ತಿರುವನಂತಪುರ(ಜೂ.  07)  ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕಾರ ಮಾಡಿ ಕೇರಳದಲ್ಲಿ ಕನ್ನಡ ಮೊಳಗಿಸಿದ್ದ ಕಾಸರಗೋಡು ಮಂಜೇಶ್ವರದ ಶಾಸಕ ಎ.ಕೆ.ಎಂ ಅಶ್ರಫ್ ಮತ್ತೊಮ್ಮೆ ಕನ್ನಡವ ಮೆರೆಸಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಕವನ ವಾಚಿಸಿದ್ದಾರೆ.  ಕೇರಳ-ಕರ್ನಾಟಕದ ಗಡಿ ಪ್ರದೇಶದಿಂದ ನಾನು ಆಯ್ಕೆಯಾಗಿದ್ದೇನೆ.  ನಮ್ಮದು ವೈವಿಧ್ಯತೆ ಸಾರುವ ನಾಡು, ರಾಷ್ಟ್ರಕವಿ ಗೋವಿಂದ ಪೈ ಅವರ ನಾಡು.  ಪೈ ವಿರಚಿತ ಹೆಬ್ಬೆರಳು ನಾಟಕದ ಕಿರು ಕವಿತೆ ವಾಚಿಸುತ್ತೇನೆ ಎಂದು ಹೇಳಿದ್ದಾರೆ.

ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿ ಅಶ್ರಫ್; ವಿಡಿಯೋ

ಒಂದೂವರೆ ನಿಮಿಷ ಕಾಲ ಕವನ ವಾಚಿಸಿದ್ದಾರೆ.  ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶ್ರಫ್‌, ನಿಕಟಸ್ಪರ್ಧಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಕನ್ನಡದಲ್ಲೇ ಬಿಎ ಪದವಿ ಪಡೆದಿರುವ ಅಶ್ರಫ್‌ ಕಾಲೇಜು ವಿದ್ಯಾರ್ಥಿ ಯೂನಿಯನ್‌ನಲ್ಲಿ ಸಕ್ರಿಯವಾಗಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಕನ್ನಡ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಪ್ರಮಾಣ ವಚನದಲ್ಲೂ ಕನ್ನಡದ ಭಾಷಾಭಿಮಾನ ಮೆರೆದಿರುವುದು ಗಮನಾರ್ಹ.

ಅವರು ತುಳು, ಮಲಯಾಳಂ, ಉರ್ದು, ಇಂಗ್ಲಿಷ್‌ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲರು. ಗಡಿನಾಡು ಮಂಜೇಶ್ವರವನ್ನು ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶ ಎಂಬುದಾಗಿ ಕೇರಳ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಮಂಜೇಶ್ವರದ ಹಿಂದಿನ ಶಾಸಕ ಕಮರುದ್ದೀನ್‌ ಕೂಡ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದರು.