'ಹುಷಾರಾಗಿರಿ ಬಿಜೆಪಿಯವ್ರು ದೇವ್ರನ್ನೂ ಕದೀತಾರೆ..' ಜ್ಯೋತಿರ್ಲಿಂಗ ವಿವಾದಕ್ಕೆ ಶಿವಸೇನೆ, ಎನ್‌ಸಿಪಿ ಟೀಕೆ!
ಅಸ್ಸಾಂ ಸರ್ಕಾರ ಇತ್ತೀಚೆಗೆ ನೀಡಿದ ಜಾಹೀರಾತಿನಲ್ಲಿ ದೇಶದ 6ನೇ ಜ್ಯೋತಿರ್ಲಿಂಗ ಕ್ಷೇತ್ರ ತನ್ನ ರಾಜ್ಯದಲ್ಲಿದೆ ಎಂದು ತಿಳಿಸಿತ್ತು. ಆದರೆ, ಇದಕ್ಕೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರವೀಗ ಮಹಾರಾಷ್ಟ್ರದ ಧಾರ್ಮಿಕ ಕ್ಷೇತ್ರಗಳನ್ನೂ ಕದಿಯುವ ಹುನ್ನಾರ ನಡೆಸುತ್ತಿದೆ ಎಂದು ಆರೋಪ ಮಾಡಿದೆ.
ನವದೆಹಲಿ (ಫೆ.16): ದೇಶದ ಆರನೇ ಜ್ಯೋತಿರ್ಲಿಂಗ ವಿಚಾರವಾಗಿ ಅಸ್ಸಾಂ ಸರ್ಕಾರ ಹಾಗೂ ಮಹಾರಾಷ್ಟ್ರದ ವಿರೋಧ ಪಕ್ಷಗಳ ನಡುವೆ ವಾಕ್ಸಮರ ಆರಂಭವಾಗಿದೆ. ಫೆಬ್ರವರಿ 14 ರಂದು ಜಾಹೀರಾತು ಪ್ರಕಟ ಮಾಡಿದ್ದ ಅಸ್ಸಾಂ ಸರ್ಕಾರ, ಮಹಾಶಿವರಾತ್ರಿ ಹಬ್ಬದ ಆಚರಣೆಗಾಗಿ ಭಕ್ತಾದಿಗಳು ಹಾಗೂ ಪ್ರವಾಸಿಗರನ್ನು ಅಸ್ಸಾಂಗೆ ಆಹ್ವಾನ ನೀಡಿರುವ ಜಾಹೀರಾತು ಇದಾಗಿದೆ. ಈ ಜಾಹೀರಾತಿನಲ್ಲಿ ದೇಶದ ಆರನೇ ಜ್ಯೋತಿರ್ಲಿಂಗ ಅಸ್ಸಾಂ ಕಾಮರೂಪದಲ್ಲಿರುವ ಡಾಕಿಣಿ ಹಿಲ್ಸ್ (ಡಾಕಿಣಿ ಪರ್ವತ ಪ್ರದೇಶ) ಭಾಗದಲ್ಲಿದೆ ಎಂದು ತಿಳಿಸಲಾಗಿತ್ತು. ಅಸ್ಸಾಂ ಸರ್ಕಾರದ ಈ ಜಾಹೀರಾತಿಗೆ ಮಹಾರಾಷ್ಟ್ರದ ರಾಷ್ಟ್ರೀಯವಾದ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಹಾಗೂ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಬಿಜೆಪಿ ವಿರುದ್ಧ ಕಿಡಿಕಾರಿದೆ. ದೇಶದ ಆರನೇ ಜ್ಯೋತಿರ್ಲಿಂಗ ಭೀಮಾಶಂಕರ ದೇವಸ್ಥಾನ ಮಹಾರಾಷ್ಟ್ರದ ಪುಣೆಯಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಾಗಿದ್ದರೂ, ಅಸ್ಸಾಂ ಸರ್ಕಾರ ದೇಶದ ಆರನೇ ಜ್ಯೋತಿರ್ಲಿಂಗ ದೇವಸ್ಥಾನ ತನ್ನ ರಾಜ್ಯದಲ್ಲಿದೆ ಎಂದು ಜಾಹೀರಾತು ನೀಡಿದ್ದೇಕೆ ಎಂದು ಪ್ರಶ್ನೆ ಮಾಡಿವೆ.
ಬಿಜೆಪಿ ಇಲ್ಲಿಯವರೆಗೂ ಮಹಾರಾಷ್ಟ್ರದಲ್ಲಿನ ಉದ್ದಿಮೆಗಳು ಹಾಗೂ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದವು. ಈಗ ನಮ್ಮ ರಾಜ್ಯದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಂಸ್ಕೃತಿಯನ್ನೇ ಕದಿಯಲು ಸಿದ್ಧವಾದಂತೆ ಕಾಣುತ್ತಿದೆ ಎಂದು ಶಿವಸೇನೆ (ಉದ್ಧವ್) ಹಾಗೂ ಎನ್‌ಸಿಪಿ ಆರೋಪ ಮಾಡಿವೆ. ಈಗಾಗಲೇ 22 ಸಾವಿರ ಕೋಟಿಯ ಟಾಟಾ-ಏರ್‌ಬಸ್ ಸಿ-295 ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್ ಪ್ರಾಜೆಕ್ಸ್ ಹಾಗೂ 1.63 ಲಕ್ಷ ಕೋಟಿ ರೂಪಾಇಗ ವೇದಾಂತ ಫಾಕ್ಸ್‌ಕಾನ್ ಪ್ರಾಜೆಕ್ಟ್ ಕಳೆದ ವರ್ಷ ಮಹಾರಾಷ್ಟ್ರದಿಂದ ಗುಜರಾತ್‌ಗೆ ಶಿಫ್ಟ್ ಆಗಿದೆ.
ಫೆ.14ಕ್ಕೆ ಜಾಹೀರಾತು ನೀಡಿದ್ದ ಅಸ್ಸಾಂ ಸರ್ಕಾರ: ಮಹಾಶಿವರಾತ್ರಿ ಸಂಭ್ರಮವನ್ನು ಆಚರಿಸುವ ಸಲುವಾಗಿ ಅಸ್ಸಾಂ ಸರ್ಕಾರ ಫೆ.14 ರಂದು ಎಲ್ಲಾ ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಇದರಲ್ಲಿ ಅಸ್ಸಾಂನ ಕಾಮರೂಪ ಜಿಲ್ಲೆಯಲ್ಲಿರುವ ಡಾಕಿಣಿ ಪರ್ವತದ ಬಳಿ ಇರುವ ದೇಶದ ಆರನೇ ಜ್ಯೋತಿರ್ಲಿಂಗಕ್ಕೆ ಎಲ್ಲರಿಗೂ ಸ್ವಾಗತ ಎಂದು ಬರೆಯಲಾಗಿತ್ತು. ಈ ಜಾಹೀರಾತಿನಲ್ಲಿ ದೇಶದ ಎಲ್ಲಾ 12 ಜ್ಯೋತಿರ್ಲಿಂಗಗಳನ್ನು ಹೆಸರಿಸಲಾಗಿತ್ತು. ಆರನೇ ಜ್ಯೋತಿರ್ಲಿಂಗವಾಗಿರುವ ಪುಣೆಯ ಭೀಮಾಶಂಕರ ದೇವಸ್ಥಾನದ ಬದಲಿಗೆ ಅಸ್ಸಾಂನ ಭೀಮಾಶಂಕರವನ್ನು ಆರನೇ ಜ್ಯೋತಿರ್ಲಿಂಗ ಎಂದು ವಿವರಣೆ ನೀಡಲಾಗಿತ್ತು.
ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಈ ವಿಚಾರವಾಗಿ ಅಸ್ಸಾಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಏನೂ ಕೂಡ ಇರಬಾರದು ಎಂದು ಬಿಜೆಪಿ ನಾಯಕರು ನಿರ್ಧಾರ ಮಾಡಿರುವಂತಿದೆ. ಮೊದಲಿಗೆ ಬಿಜೆಪಿ ಇಲ್ಲಿದ್ದ ಉದ್ದಿಮೆಗಳು ಹಾಗೂ ಉದ್ಯೋಗವನ್ನು ಕಿತ್ತಿಕೊಂಡು ಹೋಗಿತ್ತು. ಈಗ ನಮ್ಮ ಸಂಸ್ಕೃತಿ ಹಾಗೂ ಆಧ್ಯಾತ್ಮಕ ಗುರುತನ್ನು ಕದ್ದುಕೊಂಡು ಹೋಗುತ್ತಿದೆ ಎಂದು ಟೀಕೆ ಮಾಡಿದ್ದಾರೆ.
ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಮಹಾಕಾಲ್ ಭಕ್ತರಿಗೆ ಮತ್ತೊಂದು ಕೊಡುಗೆ, ಜಿಯೋ ಟ್ರು 5ಜಿ ಸೇವೆ!
ಶ್ರೀಮದ್ ಆದಿ ಶಂಕರಾಚಾರ್ಯರು ತಮ್ಮ ಬೃಹತ್ ರತ್ನಾಕರ ಸ್ತೋತ್ರದಲ್ಲಿ ಭೀಮಾನದಿ ಮತ್ತು ಡಾಕಿಣಿ ವನಗಳ ಮೂಲ ಭೀಮಾಶಂಕರ ಜ್ಯೋತಿರ್ಲಿಂಗ ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಸುಳೆ ಹೇಳಿದ್ದಾರೆ. ಅದಕ್ಕಾಗಿಯೇ ಪುಣೆಯ ಭೀಮಾಶಂಕರ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈಗ ಅದನ್ನು ಯಾವ ರೀತಿ ಸಾಬೀತು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ವಿಷಯದ ಕಡೆ ಗಮನ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಸುಳೆ ಹೇಳಿದರು. ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿಗೆ ತಿಳಿಸಿ ತಮ್ಮ ಆಕ್ಷೇಪಣೆಯನ್ನು ದಾಖಲಿಸುವಂತೆ ಏಕನಾಥ್ ಶಿಂಧೆ ಅವರನ್ನು ಒತ್ತಾಯಿಸಿದರು.
ಜ್ಯೋತಿರ್ಲಿಂಗ ಸರಣಿ: ಗೂಳಿ ಬೆನ್ನಿನಿಂದ ಜ್ಯೋತಿರ್ಲಿಂಗವಾಗಿ ಕಾಣಿಸಿದ ಕೇದಾರನಾಥ!
ಉದ್ದಿಮೆಗಳನ್ನು ಬಿಡಿ ಬಿಜಿಪಿ ಈಗ ಮಹಾರಾಷ್ಟ್ರದಿಂದ ಭಗವಾನ್ ಶಿವನನ್ನು ಕದಿಯುತ್ತಿದೆ. ಅಸ್ಸಾಂನ ಬಿಜೆಪಿ ಸರ್ಕಾರವು ಪುಣೆಯಲ್ಲಿರುವ ದೇಶದ ಆರನೇ ಜ್ಯೋತಿರ್ಲಿಂಗವನ್ನು ಅಸ್ಸಾಂನಲ್ಲಿದೆ ಎಂದು ಘೋಷಿಸಿದೆ. ಈ ವಿಷಯದಲ್ಲಿ ಶಿಂಧೆ-ಫಡ್ನವೀಸ್ ಸರ್ಕಾರ ತನ್ನ ನಿಲುವನ್ನು ಮಂಡಿಸಬೇಕು ಮತ್ತು ಮಹಾರಾಷ್ಟ್ರದ 12 ಕೋಟಿ ಜನರ ಮತ್ತು ಎಲ್ಲಾ ದೇಶವಾಸಿಗಳ ಭಾವನೆಗಳಿಗೆ ಧಕ್ಕೆ ತಂದಿರುವ ಬಿಜೆಪಿ ಸರ್ಕಾರದ ಈ ಕ್ರಮವನ್ನು ಖಂಡಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಟ್ವೀಟ್ ಮಾಡಿದ್ದಾರೆ.