Asianet Suvarna News Asianet Suvarna News

Subhash Chandra Bose @ 125: ದಾಸ್ಯವನ್ನು ಧಿಕ್ಕರಿಸಿ ನಿಂತ ನೇತಾಜಿ ನಮಗೆ ಈಗಲೂ ಸ್ಪೂರ್ತಿ

'ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎನ್ನುತ್ತಿದ್ದ ಸುಭಾಷ್ ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿ ಇಬ್ಬರ ಆಲೋಚನೆ, ಆಶಯ, ಮಾರ್ಗಗಳು ಸಂಪೂರ್ಣ ಭಿನ್ನವಾಗಿದ್ದವು.

We should take inspiration from ideals of Netaji Subhas Chandra Bose Says MP Pratap Simha hls
Author
Bengaluru, First Published Jan 23, 2022, 11:48 AM IST

ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎನ್ನುತ್ತಿದ್ದ ಸುಭಾಷ್ ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿ ಇಬ್ಬರ ಆಲೋಚನೆ, ಆಶಯ, ಮಾರ್ಗಗಳು ಸಂಪೂರ್ಣ ಭಿನ್ನವಾಗಿದ್ದವು. ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ಅನುಸರಿಸಲು ಹೊರಟಿದ್ದ ಮಾರ್ಗದ ಬಗ್ಗೆ ಸುಭಾಷ್ ಮಾತ್ರವಲ್ಲ, ಬಾಲಗಂಗಾಧರ ತಿಲಕ್ ಹಾಗೂ ಅರವಿಂದ ಘೋಷ್ ಅವರಿಗೂ ಅಸಮ್ಮತಿಯಿತ್ತು.

ರಕ್ತ ಚೆಲ್ಲಿ ಸ್ವಾತಂತ್ರ್ಯ ಪಡೆಯಬೇಕೇ ಹೊರತು, ಗಾಂಧಿ ಪ್ರತಿಪಾದಿಸುತ್ತಿದ್ದ ಮಾರ್ಗದಿಂದ ಲಾಭ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಒಂದೆಡೆ ಸುಭಾಷ್ ಹಾಗೂ ಇತರೆ ಕ್ರಾಂತಿಕಾರಿಗಳು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವ ಬೆನ್ನಲ್ಲೇ, ಕೆಲ ಆಡಳಿತಾತ್ಮಕ ಸ್ವಾತಂತ್ರ್ಯ ಕೊಟ್ಟರೆ ಸಾಕೆಂದು ಭಾವಿಸಿ 1931 ರಲ್ಲಿ 2 ನೇ ದುಂಡುಮೇಜಿನ ಸಭೆಗೆ ಬ್ರಿಟನ್‌ಗೆ ತೆರಳಲು ಮುಂದಾದ ಗಾಂಧಿ ಬಗ್ಗೆ ಕೆಲವರಿಗೆ ಅಸಮಾಧಾನವಿತ್ತು.

ಗಾಂಧೀಜಿ ಜತೆ ಅಭಿಪ್ರಾಯಭೇದ
ಹಾಗಂತ ಸುಭಾಷ್‌ಚಂದ್ರ ಬೋಸ್ ಹಾಗೂ ಗಾಂಧೀಜಿ ನಡುವಿನ ಅಭಿಪ್ರಾಯಭೇದ ಸ್ವಾತಂತ್ರ್ಯ ಚಳವಳಿಗೆ ಅಡ್ಡಬರಲಿಲ್ಲ. ನಿಜ ಹೇಳಬೇಕೆಂದರೆ ಸುಭಾಷ್ ಅವರ ಗುಣನಡತೆಯಲ್ಲೇ ಗಾಂಧೀಜಿಯವರಂತಹ ಚಿಂತನೆಗೆ ಜಾಗ ಇರಲಿಲ್ಲ. ಖ್ಯಾತ ಅಧ್ಯಾತ್ಮ ಗುರು ಓಶೋ ರಜನೀಶ್‌ಗೆ ಇಷ್ಟವಾದ ಸಂಗತಿಯೂ ಅದೇ. ಸುಭಾಷ್ ಅವರನ್ನು ಬಹಳ ಮೆಚ್ಚಿಕೊಂಡಿದ್ದ ಅವರು, ಸುಭಾಷ್-ಗಾಂಧಿ ಬಗ್ಗೆ ಹೀಗೆ ಹೇಳುತ್ತಾರೆ- I Am Reminded of a Young Man. His Name was Subhash Chandra. He Become a Great Revolutionary and I Have Tremendeous Respect for Him. Because he was the only Man in India who Opposed Mahatma Gandhi, He Could See that all this Mahatmahood is Simply Politics and Nothing Else' ಅಂದಮಾತ್ರಕ್ಕೆ ತಲೆಯಲ್ಲಿ ರಕ್ತ ಕ್ರಾಂತಿಯನ್ನೇ ತುಂಬಿಕೊಂಡಿದ್ದ ವ್ಯಕ್ತಿ ಬೋಸ್ ಎಂದು ಭಾವಿಸಬೇಡಿ.

Subhash Chandra Bose Jayanti 2022: ಅಪ್ಪಟ ಸ್ವಾಭಿಮಾನಿ, ದೇಶಪ್ರೇಮಿ ಸಮರವೀರ ನೇತಾಜಿ!

ಐಸಿಎಸ್‌ನಲ್ಲಿ 4 ನೇ ರ್ಯಾಂಕ್
ಆ ಕಾಲಕ್ಕೆ ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್ನಿಗೆ ಹೋಗಿ ಬ್ಯಾರಿಸ್ಟರ್ ಆಗಿ ಕರಿಕೋಟಿನೊಂದಿಗೆ ಭಾರತಕ್ಕೆ ಯಾರೂ ಬೇಕಿದ್ದರೂ ಬರಬಹುದಿತ್ತು. ಆದರೆ ಐಸಿಎಸ್ ಪಾಸಾಗಲು ಹೆಚ್ಚೂ ಕಡಿಮೆ ಸಾಧ್ಯವೇ ಇರಲಿಲ್ಲ! ಬ್ರಿಟಿಷರೇ ಅವಕಾಶ ಕೊಡುತ್ತಿರಲಿಲ್ಲ. ಒಂದು ವೇಳೆ ಪಾಸು ಮಾಡಿದರೆ ಉನ್ನತ ಆಡಳಿತಾತ್ಮಕ ಸ್ಥಾನಗಳನ್ನು ಭಾರತೀಯರೇ ಆಕ್ರಮಿಸಿ ಬಿಡುತ್ತಾರೆಂಬ ಭಯ ಬ್ರಿಟಿಷರಿಗಿತ್ತು. ಇಂಥ ಅಡೆತಡೆಗಳ ನಡುವೆಯೂ ಐಸಿಎಸ್ ಪಾಸು ಮಾಡಿದ ಮೊದಲ ವ್ಯಕ್ತಿ ರವೀಂದ್ರನಾಥ ಠಾಗೋರರ ಹಿರಿಯಣ್ಣ ಸತ್ಯೇಂದ್ರನಾಥ್ ಬೋಸ್! ಅದು 1863ರಲ್ಲಿ. ನಂತರ ಯಾರಿಂದಲೂ ಐಸಿಎಸ್ ಪಾಸು ಮಾಡಲಾಗಿರಲಿಲ್ಲ.

ಒಂದಿಲ್ಲೊಂದು ಕ್ಷುಲ್ಲಕ ಕಾರಣ ಕೊಟ್ಟು ನಪಾಸು ಮಾಡಿಬಿಡುತ್ತಿದ್ದರು. ಅಂಥ ಅರವಿಂದ ಘೋಷ್ ಅವರನ್ನೇ ಫೇಲು ಮಾಡಿದ್ದರು, ಏಕೆ ಗೊತ್ತೇ? ಅರವಿಂದರು ಈ ದೇಶ ಕಂಡ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಐಸಿಎಸ್ ಪರೀಕ್ಷೆಯ ಪ್ರತಿಯೊಂದು ವಿಷಯಗಳಲ್ಲೂ ಮೊದಲಿಗರಾಗಿ ಪಾಸಾದರು. ಇನ್ನೇನು ಐಸಿಎಸ್ ಅಧಿಕಾರಿಯಾದರು ಎನ್ನುವಷ್ಟರಲ್ಲಿ ಕುದುರೆ ಸವಾರಿ ಮಾಡಲಾಗಲಿಲ್ಲ ಎಂಬ ಕಾರಣಕ್ಕೆ ಫೇಲು ಮಾಡಿದರು. ಇಂತಹ ಅಡಚಣೆಗಳ ನಡುವೆಯೂ ಸುಭಾಷ್‌ಚಂದ್ರ ಬೋಸ್ ಐಸಿಎಸ್ ಅಂತಿಮ ಪರೀಕ್ಷೆಯಲ್ಲಿ ಇಂಗ್ಲೆಂಡಿಗೇ 4 ನೆಯವರಾಗಿ ತೇರ್ಗಡೆಯಾದರು.

ಅದರಲ್ಲೂ ಇಂಗ್ಲಿಷ್ ವಿಷಯದಲ್ಲೇ ಬೋಸ್ ಮೊದಲಿಗರಾಗಿ ಪಾಸಾಗಿದ್ದರು. ಬ್ರಿಟಿಷರ ಯಾವ ತಂತ್ರಗಳೂ ಬೋಸ್ ಐಸಿಎಸ್ ಅಧಿಕಾರಿಯಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಐಸಿಎಸ್  ಮಾಡಿದವರು ವೃತ್ತಿಗೆ ತೆರಳುವ ಮೊದಲು ಗವರ್ನರ್ ಮುಂದೆ ಸಾಂಪ್ರದಾಯಿಕವಾದ ಒಂದು ಇಂಟರ್‌ವ್ಯೆ ಎದುರಿಸಬೇಕು. ಆ ಘಟನೆಯನ್ನು ಓಶೋ ಬಹಳ ಚೆನ್ನಾಗಿ ವಿವರಿಸುತ್ತಾರೆ. ಈ ಬೆಂಗಾಲಿಗಳು ಎಲ್ಲಿಗೇ ಹೋಗಲಿ, ಅದು ಮಳೆ, ಚಳಿ, ಬೇಸಿಗೆ ಯಾವುದೇ ಕಾಲವಾಗಿರಲಿ, ಬಗಲಲ್ಲೊಂದು ಕೊಡೆಯನ್ನು ಹಿಡಿದೇ ಹೋಗುತ್ತಾರೆ. ಹಾಗೇಕೆ ಎಂದೂ ಯಾರಿಗೂ ಗೊತ್ತಿಲ್ಲ. ಆದರೆ ಕೊಡೆ ಮಾತ್ರ ಕೈಯಲ್ಲಿರುತ್ತದೆ.

subhas Chandra Bose: 76 ವರ್ಷಗಳ ಬಳಿಕವೂ ನಿಗೂಢ: ಇನ್ನೂ ಬಗೆಹರಿದಿಲ್ಲ ನೇತಾಜಿ ಸಾವಿನ ರಹಸ್ಯ?

ಗವರ್ನರಿಗೆ ಬೆವರಿಳಿಸಿದ ಬೋಸ್
ತಲೆಗೆ ಹ್ಯಾಟ್ ಧರಿಸಿ ಗವರ್ನರ್ ಜನರಲ್ ಕಚೇರಿಗೆ ಕಾಲಿರಿಸಿದ ಸುಭಾಷ್ ಬಗಲಲ್ಲೂ ಕೊಡೆಯೊಂದಿರುತ್ತದೆ! ಹಾಗೆ ಬಂದವರೇ ಕುರ್ಚಿಯಲ್ಲಿ ಆಸೀನರಾಗುತ್ತಾರೆ. ಅದನ್ನು ಕಂಡು ಕೆಂಡಾಮಂಡಲರಾದ ಗವರ್ನರ್, ‘ನಿನಗೆ ಮ್ಯಾನರ್ಸೆ ಗೊತ್ತಿಲ್ಲ. ನಿನ್ನನ್ನು ಐಸಿಎಸ್  ಪಾಸು ಮಾಡಿದವನಾರು?’ ಎಂದು ಚೀರಾಡುತ್ತಾರೆ! ಆಗ ಸುಭಾಷ್,‘ಯಾವ ಮ್ಯಾನರ್ಸ್ ಬಗ್ಗೆ ಮಾತನಾಡುತ್ತಿದ್ದೀರಿ ನೀವು?’ ಎಂದು ಕೇಳುತ್ತಾರೆ. ಗವರ್ನರ್ ಜನರಲ್, ‘ಒಳಬಂದ ಕೂಡಲೇ ಹ್ಯಾಟ್ ತೆಗೆದು ಗೌರವ ಸೂಚಿಸಬೇಕೆಂದು ನಿನಗೆ ಗೊತ್ತಿಲ್ಲವೇ? ಜತೆಗೆ ಕುಳಿತುಕೊಳ್ಳುವ ಮೊದಲು ನನ್ನ ಅನುಮತಿ ಕೇಳಲಿಲ್ಲ’ ಎನ್ನುತ್ತಾರೆ.

ಬಗಲಲ್ಲಿದ್ದ ಕೊಡೆಯ ಕೊಕ್ಕೆಯನ್ನು ಗವರ್ನರ್ ಜನರಲ್‌ನ ಕುತ್ತಿಗೆ ಸುತ್ತ ಹಾಕಿದ ಸುಭಾಷ್ ಹೇಳುತ್ತಾರೆ, ‘ನಡತೆ ಬಗ್ಗೆ ಮಾತನಾಡುವ ನೀನು ಮೊದಲು ಸರಿಯಾಗಿ ನಡೆದುಕೊ. ನಾನು ಒಳಬಂದಾಗ ನೀನು ಮೊದಲು ಎದ್ದು ನಿಲ್ಲಬೇಕಿತ್ತು. ಇಷ್ಟಕ್ಕೂ ಅತಿಥಿ ನಾನೋ, ನೀನೋ? ಹ್ಯಾಟು ತೆಗೆದು ಅತಿಥಿಗೆ ಮೊದಲು ನೀನು ಗೌರವ ಸೂಚಿಸಬೇಕಿತ್ತು. ಆದರೆ, ನೀನು ಆ ಕೆಲಸ ಮಾಡಿದೆಯಾ? ಹಾಗಿರುವಾಗ ನಾನೇಕೆ ಹ್ಯಾಟು ತೆಗೆದು ಗೌರವ ಸೂಚಿಸಲಿ? ಇನ್ನು ನಾನು ಒಳಬಂದಾಗ ಕುಳಿತುಕೊಂಡಿದ್ದೆ. ಅದಕ್ಕೆ ನನ್ನ ಅನುಮತಿ ಪಡೆದಿದ್ದೆಯಾ? ಅಂದಮೇಲೆ ನಾನೇಕೆ ನಿನ್ನ ಅನುಮತಿ ಪಡೆಯಬೇಕು? ನೀನು ಹೆಚ್ಚೆಂದರೆ ನನ್ನನ್ನು ಐಸಿಎಸ್‌ನಿಂದ ತಿರಸ್ಕರಿಸಬಹುದು. ಆದರೆ, ಆ ಅವಕಾಶ ನಿನಗೆ
ಕೊಡುವುದಿಲ್ಲ. ನಿನ್ನ ಐಸಿಎಸ್ ಅನ್ನು ನಾನೇ ತಿರಸ್ಕರಿಸುತ್ತಿದ್ದೇನೆ’ ಎಂದು ಹೊರಬಂದರು.

1930 ರಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಬಂಧಿತರಾದ ಸುಭಾಷ್ ಅದೇ ವರ್ಷ ನಡೆದ ಚುನಾವಣೆಯಲ್ಲಿ ಕೋಲ್ಕತಾದ ಮೇಯರ್ ಆಗಿ ಆಯ್ಕೆಯಾದರು. ನಂತರವೂ ಬಂಧನ ತಪ್ಪಲಿಲ್ಲ. ಈ ಮಧ್ಯೆ ಅನಾರೋಗ್ಯಕ್ಕೊಳಗಾದ ಬೋಸ್‌ರಿಗೆ ಟಿಬಿ ಕಾಯಿಲೆ ಬಂದಿದೆ ಎಂದು ತಿಳಿಯಿತು. ಹೆಚ್ಚಿನ ಚಿಕಿತ್ಸೆಗಾಗಿ ಸ್ವಿಜರ್‌ಲ್ಯಾಂಡ್‌ಗೆ ಕಳುಹಿಸಬೇಕೆಂದು ಶಿಫಾರಸು ಮಾಡಲಾಯಿತು. ಒಂದು ಕಡೆ ಚಿಕಿತ್ಸೆ ನೆಪದಲ್ಲಿ ದೇಶದಿಂದ ಹೊರದಬ್ಬಿದರೆ ದೊಡ್ಡ ತಲೆನೋವು ಕಡಿಮೆಯಾಗುತ್ತದೆ ಎಂದು ಬ್ರಿಟಿಷರು ಭಾವಿಸಿದರೆ, ಇನ್ನೊಂದೆಡೆ ದೇಶದಿಂದ ಹೊರಹೋದರೆ ಬ್ರಿಟಿಷರ ಅಡ್ಡಿ ಆತಂಕಗಳಿಲ್ಲದೆ ತಮ್ಮ ಚಟುವಟಿಕೆಗಳನ್ನು ಇನ್ನೂ ತೀವ್ರಗೊಳಿಸಬಹುದೆಂದು ಬೋಸ್ ಭಾವಿಸಿದ್ದರು.

ವಿದೇಶದಲ್ಲಿದ್ದುಕೊಂಡು ಸಂಘಟನೆ
1933, ಫೆಬ್ರವರಿ 23ರಂದು ಯುರೋಪಿನತ್ತ ಪಯಣ ಆರಂಭಿಸಿದ ಬೋಸ್, 36ರ ವರೆಗೂ ವಿದೇಶಗಳಲ್ಲಿದ್ದು ಭಾರತೀಯ ಕ್ರಾಂತಿಕಾರಿಗಳನ್ನು ಭೇಟಿಯಾದರು. ಜತೆಗೆ ಯುರೋಪಿನ ಸಮಾಜವಾದಿಗಳನ್ನೂ ಭೇಟಿಯಾಗಿ ಭಾರತದ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ಕೋರಿದರು. ಇಟಲಿಯ ಸರ್ವಾಧಿಕಾರಿ ಬೆನೆಟ್ ಮುಸೋಲಿನಿಯನ್ನು ಭೇಟಿ ಮಾಡಿದ ನಂತರ ವಿಯೆನ್ನಾವನ್ನೇ ತಮ್ಮ ಚಟುವಟಿಕೆಯ ಕೇಂದ್ರವಾಗಿಸಿಕೊಂಡರು. 1936, ಮಾರ್ಚ್ 27ರಂದು ಭಾರತಕ್ಕೆ ಆಗಮಿಸಿದ ಕೂಡಲೇ ಬೋಸರನ್ನು ನೇರವಾಗಿ ಸೆರೆಮನೆಗೆ ಕಳುಹಿಸಲಾಯಿತು. ಒಂದು ವರ್ಷ ಸುಮ್ಮನಿದ್ದು ಬಿಡುಗಡೆಯಾಗಿ ಹೊರಬಂದ ಕೂಡಲೇ ಕೋಲ್ಕತಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು. ಆ ವೇಳೆಗಾಗಲೇ ಸುಭಾಷ್ ಹಾಗೂ ಗಾಂಧಿ ಸಂಘರ್ಷ ತಣ್ಣಗಾಗಿತ್ತು. ಜತೆಗೆ ಸುಭಾಷ್ ಹೆಸರು ದೇಶಕ್ಕೇ ಪರಿಚಿತವಾಗಿತ್ತು. 1938 ರಲ್ಲಿ ಹರಿಪುರದಲ್ಲಿ ನಡೆಯಲಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬೋಸ್ ಮುಂದಾದರು.

ಗಾಂಧೀಜಿಯ ಅಭ್ಯರ್ಥಿ ಮಣಿಸಿದರು
ಬೋಸರನ್ನು ಎದುರಿಸುವ ತಾಕತ್ತು ಯಾರಿಗೂ ಇರಲಿಲ್ಲ. ಗಾಂಧೀಜಿಯವರು ಡಾ.ಪಟ್ಟಾಭಿ ಸೀತಾರಾಮಯ್ಯ ಎಂಬ ತಮ್ಮ ಬೆಂಬಲಿಗರನ್ನು ಉಮೇದುದಾರರನ್ನಾಗಿ ಮಾಡಿ, ‘ಇವರ ಸೋಲು ನನ್ನ ಸೋಲು’ ಎಂದರು. ಆದರೆ, ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿದ್ದ ಯುವ ಮನಸ್ಸುಗಳು ಬೋಸ್‌ರ ಬೆಂಬಲಕ್ಕೆ ನಿಂತ ಕಾರಣ ಪಟ್ಟಾಭಿ ಸೀತಾರಾಮಯ್ಯ ಸೋತು ಬೋಸ್ ವಿಜಯಿಯಾದರು. ಬೋಸ್‌ರನ್ನು ಅಧ್ಯಕ್ಷರೆಂದು ಘೋಷಿಸುವ ಸಮಾರಂಭಕ್ಕೆ ಗಾಂಧೀಜಿ ಹೋಗಲಿಲ್ಲ. ಆದರೇನಂತೆ, ಸ್ವಾತಂತ್ರ್ಯ ಗಳಿಸುವುದಷ್ಟೇ ನಮ್ಮೆಲ್ಲರ ಏಕಮಾತ್ರ ಗುರಿಯಾಗಬೇಕು, ವೈಯಕ್ತಿಕ ಪ್ರತಿಷ್ಠೆ ಹಾಗೂ ಮಹತ್ವಾಕಾಂಕ್ಷೆಗೆ ಪಕ್ಷ-ಚಳವಳಿ ಒಡೆಯಬಾರದು ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೇ ಬೋಸ್ ರಾಜಿನಾಮೆ ನೀಡಿದರು. ಅಷ್ಟೇ ಅಲ್ಲ, 1941 ಜನವರಿ 19 ರಂದು ಬ್ರಿಟಿಷರ ಕಣ್ತಪ್ಪಿಸಿ ಜರ್ಮನಿ ಹಾಗೂಜಪಾನ್‌ಗೆ ತೆರಳುವ ಮೂಲಕ ದೇಶದಿಂದಲೇ ಹೊರನಡೆದರು. ಊಹಿಸಿಕೊಳ್ಳಿ ಮುಸೊಲಿನಿ, ಹಿಟ್ಲರ್‌ರನ್ನು ಭೇಟಿಯಾಗುವುದೆಂದರೆ ಸಾಮಾನ್ಯ ಮಾತೇ? ಅದೂ ಯಾವ ರಾಷ್ಟ್ರದ ಪ್ರಧಾನಿ, ಅಧ್ಯಕ್ಷರಾಗದೆ, ಕೇವಲ ಒಬ್ಬ ಕ್ರಾಂತಿಕಾರಿಗಳ ನೇತಾರನಾಗಿ!

ದಾಸ್ಯ ಮುಕ್ತಿಗೆ ಪ್ರತಿಜ್ಞೆ
ಆ ಮೂಲಕ ವಿದೇಶದಲ್ಲೇ ಆಜಾದ್ ಹಿಂದ್ ಫೌಜ್ ಕಟ್ಟಿದ್ದ ಅವರು ಬಂದೂಕಿನಿಂದ ಸ್ವಾತಂತ್ರ್ಯ ಪಡೆಯಲು ಮುಂದಾದರು. ನಿಮಗೆ ಗೊತ್ತಿರಲಿ, 1943 ರಲ್ಲಿ ಬ್ರಿಟಿಷರಿಂದ ಮುಕ್ತಿ ಪಡೆದ ನಮ್ಮ ದೇಶದ ಮೊಟ್ಟಮೊದಲ ಭಾಗಗಳೆಂದರೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು. ಅವುಗಳನ್ನು ಗೆದ್ದುಕೊಂಡ ಸುಭಾಷ್ ಸ್ವರಾಜ್ ಹಾಗೂ ಶಹೀದ್ ಎಂದು ಹೆಸರಿಟ್ಟು ಅಲ್ಲಿ ದಾಸ್ಯಮುಕ್ತ ಆಡಳಿತ ಆರಂಭಿಸಿದರು. ನನಗೆ ರಕ್ತವನ್ನು ನೀಡಿ ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ ಎಂದು ದೇಶವಾಸಿಗಳಿಗೆ ಕರೆಕೊಟ್ಟಿದ್ದೂ ಅದೇ ಸಂದರ್ಭದಲ್ಲಿ.

ಎಷ್ಟೇ ಆಗಲಿ, ಇತಿಹಾಸ ಸೃಷ್ಟಿಯಾಗುವುದು ಹೇಡಿಗಳಿಂದಲ್ಲ, ಸುಭಾಷ್‌ರಂಥ ವೀರಕಲಿಗಳಿಂದ. ನಿಮಗೆ ಇನ್ನೂ ಒಂದು ಅಂಶ ಗೊತ್ತಿರಲಿ, ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ (1945 ರಿಂದ 51) ಬ್ರಿಟನ್‌ನಲ್ಲಿ ಆಡಳಿತ ನಡೆಸುತ್ತಿದ್ದುದು ಲೇಬರ್ ಪಕ್ಷ ಹಾಗೂ ಪ್ರಧಾನಿಯಾಗಿದ್ದಿದ್ದು ಕ್ಲೆಮೆಂಟ್ ಅಟ್ಲಿ. ಅವತ್ತು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ವಿಧೇಯಕವನ್ನು ಅಟ್ಲಿ ಬ್ರಿಟನ್ ಸಂಸತ್ತಿನ ಮುಂದಿಟ್ಟಾಗ ವಿನ್‌ಸ್ಟನ್ ಚರ್ಚಿಲ್ ಖಡಾಖಂಡಿತವಾಗಿ ವಿರೋಧಿಸಿದರು. ಒಂದು ವೇಳೆ, ಅಟ್ಲಿ ಪ್ರಧಾನಿಯಾಗಿಲ್ಲದೇ ಇದ್ದರೆ ಭಾರತಕ್ಕೆ ಸ್ವಾತಂತ್ರ್ಯ ದೊರಕುವುದು ಇನ್ನೂ ವಿಳಂಬವಾಗುತ್ತಿತ್ತು. ಅಂದು ಅಟ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವುದಕ್ಕೆ ಒಲವು ತೋರಿಸಿದ್ದರ ಹಿಂದೆಯೂ ಒಂದು ಕಾರಣವಿದೆ.

1938ರಲ್ಲಿ ಬ್ರಿಟನ್ ಪ್ರವಾಸ ಕೈಗೊಂಡಿದ್ದಾಗ ಲೇಬರ್ ಪಕ್ಷದ ನೇತಾರರಾದ ಕ್ಲೆಮೆಂಟ್ ಅಟ್ಲಿ, ಅರ್ಥರ್ ಗ್ರೀನ್ವುಡ್, ಹೆರಾಲ್ಡ್ ಲಾಸ್ಕಿ, ಜಿಡಿಎಸ್ ಕೋಲ್ ಮತ್ತು ಸರ್ ಸ್ಟಾಫೋರ್ಡ್ ಕ್ರಿಪ್ಸ್ ಮುಂತಾದವರಿಗೆ ಭಾರತಕ್ಕೆ ಏಕೆ ಸ್ವಾತಂತ್ರ್ಯ ನೀಡಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇ ಸುಭಾಷ್‌ಚಂದ್ರ ಬೋಸ್! ಅದು 1947 ರಲ್ಲಿ ನಮ್ಮ ನೆರವಿಗೆ ಬಂತು. 1897, ಜನವರಿ 23ರಂದು ಜನಿಸಿದ ಸುಭಾಷ್‌ಚಂದ್ರ ಬೋಸ್ ಇವತ್ತು 125 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮೊಳಗೆ ಸ್ವಾಭಿಮಾನ, ಹೋರಾಟ ಮನೋಭಾವನೆ ತುಂಬಿದ ಅವರನ್ನು ಮರೆಯಲಾದೀತೆ? 

- ಪ್ರತಾಪ್ ಸಿಂಹ, ಸಂಸತ್ ಸದಸ್ಯ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ 

Follow Us:
Download App:
  • android
  • ios