ಮುಂಬೈ[ಸೆ.21]: ಯಾವುದಕ್ಕೂ ನಸೀಬು ಬೇಕು ಎನ್ನುವ ನಾಣ್ಣುಡಿ ಬಾಲಿವುಡ್‌ ಮೆಗಾಸ್ಟಾರ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ನಡೆಸಿಕೊಡುವ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದಲ್ಲಿ ನಿಜವಾಗಿದೆ.

ಕೆಬಿಸಿಯ 11ನೇ ಆವೃತ್ತಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯೊಬ್ಬರಿಗೆ ಏಳು ಕೋಟಿ ರು. ಗೆಲ್ಲುವ ಅವಕಾಶ ಸ್ವಲ್ಪದರಲ್ಲೇ ಕೈ ತಪ್ಪಿಸಿಕೊಂಡಿದ್ದಾರೆ. 15 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಒಂದು ಕೋಟಿ ಗೆದ್ದುಕೊಂಡಿದ್ದ ಮಹಾರಾಷ್ಟ್ರದ ಬಬಿತಾ ತಾಡೆ, 7 ಕೋಟಿಯ ಕೊನೆಯ ಪ್ರಶ್ನೆಗೆ ಉತ್ತರ ತಿಳಿದಿದ್ದರೂ ಆಟದಿಂದ ಹಿಂದೆ ಸರಿಯುವ ಮೂಲಕ ಅತೀ ಹೆಚ್ಚಿನ ಬಹುಮಾನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ಯಾವ ರಾಜ್ಯಗಳ ಅತೀ ಹೆಚ್ಚು ಗೌರ್ನರ್‌ಗಳು ದೇಶದ ಆಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎನ್ನುವ ಪ್ರಶ್ನೆಗೆ, ರಾಜಸ್ಥಾನ, ಬಿಹಾರ, ಪಂಜಾಬ್‌ ಹಾಗೂ ಆಂಧ್ರ ಪ್ರದೇಶ ಎಂಬ ನಾಲ್ಕು ಆಯ್ಕೆಗಳು ನೀಡಲಾಗಿತ್ತು. ಗ್ರಹಿಸಿದ ಉತ್ತರ ಸರಿಯಿದ್ದರೂ, ಬಬಿತಾ ಆಟದಿಂದ ಹಿಂದೆ ಸರಿದಿದ್ದರಿಂದ 7 ಕೋಟಿ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಬಳಿಕ ಅವರು ಊಹಿಸಿದ ಬಿಹಾರ ಎನ್ನುವ ಉತ್ತರ ಸರಿಯಾಗಿತ್ತು.

ಅಮರಾವತಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯಾಗಿರುವ ಬಬಿತಾ ತಿಂಗಳಿಗೆ 1500 ರು. ಸಂಬಳ ಪಡೆಯುವುದಾಗಿ ಹೇಳಿದ್ದಾರೆ. ಬಬಿತಾ ಈ ಆವೃತ್ತಿಯಲ್ಲಿ ಒಂದು ಕೋಟಿ ಗೆದ್ದ ಎರಡನೇ ಆಟಗಾರ್ತಿಯಾಗಿದ್ದು, ಕೆಲ ದಿನಗಳ ಹಿಂದಷ್ಟೇ ಬಿಹಾರದ ಐಎಎಸ್‌ ಅಭ್ಯರ್ಥಿ ಸನೋಜ್‌ ಕುಮಾರ್‌ 1 ಕೋಟಿ ಗೆದ್ದಿದ್ದರು.