ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಿಂದಾಗಿ ಕಡಲೆಕಾಯಿ ಬೆಳೆ ಕೊಚ್ಚಿಹೋದ ರೈತನಿಗೆ ಕೇಂದ್ರ ಸಚಿವರು ನೆರವಿನ ಹಸ್ತ ಚಾಚಿದ್ದಾರೆ. ವೈರಲ್ ಆದ ವೀಡಿಯೊವನ್ನು ಗಮನಿಸಿದ ಕೇಂದ್ರ ಕೃಷಿ ಸಚಿವರು ರೈತನಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ನವದೆಹಲಿ: ಅಕಾಲಿಕ ಮಳೆ ಆದಾಗಲೆಲ್ಲಾ ಕಷ್ಟಕ್ಕೆ ಸಿಲುಕುವುದು ಅನ್ನದಾತರೆನಿಸಿದ ರೈತರು, ಬೆಳೆ ಕೊಯ್ಲಿನ ಸಮಯಕ್ಕೆ ಸರಿಯಾಗಿ ಮಳೆ ಬಂದರೆ ಅರ್ಧಕ್ಕರ್ಧ ಬೆಳೆ ಹಾಳಾಗುವುದು. ಇನ್ನುಳಿದ ಬೆಳೆಗೆ ಬೆಲೆಯೂ ಸಿಗದೇ ರೈತ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾನೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದ ರೈತರೊಬ್ಬರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿರುವ ವೀಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದು ಮಹಾರಾಷ್ಟ್ರದೆಲ್ಲೆಡೆ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟಕ್ಕೊಳಗಾದ ರೈತರ ಸಂಕಷ್ಟವನ್ನು ತೋರಿಸುವಂತಿತ್ತು ಈ ವೀಡಿಯೋ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈಗ ಕೇಂದ್ರ ಸಚಿವರು ಕೂಡ ಈ ವೀಡಿಯೋವನ್ನು ಗಮನಿಸಿದ್ದು ಆ ರೈತನಿಗೆ ನೆರವಿನ ಹಸ್ತ ಚಾಚಿದ್ದಾರೆ.
ವೀಡಿಯೋದಲ್ಲಿ ಕಾಣುವಂತೆ ಮಹಾರಾಷ್ಟ್ರದ ಗೌರವ್ ಪನ್ವರ್ ಎಂಬ ರೈತ ತಾವು ಬೆಳೆದ ಕಡಲೆಕಾಯಿಯನ್ನು ಮಾರುವುದಕ್ಕಾಗಿ ವಾಸೀಂನ ಮಾರುಕಟ್ಟೆಗೆ ತೆಗೆದುಕೊಂಡು ಬಂದಿದ್ದರು., ಇದೇ ವೇಳೆ ಜೋರಾಗಿ ಮಳೆ ಸುರಿದಿದ್ದು, ಕಡಲೆಕಾಯಿ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ. ಗೌರವ್ ಪನ್ವರ್ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಕಡಲೆಕಾಯಿಗಳನ್ನು ರಕ್ಷಿಸಿಕೊಳ್ಳಲು ಹತಾಶ ಪ್ರಯತ್ನ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ಮನಕಲುಕುವ ದೃಶ್ಯ ಕೇಂದ್ರ ಸಚಿವರ ಗಮನಕ್ಕೂ ಬಂದಿದ್ದು, ರೈತನಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ.
ವೀಡಿಯೋ ನೋಡಿ ರೈತನಿಗೆ ಕರೆ ಮಾಡಿದ ಕೇಂದ್ರ ಕೃಷಿ ಸಚಿವ ನಷ್ಟಕ್ಕೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ರೈತನೊಂದಿಗೆ ನಡೆಸಿದ ಸಂವಹನವನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಔಹಾಣ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಾತುಕತೆಯ ವೇಳೆ ರೈತ ಈ ಘಟನೆಯಿಂದ ತನಗೆ ತುಂಬಾ ಹಾನಿ ಆಗಿರುವುದಾಗಿ ಹೇಳುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ.
ವಿಡಿಯೋ ನೋಡಿ ನನಗೆ ತುಂಬಾ ನೋವಾಯಿತು. ಆದರೆ ಚಿಂತಿಸಬೇಡಿ. ಮಹಾರಾಷ್ಟ್ರ ಸರ್ಕಾರ ರೈತರ ಸಮಸ್ಯೆಗೆ ತುಂಬಾ ಸೂಕ್ಷ್ಮವಾಗಿದೆ. ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯದ ಕೃಷಿ ಸಚಿವರೊಂದಿಗೆ ಮಾತನಾಡಿದ್ದೇನೆ. ನಾನು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಯಾವುದೇ ನಷ್ಟ ಸಂಭವಿಸಿದ್ದರೂ ಅದನ್ನು ಸರಿದೂಗಿಸಲಾಗುವುದು, ಇದರಿಂದ ನೀವು ಮತ್ತು ನಿಮ್ಮ ಕುಟುಂಬಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಚೌಹಾಣ್ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ.
ಸೋಮವಾರದೊಳಗೆ ಅವರು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ನಾವೆಲ್ಲರೂ ನಿಮ್ಮೊಂದಿಗಿದ್ದೇವ ಎಂದು ಸಚಿವರು ಭರವಸೆ ನೀಡಿದರು. ಇತ್ತ ಮಳೆಯಲ್ಲಿ ಒದ್ದೆಯಾದ ಕಾರಣ, ಸ್ವಲ್ಪ ಅಸ್ವಸ್ಥರಾಗಿರುವುದಾಗಿ ಪನ್ವರ್ ಅವರು ಸಚಿವರಿಗೆ ತಿಳಿಸಿದರು. ಇದಕ್ಕೂ ಮೊದಲು, ಮಹಾರಾಷ್ಟ್ರ ಎನ್‌ಸಿಪಿ (ಶರದ್ ಪವಾರ್) ಅಧ್ಯಕ್ಷ ಜಯಂತ್ ಪಾಟೀಲ್ ಕೂಡ ರೈತನ ಈ ವೀಡಿಯೊವನ್ನು ಉಲ್ಲೇಖಿಸಿ, ಸಂತ್ರಸ್ತ ರೈತರಿಗೆ ಪರಿಹಾರ ಮತ್ತು ಬೆಂಬಲ ನೀಡಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಭಾರೀ ಅಕಾಲಿಕ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಇದು ಗಮನಾರ್ಹವಾಗಿ ಬೆಳೆ ಹಾನಿಯನ್ನುಂಟುಮಾಡಿದೆ ಮತ್ತು ಹವಾಮಾನ ಇಲಾಖೆಯು ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದೆ. ಸಂತ್ರಸ್ತ ರೈತರಿಗೆ ತಕ್ಷಣದ ಸಹಾಯವನ್ನು ಒದಗಿಸುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


