ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಸುಮತಿ ಅವರು ಮಹಿಳಾ ಸುರಕ್ಷತೆಯ ವಾಸ್ತವ ಸ್ಥಿತಿಯನ್ನು ತಿಳಿಯಲು ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ವೇಷ ಮರೆಸಿ ಕಾರ್ಯಾಚರಣೆ ನಡೆಸಿದರು. ಈ ವೇಳೆ 40 ಪುರುಷರಿಂದ ಅಸಭ್ಯ ವರ್ತನೆ ಎದುರಿಸಿದ ಅವರು, ಆರೋಪಿಗಳಿಗೆ ಶಿಕ್ಷೆ ಬದಲು ಕೌನ್ಸೆಲಿಂಗ್ ನೀಡಿದ್ದಾರೆ.
ಹೈದರಾಬಾದ್ (ಮೇ.6): ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಸುಮತಿ ಅವರು ಮಹಿಳಾ ಸುರಕ್ಷತೆಯ ವಾಸ್ತವ ಸ್ಥಿತಿಯನ್ನು ಅರಿಯಲು ನಡೆಸಿದ 'ಅಂಡರ್‌ಕವರ್ ಆಪರೇಷನ್' ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಲ್ಕಾಜ್‌ಗಿರಿಯ ಮೊದಲ ಮಹಿಳಾ ಕಮಿಷನರ್ ಆಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ ಈ ಹಿರಿಯ ಐಪಿಎಸ್ ಅಧಿಕಾರಿ, ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ವೇಷ ಧರಿಸಿ ರಸ್ತೆಗೆ ಇಳಿಯುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗರದ ಬೀದಿಗಳಲ್ಲಿ ಪೊಲೀಸರ ಭದ್ರತೆ ಇಲ್ಲದ ಸಮಯದಲ್ಲಿ ಸಾಮಾನ್ಯ ಮಹಿಳೆಯರು ಎದುರಿಸುವ ಸವಾಲುಗಳನ್ನು ಕಣ್ಣಾರೆ ಕಾಣಲು ಸುಮತಿ ಅವರು ಈ ಸಾಹಸಕ್ಕೆ ಕೈಹಾಕಿದ್ದರು.
ಮಧ್ಯರಾತ್ರಿ 12:30 ರಿಂದ ಮುಂಜಾನೆ 3:30 ರವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ, ಕಮಿಷನರ್ ಸುಮತಿ ಅವರು ಯಾವುದೇ ಪೊಲೀಸ್ ರಕ್ಷಣೆ ಇಲ್ಲದೆ ಮಲ್ಕಾಜ್‌ಗಿರಿಯ ಬಸ್ ನಿಲ್ದಾಣವೊಂದರಲ್ಲಿ ಒಬ್ಬರೇ ನಿಂತಿದ್ದರು. ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯ ಬದಲು ಸಾಮಾನ್ಯ ನಾಗರಿಕಳಂತೆ ವಸ್ತ್ರ ಧರಿಸಿದ್ದ ಅವರನ್ನು ಗುರುತಿಸುವುದು ಯಾರಿಗೂ ಸಾಧ್ಯವಿರಲಿಲ್ಲ. ದೂರುಗಳು ಮತ್ತು ವರದಿಗಳಿಗಿಂತ ನೇರ ಅನುಭವವೇ ಮಹಿಳಾ ಸುರಕ್ಷತೆಯ ನೈಜ ಚಿತ್ರಣವನ್ನು ನೀಡುತ್ತದೆ ಎಂಬ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದರು. ಆದರೆ, ಕೇವಲ ಮೂರು ಗಂಟೆಗಳ ಕಾಲ ಅವರು ನಡೆಸಿದ ಈ ಪ್ರಯೋಗದ ಫಲಿತಾಂಶ ಮಾತ್ರ ಅತ್ಯಂತ ಆಘಾತಕಾರಿಯಾಗಿತ್ತು.
ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 40 ಮಂದಿ ಪುರುಷರು ಸುಮತಿ ಅವರ ಬಳಿ ಬಂದು ಅಸಭ್ಯವಾಗಿ ವರ್ತಿಸಲು ಪ್ರಯತ್ನಿಸಿದ್ದಾರೆ. ಬಂದವರ ಪೈಕಿ ಹೆಚ್ಚಿನವರು ಮದ್ಯದ ಅಮಲಿನಲ್ಲಿದ್ದರೆ, ಇನ್ನು ಕೆಲವರು ಗಾಂಜಾ ಸೇವಿಸಿರುವ ಶಂಕೆಯಿದೆ ಎಂದು ವರದಿಯಾಗಿದೆ. ಸುಮತಿ ಅವರ ಬಳಿ ಸುಳಿದವರಲ್ಲಿ ಕೇವಲ ಕಿಡಿಗೇಡಿಗಳಷ್ಟೇ ಇರಲಿಲ್ಲ, ಬದಲಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ವೃತ್ತಿಪರರು ಕೂಡ ಸೇರಿದ್ದರು ಎಂಬುದು ಕಳವಳಕಾರಿ ಸಂಗತಿಯಾಗಿದೆ. ತಾವು ಮಾತನಾಡಿಸುತ್ತಿರುವುದು ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯನ್ನು ಎಂಬ ಅರಿವಿಲ್ಲದ ಈ ಪುರುಷರ ವರ್ತನೆಯು ರಾತ್ರಿ ವೇಳೆಯಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳು ಎಷ್ಟು ಅಸುರಕ್ಷಿತವಾಗಿವೆ ಎಂಬುದನ್ನು ಸಾಬೀತುಪಡಿಸಿದೆ.
ಈ ಕಾರ್ಯಾಚರಣೆಯ ನಂತರ ಪೊಲೀಸರು ಇವರೆಲ್ಲರನ್ನೂ ಗುರುತಿಸಿದ್ದು, ತಕ್ಷಣವೇ ಕ್ರಿಮಿನಲ್ ಕೇಸ್ ದಾಖಲಿಸುವ ಬದಲು ವಿಭಿನ್ನ ಮಾರ್ಗವನ್ನು ಅನುಸರಿಸಿದ್ದಾರೆ. ಗುರುತಿಸಲಾದ 40 ಮಂದಿಯನ್ನು ಪೊಲೀಸ್ ಠಾಣೆಗೆ ಕರೆಸಿ ಕೌನ್ಸೆಲಿಂಗ್ ನಡೆಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ಹೇಗೆ ಗೌರವಯುತವಾಗಿ ವರ್ತಿಸಬೇಕು ಎಂಬ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಗಿಂತ ಹೆಚ್ಚಾಗಿ ಅವರ ನಡವಳಿಕೆಯಲ್ಲಿ ಬದಲಾವಣೆ ತರುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮತಿ ಅವರ ಈ ದಿಟ್ಟ ಹೆಜ್ಜೆಗೆ ಸ್ಥಳೀಯರು ಮತ್ತು ಮಹಿಳೆಯರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವಿಶೇಷವೆಂದರೆ, ಸುಮತಿ ಅವರು ಇಂತಹ ಸಾಹಸಕ್ಕೆ ಕೈಹಾಕುತ್ತಿರುವುದು ಇದೇ ಮೊದಲಲ್ಲ. ಸುಮಾರು 25 ವರ್ಷಗಳ ಹಿಂದೆ ತಮ್ಮ ವೃತ್ತಿಜೀವನದ ಆರಂಭದಲ್ಲಿ ಕಾಜಿಪೇಟೆ ರೈಲ್ವೆ ನಿಲ್ದಾಣದ ಬಳಿ ಡಿಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗಲೂ ಅವರು ಇದೇ ರೀತಿ ವೇಷ ಮರೆಸಿಕೊಂಡು ಮಹಿಳಾ ಸುರಕ್ಷತೆಯ ಪರೀಕ್ಷೆ ನಡೆಸಿದ್ದರು. ತೆಲಂಗಾಣ ಕೆಡರ್‌ನ ಅತ್ಯಂತ ದಕ್ಷ ಅಧಿಕಾರಿಗಳಲ್ಲಿ ಒಬ್ಬರಾದ ಮತಿ ಅವರು ಈ ಹಿಂದೆ ರಾಜ್ಯ ಗುಪ್ತಚರ ವಿಭಾಗದ (SIB) ಮುಖ್ಯಸ್ಥರಾಗಿ ಮತ್ತು ಮಾವೋವಾದಿಗಳ ಶರಣಾಗತಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೇ 1 ರಂದು ಮಲ್ಕಾಜ್‌ಗಿರಿ ಸಿಪಿಯಾಗಿ ನೇಮಕಗೊಂಡ ಅವರು ಈಗ ಮಹಿಳಾ ಸುರಕ್ಷತೆಯ ವಿಷಯದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.


