35 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಸಹೋದ್ಯೋಗಿ ಲಚ್ಚಣ್ಣನಿಂದ 1000 ರೂ. ಸಾಲ ಪಡೆದಿದ್ದ ಇಸ್ಮಾಯಿಲ್, ಸಂಪರ್ಕ ಕಳೆದುಕೊಂಡರೂ ಅವರನ್ನು ಮರೆತಿರಲಿಲ್ಲ. ಇತ್ತೀಚೆಗೆ, ಕೇವಲ ಅಲ್ಪ ಮಾಹಿತಿಯಿಂದ ಲಚ್ಚಣ್ಣನ ವಿಳಾಸ ಪತ್ತೆಹಚ್ಚಿ, ಅವರ ಕುಟುಂಬಕ್ಕೆ ಬಡ್ಡಿ ಸಮೇತ 25,000 ರೂ. ಮರಳಿಸಿದ್ದಾರೆ.

ತಿರುವನಂತಪುರಂ (ಜು.13): ಸಾಲವು ಸಂಬಂಧಗಳ ಪಾಲಿಗೆ ಶೂಲ ಆಗುತ್ತಿರುವ ಈ ಕಾಲದಲ್ಲಿ, ವ್ಯಕ್ತಿಯೊಬ್ಬರು 35 ವರ್ಷಗಳ ಹಿಂದೆ ತಮಗೆ ಸಾಲ ನೀಡಿದವರನ್ನು ಹುಡುಕಿಕೊಂಡು ಹೋಗಿ ಅದನ್ನು ಬಡ್ಡಿ ಸಮೇತ ಪಾವತಿಸಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಮೆರೆದ ಇಸ್ಮಾಯಿಲ್‌ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲಸಕ್ಕೆಂದು ಸೌದಿ ಅರೇಬಿಯಾದ ಅಬ್ಕೈಕ್ ಎಂಬಲ್ಲಿ ನೆಲೆಸಿದ್ದ ಇಸ್ಮಾಯಿಲ್‌ ಮತ್ತು ಲಚ್ಚಣ್ಣ 1991ರಲ್ಲಿ ಪರಸ್ಪರ ಪರಿಚಯವಾಗಿದ್ದರು. ಸಹೋದ್ಯೋಗಿಗಳೂ ಆಗಿದ್ದ ಇವರು, ಒಂದೇ ಕೋಣೆಯಲ್ಲಿ ಸುಮಾರು 5 ವರ್ಷ ವಾಸವಿದ್ದರು. ಆಗ ಲಚ್ಚಣ್ಣನಿಂದ 120 ರಿಯಾಲ್‌ (1 ಸಾವಿರ ರು.) ಪಡೆದ ಇಸ್ಮಾಯಿಲ್‌, ಸಾಧ್ಯವಾದಾಗ ಅದನ್ನು ಮರಳಿಸುವ ಭರವಸೆ ನೀಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲ ವರ್ಷಗಳ ಬಳಿಕ ಲಚ್ಚಣ್ಣ ಭಾರತಕ್ಕೆ ಮರಳಿದರು. ಇಬ್ಬರ ಬಳಿಯೂ ಪರಸ್ಪರರ ದೂರವಾಣಿ ಸಂಖ್ಯೆ ಇರಲಿಲ್ಲ. ಕಾಲಕ್ರಮೇಣ ಅವರ ನಡುವೆ ಸಂಪರ್ಕವೇ ಇಲ್ಲವಾಯಿತು. ಆದರೆ ತಾವು ಪಡೆದ ಸಾಲವನ್ನು ಇಸ್ಮಾಯಿಲ್‌ ಮರೆತಿರಲಿಲ್ಲ.

ಹುಡುಕಿದ್ದು ಹೇಗೆ?

35 ವರ್ಷದ ಹಿಂದೆ ಪಡೆದಿದ್ದ ಸಾಲವನ್ನು ಮರುಪಾವತಿಸಬೇಕೆಂದು ಹೊರಟ ಇಸ್ಮಾಯಿಲ್‌ ಬಳಿ ಲಚ್ಚಣ್ಣನ ದೂರವಾಣಿ ಸಂಖ್ಯೆಯಾಗಲಿ, ವಿಳಾಸವಾಗಲಿ ಇರಲಿಲ್ಲ. ತಿಳಿದಿದ್ದದ್ದು, ಅವರು ಧರ್ಮಪುರಿಯವರು ಎಂದು. ಆ ಅಲ್ಪ ಮಾಹಿತಿಯನ್ನು ಬಳಸಿಕೊಂಡು ಆನ್‌ಲೈನ್‌ ಮೂಲಕ ಲಚ್ಚಣ್ಣ ವಾಸವಿರುವ ಸ್ಥಳ ಪತ್ತೆ ಮಾಡಿದ ಇಸ್ಮಾಯಿಲ್‌, ಸೀದಾ ಅಲ್ಲಿಗೆ ಹೋಗಿ, ಅವರ ಪರಿವಾರಕ್ಕೆ 25 ಸಾವಿರ ರು. ಮರಳಿಸಿದ್ದಾರೆ. ಸದ್ಯ ಲಚ್ಚಣ್ಣ ಕಾರ್ಯನಿಮಿತ್ತ ಗಲ್ಫ್‌ನಲ್ಲೇ ಇರುವ ಕಾರಣ ವಾಟ್ಸಪ್‌ ವಿಡಿಯೋ ಕರೆ ಮೂಲಕ ಇಬ್ಬರ ನಡುವೆ ಮಾತುಕತೆ ನಡೆಯಿತು.

ಗೆಳೆಯ ಹಣ ಮರಳಿಸಿದ್ದರ ಬಗ್ಗೆ ಮಾತನಾಡಿದ ಲಚ್ಚಣ್ಣ, ‘25 ಸಾವಿರ ರು.ಅನ್ನು ಹೇಗೆ ಲೆಕ್ಕ ಮಾಡಿ ಕೊಟ್ಟನೋ ಗೊತ್ತಿಲ್ಲ. ಬಹುಶಃ ಬಡ್ಡಿ ಸೇರಿಸಿ ಕೊಟ್ಟಿರಬೇಕು. ಆತ ಪ್ರಾಮಾಣಿಕ ವ್ಯಕ್ತಿ. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ’ ಎಂದು ಸ್ನೇಹಿತನ ಗುಣಗಾನ ಮಾಡಿದ್ದಾರೆ.