ವ್ಯಕ್ತಿಯೊಬ್ಬ ಸಾವಿನ ದವಡೆಯಿಂದ ಕ್ಷಣದಲ್ಲಿ ಪಾರಾದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೈ ಜುಮ್ಮೆನಿಸುವಂತಿದೆ.
ವ್ಯಕ್ತಿಯೊಬ್ಬ ಸಾವಿನ ದವಡೆಯಿಂದ ಕ್ಷಣದಲ್ಲಿ ಪಾರಾದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೈ ಜುಮ್ಮೆನಿಸುವಂತಿದೆ. ಅಪಾಯಗಳು ಹೇಳಿ ಕೇಳಿ ಬರುವುದಿಲ್ಲ. ಕೆಲವೊಮ್ಮೆ ಧುತ್ತನೇ ಎದುರಾಗುವ ಅಪಾಯಗಳಿಂದ ಪವಾಡಸದೃಶ ರೀತಿಯಲ್ಲಿ ಅನೇಕರು ಪಾರಾಗಿದ್ದನ್ನು ನಾವು ನೋಡಿದ್ದೇವೆ. ಅಂತಹ ಅನೇಕ ಅನಾಹುತಗಳಿಂದ ಕ್ಷಣ ಮಾತ್ರದಲ್ಲಿ ಪಾರಾದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಂತಹ ವಿಡಿಯೋವನ್ನು ನೋಡಿದಾಗ ಎದೆ ನಡುಗುತ್ತದೆ. ಅಲ್ಲದೇ ಕಾಣದ ಯಾವುದೋ ಅಗೋಚರ ಶಕ್ತಿಯೊಂದು ಪಾರಾದವರನ್ನು ರಕ್ಷಣೆ ಮಾಡಿದೆ ಎಂದು ನಂಬುವಂತೆ ಮಾಡುತ್ತದೆ. ಅಲ್ಲದೇ ಆ ದೃಶ್ಯಗಳು ನೋಡುಗರೇ ಒಮ್ಮ ಶಾಕ್‌ಗೊಳಗಾಗುವಂತೆ ಮಾಡುತ್ತದೆ. ಅದೇ ರೀತಿ ಬೆನ್ನು ಮೂಳೆಯಲ್ಲಿ ಚಿಲ್ ಹುಟ್ಟಿಸುವಂತಹ ವಿಡಿಯೋವಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಎಲ್ಲಿ ಸೆರೆಯಾಗಿದೆ. ಹೀಗೆ ಪಾರಾದ ವ್ಯಕ್ತಿ ಯಾರೂ ಎಂಬ ಉಲ್ಲೇಖ ಎಲ್ಲಿಯೂ ಇಲ್ಲ. ಆದರೆ ಆತ ಅಪಾಯದಿಂದ ಪಾರಾದ ರೀತಿ ಬೆರಗು ಮೂಡಿಸುತ್ತಿದೆ. ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬ ಚರಂಡಿ ಮೇಲೆ ಹಾಕಲಾದ ಸಿಮೆಂಟ್ ಹಾಸಿನ ಮೇಲೆ ನಡೆದು ಬರುತ್ತಿರುತ್ತಾನೆ. ಆತ ಹೆಜ್ಜೆ ಇಟ್ಟು ಮುಂದೆ ಸಾಗಲು ಒಂದು ಕಾಲನ್ನು ಎತ್ತಿ ಪಕ್ಕಕ್ಕೆ ಇಟ್ಟ ಕ್ಷಣದಲ್ಲೇ ಆತನ ಕಾಲಿರುವ ಜಾಗ ಬಿಟ್ಟು ಹಿಂದಿನ ಜಾಗವೆಲ್ಲ ಒಮ್ಮೆಲೆ ಕುಸಿದು ದೊಡ್ಡ ಚರಂಡಿ ಬಾಯ್ತರೆದು ನಿಂತಿದ್ದು, ಚರಂಡಿಯೊಳಗೆ ನೀರು ಹರಿಯುತ್ತಿದೆ. ಈ ಧುತ್ತನೇ ಎದುರಾದ ಅನಾಹುತದಿಂದ ಕ್ಷಣದಲ್ಲಿ ಪಾರಾದ ಆ ವ್ಯಕ್ತಿಗೂ ಹಿಂದಿರುಗಿ ನೋಡಿ ಶಾಕ್‌ಗೆ ಆಗಿದೆ.
ತಾನು ಒಂದು ಕ್ಷಣ ಹಿಂದೆ ಕಾಲಿಟ್ಟ ನೆಲ ಈಗ ಅಲ್ಲಿಲ್ಲ. ಅಲ್ಲಿ ದೊಡ್ಡದಾದ ನೀರಿರುವ ಹೊಂಡವಿದೆ ಎಂದು ತಿಳಿದು ಆತ ಒಂದು ಕ್ಷಣ ನಿಂತಲೇ ನಿಂತಿದ್ದಾನೆ. ಬಹುಶ ಆತ ಆ ಕ್ಷಣ ಪಾರು ಮಾಡಿದ ದೇವರಿಗೆ ಎಷ್ಟು ಧನ್ಯವಾದ ಹೇಳಿದನೋ ಗೊತ್ತಿಲ್ಲ. ಕೆಲ ಸೆಕೆಂಡುಗಳ ಕಾಲ ಹಾಗೆಯೇ ಆಘಾತಗೊಂಡಂತೆ ಆತ ನಿಂತಿರುವುದನ್ನು ಕಾಣಬಹುದು. ರಸ್ತೆ ಪಕ್ಕದ ಫುಟ್‌ಪಾತ್‌ಗೆ ಕಾಲಿಡುತ್ತಿದ್ದಂತೆ ಕುಸಿದ ದೃಶ್ಯ ಇದಾಗಿದ್ದು, ಇದರ ವಿಡಿಯೋ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ವಿಡಿಯೋ ನೋಡಿದ ಅನೇಕರು ವ್ಯಕ್ತಿಯ ಅದೃಷ್ಟಕ್ಕೆ ಖುಷಿ ವ್ಯಕ್ತಪಡಿಸಿದ್ದು ಅಚಾನಕ್ ಎದುರಾದ ಈ ಘಟನೆಗೆ ಭಯಗೊಂಡಿದ್ದಾರೆ.
ಪ್ರಪಾತಕ್ಕೆ ಸ್ಕಿಡ್ ಆದ ಬಸ್, 22 ಮಂದಿ ಪವಾಡಸದೃಶ ಪಾರು!
ಈ ವಿಡಿಯೋವನ್ನು ಸಾಗರ್ ಎಂಬುವವರು ಟ್ವಿಟ್ಟಿರ್‌ನಲ್ಲಿ ಪೋಸ್ಟ್ ಮಾಡಿದ್ದು, ಯಮರಾಜ ಬ್ರೇಕ್ ತೆಗೆದುಕೊಂಡಾಗ ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ. ಇನ್ನು ನೋಡುಗರು ಕೂಡ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮಧ್ಯಾಹ್ನ ಊಟವಾದ ನಂತರ ಯಮರಾಜ ಸಣ್ಣದಾಗಿ ನಿದ್ದೆಗೆ ಜಾರಿದ್ದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ದೇವರು ದೊಡ್ಡವನು ಎಂದು ಪ್ರತಿಕ್ರಿಯಿಸಿದ್ದಾರೆ. ಸಣ್ಣ ಕ್ಷಣಕ್ಕಿರುವ ತಾಕತ್ತಿದ್ದು, ಒಂದು ಕ್ಷಣದಲ್ಲಿ ನಿಮ್ಮ ಜೀವವೂ ಹೊರಟು ಹೋಗಬಹುದು. ಅಥವಾ ಅದೇ ಸೆಕೆಂಡ್‌ನಲ್ಲಿ ನೀವು ಸಾವಿನಿಂದ ಪಾರಾಗಬಹುದು, ಯಮರಾಜನ ಕರೆಯಿಂದ ಕ್ಷಣದಲ್ಲಿ ಪಾರಾಗಿದ್ದೀರಿ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಒಂದೇ ಒಂದು ಕ್ಷಣದಲ್ಲಿ ಬದುಕಿನಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ಈ ವಿಡಿಯೋ ತೋರಿಸುವಂತಿದೆ.