ಬಿಹಾರದ ಮುಜಾಫರ್‌ಪುರದಲ್ಲಿ, ವೃದ್ಧಾಪ್ಯ ವೇತನ ಪಡೆಯಲು ಹೋದ 82 ವರ್ಷದ ವೃದ್ಧರೊಬ್ಬರ ಬ್ಯಾಂಕ್ ಖಾತೆಯಲ್ಲಿ 759 ಕೋಟಿ ರೂ. ಪತ್ತೆಯಾಗಿದೆ. ಅವರ ಮಗನ ಖಾತೆಯಲ್ಲೂ ಇದೇ ರೀತಿ ದೊಡ್ಡ ಮೊತ್ತ ಕಂಡುಬಂದಿದ್ದು, ಇದು ಬ್ಯಾಂಕಿನ ತಾಂತ್ರಿಕ ದೋಷದಿಂದ ಆಗಿರಬಹುದೆಂದು ಶಂಕಿಸಲಾಗಿದೆ.
ಮುಜಾಫರ್‌ಪುರ (ಬಿಹಾರ): ಬ್ಯಾಂಕ್ ಖಾತೆಗೆ ಸಾವಿರಾರು ರೂಪಾಯಿ ಜಮಾ ಆದರೇ ಸಂಭ್ರಮಿಸುತ್ತೇವೆ. ಆದರೆ ಬಿಹಾರದ ವೃದ್ಧರೊಬ್ಬರಿಗೆ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಸಂಭ್ರಮಕ್ಕಿಂತ ಹೆಚ್ಚಾಗಿ ಆತಂಕ ಉಂಟಾಗಿದೆ. ವೃದ್ಧಾಪ್ಯ ವೇತನ (Pension) ಪಡೆಯಲು ಹೋದ 82 ವರ್ಷದ ವೃದ್ಧನ ಖಾತೆಯಲ್ಲಿ ಬರೋಬ್ಬರಿ 759 ಕೋಟಿ ರೂಪಾಯಿ ಹಣ ಪತ್ತೆಯಾದ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಘಟನೆ?
ಜಿಲ್ಲೆಯ ನಿವಾಸಿ ಕವಿ ಕಾಮೇಶ್ವರ್ ಮಿಶ್ರಾ ಅವರು ಭಾನುವಾರ ತಮ್ಮ ವೃದ್ಧಾಪ್ಯ ವೇತನವನ್ನು ಹಿಂಪಡೆಯಲು ಸ್ಥಳೀಯ ಕಾಮನ್ ಸರ್ವಿಸ್ ಸೆಂಟರ್‌ಗೆ (CSC) ಹೋಗಿದ್ದರು. ಅವರ ಜೊತೆಗೆ ವಿಕಲಚೇತನ ಮಗ ಕೂಡ ಹೋಗಿದ್ದ. ಮಗನಿಗೆ ಸಿಗುವ ವಿಕಲಚೇತನ ವೇತನದ ಹಣವನ್ನು ಅಲ್ಲಿ ಪಡೆಯಲಾಯಿತು.
ಹಣ ಪಡೆದ ನಂತರ ಕಾಮೇಶ್ವರ್ ಮಿಶ್ರಾ ಅವರು ಕುತೂಹಲಕ್ಕೆ ತಮ್ಮ ಖಾತೆಯ ಬ್ಯಾಲೆನ್ಸ್ ಎಷ್ಟಿದೆ ಎಂದು ಪರೀಕ್ಷಿಸಿದ್ದಾರೆ. ಆಗ ಕಂಪ್ಯೂಟರ್ ಪರದೆಯ ಮೇಲೆ ಮೂಡಿದ ಅಂಕಿಗಳನ್ನು ಕಂಡು ಅವರು ದಂಗಾಗಿದ್ದಾರೆ. ಅವರ ಖಾತೆಯಲ್ಲಿ ಬರೋಬ್ಬರಿ 759,69,51,951 ರೂಪಾಯಿ (ಸುಮಾರು 759 ಕೋಟಿ) ಬ್ಯಾಲೆನ್ಸ್ ತೋರಿಸುತ್ತಿತ್ತು!
ಮಗನ ಖಾತೆಯಲ್ಲೂ ಕೋಟಿ ಕೋಟಿ!
ಅಚ್ಚರಿಯ ವಿಷಯವೆಂದರೆ ಕಾಮೇಶ್ವರ್ ಅವರ ಮಗನ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲೂ ಇಷ್ಟೇ ದೊಡ್ಡ ಮೊತ್ತದ ಹಣ ಇರುವುದು ಕಂಡುಬಂದಿದೆ. ಕುಟುಂಬಸ್ಥರ ಪ್ರಕಾರ, ತಂದೆ-ಮಗ ಇಬ್ಬರ ಖಾತೆ ಸೇರಿ ಒಟ್ಟು 1,500 ಕೋಟಿ ರೂಪಾಯಿಗೂ ಅಧಿಕ ಹಣ ಜಮೆಯಾದಂತೆ ತೋರಿಸುತ್ತಿದೆ.
ತಾಂತ್ರಿಕ ದೋಷದ ಶಂಕೆ
ಈ ಅನಿರೀಕ್ಷಿತ ಅಂಕಿಗಳನ್ನು ಕಂಡು ವೃದ್ಧ ಕಾಮೇಶ್ವರ್ ಮಿಶ್ರಾ ಮತ್ತು ಸಿಎಸ್‌ಸಿ ಕೇಂದ್ರದ ಸಿಬ್ಬಂದಿ ಇಬ್ಬರೂ ಬೆಚ್ಚಿಬಿದ್ದಿದ್ದಾರೆ. ಇದು ಬ್ಯಾಂಕ್ ಸರ್ವರ್‌ನಲ್ಲಿ ಉಂಟಾದ ಯಾವುದಾದರೂ ತಾಂತ್ರಿಕ ದೋಷ (Technical Glitch) ಇರಬಹುದು ಎಂದು ಶಂಕಿಸಲಾಗಿದೆ. ನನ್ನ ಖಾತೆಗೆ ಇಷ್ಟೊಂದು ಹಣ ಹೇಗೆ ಬಂತು ಎಂದು ನನಗೂ ತಿಳಿಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕು. ಯಾವುದೇ ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸಲಿ ಎಂದು ನಾನು ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇನೆ ಎಂದು ಕಾಮೇಶ್ವರ್ ಮಿಶ್ರಾ ಹೇಳಿದ್ದಾರೆ.
ಈ ಸುದ್ದಿ ಬಿಹಾರದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅಧಿಕೃತ ಸ್ಪಷ್ಟನೆಗಾಗಿ ಕಾಯಲಾಗುತ್ತಿದೆ. ಈ ಹಿಂದೆಯೂ ಬಿಹಾರದ ಹಲವು ಕಡೆಗಳಲ್ಲಿ ತಾಂತ್ರಿಕ ದೋಷದಿಂದಾಗಿ ಜನ ಸಾಮಾನ್ಯರ ಖಾತೆಗೆ ಕೋಟಿ ಕೋಟಿ ಹಣ ಜಮೆಯಾದ ಘಟನೆಗಳು ನಡೆದಿದ್ದವು.


