ಪಾಲಕ್ಕಾಡ್‌ (ಜೂ.11): 11 ವರ್ಷಗಳ ಹಿಂದೆ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಅದೇ ಮನೆಯಿಂದ ಕೇವಲ 500 ಮೀಟರ್‌ ದೂರದ ಇನ್ನೊಂದು ಮನೆಯಲ್ಲೇ ತನ್ನ ಪ್ರಿಯಕರನೊಂದಿಗೆ ರಹಸ್ಯವಾಗಿ ವಾಸವಿದ್ದ ಪ್ರಕರಣವೊಂದು ಕೇರಳದಲ್ಲಿ ನಡೆದಿದೆ. ಇನ್ನೂ ಅಚ್ಚರಿಯ ವಿಷಯವೆಂದರೆ ಯುವತಿಯು ಪ್ರಿಯಕರನ ಜೊತೆ ವಾಸವಿರುವ ವಿಷಯ ಅದೇ ಮನೆಯಲ್ಲಿ ವಾಸವಿದ್ದ ಪ್ರಿಯಕರನ ತಂದೆ, ತಾಯಿ, ಸೋದರಿಗೂ ಗೊತ್ತಾಗಿರಲಿಲ್ಲವಂತೆ. ಪತ್ತೆದಾರಿ ಸಿನೆಮಾವನ್ನೂ ಮೀರಿಸುವ ಪಾಲಕ್ಕಾಡ್‌ ಜಿಲ್ಲೆಯ ಅಯಲೂರು ಎಂಬಲ್ಲಿ ನಡೆದ ರಹಸ್ಯ ಪ್ರೇಮ ಪ್ರಕರಣ ಇದೀಗ ಎಲ್ಲೆಡೆ ಭಾರೀ ಸುದ್ದಿಯಾಗಿದೆ.

ಏನಿದು ಪ್ರಕರಣ?:

ಅಯಲೂರಿನ ಸಜಿತಾ ಎಂಬ ಅಪ್ರಾಪ್ತೆ ತನ್ನ ಮನೆ ಸಮೀಪದ ರೆಹಮಾನ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ಪರಸ್ಪರ ಬೇರೆ ಜಾತಿಯಾದ ಕಾರಣ ಇಬ್ಬರೂ ಪ್ರೀತಿಯನ್ನು ರಹಸ್ಯವಾಗಿ ಇಟ್ಟಿದ್ದರು. 11 ವರ್ಷಗಳ ಹಿಂದೆ ಒಂದು ದಿನ ಸಜಿತಾ ದಿಢೀರ್‌ ನಾಪತ್ತೆಯಾಗಿದ್ದಳು. ಪೋಷಕರು ದೂರು ಕೊಟ್ಟರೂ, ತನಿಖೆಯಲ್ಲಿ ಏನೂ ಪತ್ತೆಯಾಗಿರಲಿಲ್ಲ. ಆಕೆ ಪರಾರಿಯಾಗಿರಬಹುದು, ಇಲ್ಲವೇ ಸಾವನ್ನಪ್ಪಿರಬಹುದು ಎಂದು ಪೋಷಕರು, ಊರಿನವರು ಸುಮ್ಮನಾಗಿದ್ದರು.

ಕೇರಳದ 5ನೇ ತರಗತಿ ಬಾಲಕಿಯ ಪತ್ರಕ್ಕೆ ಮಾರು ಹೋದ ಸಿಐಜೆ! ...

ಸಮೀಪದಲ್ಲೇ ವಾಸ!:

ಹೀಗೆ ನಾಪತ್ತೆಯಾದ ಸಜಿತಾ ತನ್ನ ಮನೆಯಿಂದ ಕೇವಲ 500 ಮೀಟರ್‌ ದೂರದಲ್ಲಿರುವ ರೆಹಮಾನ್‌ ಮನೆ ಸೇರಿಕೊಂಡಿದ್ದಳು. 11 ವರ್ಷದಿಂದಲೂ ತನ್ನ ಜೀವನವನ್ನು ಆ ಮನೆಯಲ್ಲಿ ಒಂದು ಸಣ್ಣ ಕೊಠಡಿಗೆ ಸೀಮಿತ ಮಾಡಿಕೊಂಡಿದ್ದಳು. ಯಾರಿಗೂ ಅನುಮಾನ ಬರದೇ ಇರಲಿ ಎಂದು ಮೊಬೈಲ್‌ ಕೂಡಾ ಬಳಸುತ್ತಿರಲಿಲ್ಲ. ಕೊಠಡಿಯಲ್ಲಿನ ಸಣ್ಣ ಟೀವಿಗೆ ಇಯರ್‌ಫೋನ್‌ ಹಾಕಿಕೊಂಡು ಅದರ ಮೂಲಕವೇ ಟೀವಿ ವೀಕ್ಷಿಸುತ್ತಿದ್ದಳು. ಹಗಲು ಹೊತ್ತು ಪ್ರಿಯಕರನ ಪೋಷಕರು, ಸೋದರಿ ಕೆಲಸಕ್ಕೆ ಹೋದ ಬಳಿಕ ಮನೆಯಲ್ಲಿ ಓಡಾಡಿಕೊಂಡಿರುತ್ತಿದ್ದಳು. ಶೌಚಾಲಯ ಮನೆಯಿಂದ ಹೊರಗೆ ಇದ್ದ ಕಾರಣ, ರಾತ್ರಿ ವೇಳೆ ಮಾತ್ರವೇ ಕೊಠಡಿಯ ಕಿಟಕಿಯ ಸರಳು ತೆಗೆದು ಹೊರಗೆ ಹೋಗಿ ಬರುತ್ತಿದ್ದಳು.

ಪ್ರೀತಿಸಿ ಕೈಕೊಟ್ಟ ಶಬ್ನಮ್, ಆಕೆ ಕೊಂದು ತಾನೂ ಸುಸೈಡ್ ಮಾಡಿಕೊಂಡ! .

ಕೊಠಡಿಯೊಳಗೆ ಊಟ:

ಈ ನಡುವೆ ಸಜಿತಾಳನ್ನು ಮನೆಗೆ ಕರೆದುಕೊಂಡು ಬಂದ ಬಳಿಕ ರೆಹಮಾನ್‌ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದ. ಊಟ ಮಾಡಲು ರೂಮಿನೊಳಗೆ ಹೋಗುತ್ತಿದ್ದ. ಜೊತೆಗೆ ಮಾಮೂಲಿಗಿಂತ ಡಬ್ಬಲ್‌ ಊಟವನ್ನು ರೂಮಿಗೆ ತೆಗೆದುಕೊಂಡು ಹೋಗುತ್ತಿದ್ದ. ಮೊದಮೊದಲು ಈ ಬಗ್ಗೆ ಪೋಷಕರು ಕೇಳಿದಾಗ ಭಾರೀ ಸಿಟ್ಟು ಮಾಡುತ್ತಿದ್ದ. ಹೀಗಾಗಿ ಅವರು ಈ ವಿಷಯ ಕೇಳುವುದು ಬಿಟ್ಟಿದ್ದರು. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್‌ ಆಗಿದ್ದ ರೆಹಮಾನ್‌, ಪ್ರಿಯತಮೆ ಇದ್ದ ಕೊಠಡಿಗೆ ಯಾರೂ ಹೋಗದಂತೆ ಬಾಗಿಲಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದ. ಯಾರಾದರೂ ಹತ್ತಿರ ಹೋದರೆ ಶಾಕ್‌ ಹೊಡೆಯುವ ವ್ಯವಸ್ಥೆ ಮಾಡಿದ್ದ. ಹೀಗಾಗಿ ಕಳೆದ 11 ವರ್ಷಗಳಿಂದಲೂ ಸಜಿತಾ, ಅದೇ ಮನೆಯಲ್ಲಿ ಇದ್ದರೂ ಮನೆಯಲ್ಲಿದ್ದ ಇತರೆ ಮೂವರಿಗೆ ಸ್ವಲ್ಪವೂ ಸುಳಿವು ಸಿಕ್ಕಿರಲಿಲ್ಲವಂತೆ.

ಪತ್ತೆಯಾಗಿದ್ದು ಹೇಗೆ?

ಮೂರು ತಿಂಗಳ ಹಿಂದೆ ಸಜಿತಾ-ರೆಹಮಾನ್‌ ನಡುವೆ ಜಗಳವಾಗಿ ಆಕೆ ಯಾರಿಗೂ ಗೊತ್ತಾಗದ ಹಾಗೆ ಮನೆ ಬಿಟ್ಟು ಹೋಗಿದ್ದಳು. ಅದೇ ದಿನ ರೆಹಮಾನ್‌ ಕೂಡಾ ಪೋಷಕರ ಜೊತೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದ. ಈ ಬಗ್ಗೆ ಆತನ ಪೋಷಕರು ದೂರು ನೀಡಿದ್ದರು. ಈ ನಡುವೆ ವಾರದ ಹಿಂದೆ ರೆಹಮಾನ್‌ನ ಸೋದರ ಬಷೀರ್‌ ಎಂಬುವವರು ಪಕ್ಕದ ಹಳ್ಳಿಯಲ್ಲಿ ಹೋಗುವಾಗ ರೆಹಮಾನ್‌ನನ್ನು ನೋಡಿದ್ದಾರೆ. ಈ ವೇಳೆ ಅಡ್ಡಗಟ್ಟಿದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದನಾದರೂ, ಪೊಲೀಸರ ನೆರವಿನೊಂದಿಗೆ ಹಿಡಿದು ಠಾಣೆಗೆ ತರಲಾಗಿತ್ತು. ಅಲ್ಲಿ ವಿಚಾರಣೆ ವೇಳೆ ಆತ ಕಳೆದ 11 ವರ್ಷಗಳಿಂದ ತಾನು ಕಾಪಾಡಿಕೊಂಡು ಬಂದಿದ್ದ ರಹಸ್ಯ ಪ್ರೇಮ ಕಥೆ ಬಹಿರಂಗಪಡಿಸಿದ್ದಾನೆ. ಬಳಿಕ ಸಜಿತಾಳನ್ನು ಠಾಣೆಗೆ ಕರೆಸಲಾಗಿದೆ. ಅಲ್ಲಿ ಆಕೆ ತಾನು ವಯಸ್ಕಳಾಗಿದ್ದು, ರೆಹಮಾನ್‌ ಜೊತೆಗೆ ಇರುವುದಾಗಿ ಹೇಳಿದ ಬಳಿಕ ಆತನ ಜೊತೆ ಕಳುಹಿಸಿಕೊಟ್ಟಿದ್ದಾರೆ.