ಬೆಂಗಳೂರಿನಲ್ಲಿ ಭಾರಿ ಮಳೆ ಆರಂಭಗೊಂಡಿದೆ. ನಗರದ ಹಲವು ಭಾಗದಲ್ಲಿ ಮಳೆ ಸುರಿಯುತ್ತಿದೆ. ಇದರ ಜೊತೆಗೆ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಮುಂದಿನ 5 ದಿನ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದೆ.
ಬೆಂಗಳೂರು(ಮೇ.18) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದೀಗ ಬೆಂಗಳೂರಿನ ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಭಾರಿ ಮಳೆಯಾಗುತ್ತಿರುವ ಕಾರಣ ಹಲವು ರಸ್ತೆಗಳು ಜಲಾವೃತಗೊಂಡಿದೆ. ವಾಹನ ಸವಾರರು ಪರದಾಡುವಂತಾಗಿದೆ. ಸಂಜೆಯಾಗುತ್ತಿದಂತೆ ಮಳೆ ವಕ್ಕರಿಸುತ್ತಿರುವ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆ ನೀಡಿದೆ. ಮುಂದಿನ 5 ದಿನ ಕರ್ನಾಟಕದಲ್ಲಿ ಭಾರಿ ಮಳೆಯಾಗಲಿದೆ ಎಂದು ಸೂಚಿಸಿದೆ.
ಮೂರು ದಿನ ಬೆಂಗಳೂರಿನಲ್ಲಿ ಆರೇಂಜ್ ಅಲರ್ಟ್
ಬೆಂಗಳೂರಿನಲ್ಲಿ ಮೇ.17 ರಿಂದ ಭಾರಿ ಮಳೆಯಾಗುತ್ತಿದೆ. ಮೇ.17 ಸೇರಿದಂತೆ ಮೂರು ದಿನಗಳ ಕಾಲ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಇದರಂತೆ ಇಂದೂ ಕೂಡ ಭಾರಿ ಮಳೆಯಾಗುತ್ತಿದೆ. ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಅಬ್ಬರಿಸುತ್ತಿದೆ. ಇಂದು ಸಂಜೆಯಾದರೂ ಮಳೆಯಾರ ವಕ್ಕರಿಸಿರಲಿಲ್ಲ. ಹೀಗಾಗಿ ಜನರು ರಿಲೀಫ್ ಆಗಿದ್ದು. ಆದರೆ ಬೆಂಗಳೂರಿಗೆ ಮಳೆರಾಯ ಮತ್ತೆ ತಂಪೆರೆದಿದ್ದಾನೆ. ಹಲವು ರಸ್ತೆಗಳು ನೀರಿನಿಂದ ತುಂಬಿದೆ.
ಕರ್ನಾಟಕದ ಹಲವು ಜಿಲ್ಲೆಗಳಿಗೆ ಆರೇಂಜ್-ಯೆಲ್ಲೋ ಅಲರ್ಟ್
ರಾಜ್ಯ ಹವಾಮಾನ ಇಲಾಖೆ ಮಹತ್ವದ ಸೂಚನೆ ನೀಡಿದೆ. ರಾಜ್ಯದಲ್ಲಿ ಭಾರಿ ಮಳೆ ಸಂಭವವಿದೆ ಎಂದಿದೆ. ಅರಬ್ಬಿ ಸಮುದ್ರದಲ್ಲಿ ವಾಯುಬಾರ ಕುಸಿತವಾಗುವ ಸಾಧ್ಯತೆ ಇರುವ ಕಾರಣ ಕರ್ನಾಟಕದಲ್ಲಿ ಭಾರಿ ಮಳೆಯಾಗಲಿದೆ. ಇಂದಿನಿಂದ(ಮೇ.18) ಮೇ.22ರ ವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದಿದೆ. ಇದರ ಜೊತೆಗೆ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಹೇಳಿದ್ದಾರೆ. ಹೀಗಾಗಿ ಕೆಲ ಜೆಲ್ಲಿಗಳಿಗೆ ಯೆಲ್ಲೋ ಅಲರ್ಟ್ ಹಾಗೂ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಇಂದು ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ಕಕ್ಕೇರಿಯಲ್ಲಿ 13cm, ಶೋರಾಪುರ 10cm ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ 9cm ಹಾಗೂ ಬೆಂಗಳೂರಲ್ಲಿ 3cm ಮಳೆಯಾಗಿದೆ. ದಕ್ಷಿಣ ಕನ್ನಡ, ಕೊಡುಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.


