಸಮೀರ್ ವಾಂಖೆಡೆ

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ವಿಚಾರಣೆ ನಡೆಸಿದ್ದ ಮಾಜಿ ಮಾದಕವಸ್ತುಗಳ ಅಧಿಕಾರಿ ಸಮೀರ್ ವಾಂಖೆಡೆ ಅವರು ದಿ ಬಾಸ್ಟರ್ಡ್ಸ್‌ ಆಫ್ ಬಾಲಿವುಡ್ ಎಂಬ ನೆಟ್‌ಫ್ಲಿಕ್ಸ್ ಸಿರೀಸ್‌ ಹಾಗೂ ಶಾರುಖ್ ಖಾನ್ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್‌ನಲ್ಲಿ, ತಮ್ಮನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಶಾರುಖ್ ಖಾನ್ ಹಾಗೂ ಈ ಬಾಸ್ಟರ್ಡ್ಸ್‌ ಆಫ್ ಬಾಲಿವುಡ್ ವಿರುದ್ಧ ಅವರು ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಸಮೀರ್ ವಾಂಖಡೆಯಿಂದ ಈಗ ಶಾರುಖ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ

ಶಾರುಖ್‌ ಖಾನ್ ಹಾಗೂ ಅವರ ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ವಿರುದ್ಧ 2 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಸಮೀರ್ ವಾಂಖೆಡೆ ಅವರು ಇದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈ ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್‌ ವೆಬ್‌ಸಿರೀಸನ್ನು ನಿರ್ಮಾಣ ಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ಸಮೀರ್ ವಾಂಖೆಡೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್, ಒಟಿಟಿ ಪ್ಲಾಟ್‌ಫಾರ್ಮ್, ನೆಟ್‌ಫ್ಲಿಕ್ಸ್ ಮತ್ತು ಇತರರ ವಿರುದ್ಧ ಶಾಶ್ವತ ಮತ್ತು ಕಡ್ಡಾಯ ತಡೆಯಾಜ್ಞೆ, ಘೋಷಣೆ ಮತ್ತು ಹಾನಿಯ ಸ್ವರೂಪದಲ್ಲಿ ಪರಿಹಾರವನ್ನು ಕೋರಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ರೆಡ್ ಚಿಲ್ಲೀಸ್ ನಿರ್ಮಿಸಿದ ಮತ್ತು ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿರುವ 'ದಿ ಬ್ಯಾಸ್ಟರ್ಡ್ಸ್‌ ಆಫ್ ಬಾಲಿವುಡ್' ನಲ್ಲಿ ತಮ್ಮ ಬಗೆ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟಕರ ವೀಡಿಯೊದಿಂದ ತಾನು ನೊಂದಿದ್ದಾಗಿ ವಾಂಖೆಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಿ ಬ್ಯಾಸ್ಟರ್ಡ್ಸ್‌ ಆಫ್ ಬಾಲಿವುಡ್ ಸರಣಿಯು ಮಾದಕವಸ್ತುಗಳ ನಿಗ್ರಹಿಸುವ ಜಾರಿ ಸಂಸ್ಥೆಗಳ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಪ್ರಸಾರ ಮಾಡುತ್ತಿದೆ. ಇದರಿಂದಾಗಿ ಕಾನೂನು ಜಾರಿ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸ ಕುಸಿಯುತ್ತದೆ ಎಂದು ಹೇಳಿಕೆಯಲ್ಲಿ ಸಮೀರ್ ವಾಂಖೆಡೆ ತಿಳಿಸಿದ್ದಾರೆ.

'ದಿ ಬಾಸ್ಟರ್ಡ್ಸ್‌ ಆಫ್ ಬಾಲಿವುಡ್' ನ ಮೊದಲ ಎಪಿಸೋಡ್‌ನಲ್ಲಿ ಸಮೀರ್ ವಾಂಖೆಡೆ ಅವರ ಪಾತ್ರವನ್ನೇ ಹೋಲುವ ಪಾತ್ರವೊಂದು ಬಾಲಿವುಡ್ ಪಾರ್ಟಿಯ ಹೊರಗೆ ಬಂದು, ಡ್ರಗ್ಸ್ ಸೇವಿಸುತ್ತಿರುವ ಬಾಲಿವುಡ್‌ ಜನರನ್ನು ಹುಡುಕುತ್ತದೆ. ಸೆಪ್ಟೆಂಬರ್ 18 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ವೆಬ್‌ ಸರಣಿಯ ಸ್ಟ್ರೀಮಿಂಗ್ ಪ್ರಾರಂಭವಾಗಿದೆ. ಇದನ್ನು ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಮೀರ್ ವಾಂಖೆಡೆ ಅವರನ್ನು ಈ ವೆಬ್‌ ಸರಣಿಯಲ್ಲಿ ಬರುವ ಪಾತ್ರಧಾರಿಯೊಬ್ಬನಿಗೆ ಹೋಲಿಕೆ ಮಾಡುತ್ತಿದ್ದಾರೆ.

ಬಾಸ್ಟರ್ಡ್ಸ್ ಆಫ್ ಬಾಲಿವುಡ್‌ನ ಪಾತ್ರವನ್ನುಉದ್ದೇಶಪೂರ್ವಕವಾಗಿ ಕಲ್ಪಿಸಲಾಗಿದೆ ಮತ್ತು ಸಮೀರ್ ವಾಂಖೆಡೆ ಅವರ ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ಪೂರ್ವಾಗ್ರಹಪೀಡಿತರಾಗಿ ಕಾರ್ಯಗತಗೊಳಿಸಲಾಗಿದೆ ಎಂದು ವಾಂಖೆಡೆ ತಮ್ಮ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಸಮೀರ್ ವಾಂಖೆಡೆ ಮತ್ತು ಆರ್ಯನ್ ಖಾನ್‌ಗೆ ಸಂಬಂಧಿಸಿದ ಪ್ರಕರಣವು ಬಾಂಬೆ ಹೈಕೋರ್ಟ್ ಮತ್ತು ಮುಂಬೈನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದ ಮುಂದೆ ಬಾಕಿ ಇರುವಾಗಲೇ ಈ ಸಿರೀಸ್ ಬಂದಿದೆ ಎಂದು ಸಮೀರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ಆ ಪಾತ್ರವೂ ರಾಷ್ಟ್ರೀಯ ಲಾಂಛನದ ಭಾಗವಾಗಿರುವ 'ಸತ್ಯಮೇವ ಜಯತೇ' ಎಂಬ ಘೋಷಣೆಯನ್ನು ಪಠಿಸಿದ ನಂತರ ಮಧ್ಯದ ಬೆರಳನ್ನು ತೋರಿಸುತ್ತಾ ಅಶ್ಲೀಲ ಸನ್ನೆ ಮಾಡುವ ದೃಶ್ಯವಿದೆ. ಈ ದೃಶ್ಯ 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆಯ ನಿಬಂಧನೆಗಳ ಗಂಭೀರ ಮತ್ತು ಸೂಕ್ಷ್ಮ ಉಲ್ಲಂಘನೆಯಾಗಿದೆ ಇದಕ್ಕೆ ಕಾನೂನಿನಡಿ ಶಿಕ್ಷೆ ಇದೆ ಎಂದು ಸಮೀರ್ ಹೇಳಿದ್ದಾರೆ.

ಸಮೀರ್ ವಾಂಖೆಡೆ ವಿರುದ್ಧ ಬಾಲಿವುಡ್ ಕಿಡ್‌ಗೆ ಯಾಕೆ ಅಸಮಾಧಾನ?

2021 ರ ಆಕ್ಟೋಬರ್ 3 ರಂದು ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಅಯಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಮುಂಬೈನ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಬಂಧಿಸಿತ್ತು. ಈ ಮೂವರ ವಿರುದ್ಧ ನಿಷೇಧಿತ ಮಾದಕ ವಸ್ತುಗಳನ್ನು ಹೊಂದಿರುವುದು, ಸೇವಿಸುವುದು ಮತ್ತು ಮಾರಾಟ ಹಾಗೂ ಖರೀದಿ ಮಾಡಿದ ಆರೋಪ ಹೊರಿಸಲಾಗಿತ್ತು. ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಕ್ರೂಸಿ ಶಿಪ್ ಮೇಲೆ ದಾಳಿ ಮಾಡಿದ ನಂತರ ಈ ಮೂವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಇವರ ಜೊತೆ ಇನ್ನೂ ಇಪ್ಪತ್ತು ಜನರನ್ನು ಬಂಧಿಸಲಾಗಿತ್ತು.

ಆಗ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB)ಅಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ಈ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದರು ಮತ್ತು ಆರ್ಯನ್‌ನನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಆರ್ಯನ್ ಖಾನ್ ಜಾಮೀನು ಪಡೆಯುವ ಮೊದಲು 25 ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಗಿತ್ತು. ಆದರೆ ಮೇ 2022 ರಲ್ಲಿ, ಆರ್ಯನ್‌ ಖಾನ್ ವಿರುದ್ಧದ ಎಲ್ಲಾ ಆರೋಪಗಳನ್ನು ಕೈ ಬಿಡಲಾಯಿತು. ಸಮೀರ್ ವಾಂಖೆಡೆ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪ ಕೇಳಿ ಬಂದ ನಂತರ ವಾಂಖೆಡೆ ಅವರನ್ನು ಪ್ರಕರಣದಿಂದ ತೆಗೆದು ಹಾಕಲಾಗಿತ್ತು. ಇದೇ ಕಾರಣಕ್ಕೆ ವೆಬ್‌ ಸಿರೀಸ್‌ನಲ್ಲಿ ಸಮೀರ್ ವಾಂಖೆಡೆ ಅವರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆರೋಪವಿದೆ.

ಇದನ್ನೂ ಓದಿ: ಶಿಕ್ಷಣಾಧಿಕಾರಿಗೇ ಮುಖ್ಯ ಶಿಕ್ಷಕನ ಬೆಲ್ಟ್ ಟ್ರೀಟ್‌ಮೆಂಟ್: ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ಥಳಿಸಿದ ಹೆಡ್‌ಮಾಸ್ಟರ್

ಇದನ್ನೂ ಓದಿ: ಗಂಡ ಹೆಂಡತಿ ಜಗಳ: ಪತಿ ಕಿವಿ ಕಚ್ಚಿ ಗಾಯಗೊಳಿಸಿದ ಪತ್ನಿ

ಇದನ್ನೂ ಓದಿ: ತಾತನ ನೆನಪಲ್ಲಿ ಮೊಮ್ಮಗನ ಪೋಸ್ಟ್‌: ನಗುವ ಇಮೋಜಿ ಹಾಕಿದ್ದ ಪರಿಚಿತ: ಆಮೇಲಾಗಿದ್ದು ಅನಾಹುತ