ಎತ್ತರದ ಹೆಚ್ಚಳದ ವರದಿ ಸಲ್ಲಿಕೆವರೆಗೂ ಏರಿಕೆ ತಡೆಗೆ ಕರ್ನಾಟಕಕ್ಕೆ ಪತ್ರ, ಒಪ್ಪದೇ ಇದ್ದರೆ ಸುಪ್ರೀಂಕೋರ್ಚ್‌ಗೆ ಅರ್ಜಿ: ಮಹಾ ಡಿಸಿಎಂ ಫಡ್ನವೀಸ್‌. 

ನಾಗಪುರ(ಡಿ.29):  ಬೆಳಗಾವಿ ಸೇರಿ ಪ್ರಮುಖ ನಗರಗಳು ಮತ್ತು 865 ಹಳ್ಳಿಗಳು ತಮ್ಮದೆಂದು ವಾದಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿ ಕರ್ನಾಟಕದ ಜೊತೆಗೆ ಗಡಿ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಸರ್ಕಾರ, ಇದೀಗ ಕೃಷ್ಣಾ ನದಿಗೆ ಕಟ್ಟಲಾಗಿರುವ ಆಲಮಟ್ಟಿ ಆಣೆಕಟ್ಟಿ ವಿಷಯವನ್ನೂ ಸುಪ್ರೀಂಕೋರ್ಟ್‌ಗೆ ಕೊಂಡೊಯ್ಯುವ ಬೆದರಿಕೆ ಹಾಕಿದೆ.

ಈ ಕುರಿತು ಬುಧವಾರ ವಿಧಾನಸಭೆಗೆ ಮಾಹಿತಿ ನೀಡಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಆಲಮಟ್ಟೆ ಅಣೆಕಟ್ಟಿನ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಎತ್ತರಿಸುವುದರಿಂದ ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಮೇಲೆ ಆಗುವ ಪರಿಣಾಮಗಳ ಅಧ್ಯಯನಕ್ಕೆ ನಂದಕುಮಾರ್‌ ವದೆರ್ನಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 2020ರಲ್ಲಿ ವರದಿ ಸಲ್ಲಿಸಿದ್ದ ಸಮಿತಿಯು ಆಣೆಕಟ್ಟು ಎತ್ತರದಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿತ್ತು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ, ಎಚ್‌ಕೆಪಿ

ಆದರೆ 2021ರಲ್ಲಿ ಸಮಿತಿಯ ಅಧ್ಯಕ್ಷ ವದೆರ್ನಾ ಅಂದಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಪತ್ರ ಬರೆದು, ಕರ್ನಾಟಕ ಸರ್ಕಾರ ಚೆಕ್‌ಡ್ಯಾಮ್‌ ಕಟ್ಟುವ ವಿಷಯ ಸಮಿತಿಗೆ ಗೊತ್ತಿರಲಿಲ್ಲ. ಒಂದು ವೇಳೆ ಚೆಕ್‌ಡ್ಯಾಂ ನಿರ್ಮಾಣವಾದರೆ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಹೀಗಾಗಿ ಹೊಸದಾಗಿ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ. ಆ ಸಮಿತಿ ವರದಿ ನೀಡುವವರೆಗೂ ಕರ್ನಾಟಕ ಸರ್ಕಾರ ಆಣೆಕಟ್ಟಿನ ಎತ್ತರ ಹೆಚ್ಚಿಸುವ ಕಾಮಗಾರಿ ಸ್ಥಗಿತ ಮಾಡಬೇಕು. ಇಲ್ಲದೆ ಹೋದಲ್ಲಿ ಈ ಬಗ್ಗೆ ನಾವು ಸುಪ್ರೀಂಕೋರ್ಟ್‌ ಮೆಟ್ಟಿಲೇರಲಿದ್ದೇವೆ ಎಂದು ಫಡ್ನವೀಸ್‌ ಬುಧವಾರ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.