ನಿನ್ನೆ ಹತ್ಯೆಯಾದ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹಮ್ಮದ್ ಅಂತ್ಯಕ್ರಿಯೆ ನಡೆದಿದೆ. ಯುಪಿ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ನೆರವೇರಿಸಲಾಗಿದೆ.
ಲಖನೌ(ಏ.16): ಉತ್ತರ ಪ್ರದೇಶವನ್ನು ಕೊಲೆ,ಸುಲಿಗೆ ಮೂಲಕ ನಡುಗಿಸಿದ್ದ ಮಾಫಿಯಾ ಡಾನ್, ಮಾಜಿ ಸಂಸತ ಅತೀಕ್ ಅಹಮ್ಮದ್ ಹಾಗೂ ಸಹೋದರ ಅಶ್ರಫ್ ಅಹಮ್ಮದ್ ನಿನ್ನೆ ತಡ ರಾತ್ರಿ ಗುಂಡಿನ ದಾಳಿಗೆ ಬಲಿಯಾಗಿದ್ದರು. ಇಂದು ಯುಪಿ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಹತ್ಯೆಯಾದ ಅತೀಕ್ ಹಾಗೂ ಅಶ್ರಫ್ ಅಂತ್ಯಕ್ರಿಯೆ ನೇರವೇರಿಸಲಾಗಿದೆ. ಅಂತ್ಯಕ್ರಿಯೆ ವೇಳೆ ಅತೀಕ್ ಕುಟುಂಬಸ್ಥರು, ಸಮುದಾಯದ ಮುಖಂಡರು ಸೇರಿದಂತೆ ಅತೀಕ್ ಬೆಂಬಲಿಗರು ಪಾಲ್ಗೊಂಡಿದ್ದರು. ಅಂತ್ಯಕ್ರಿಯೆ ಆಗಮಿಸುವ ಪ್ರತಿಯೊಬ್ಬರನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ಮೂಲಕ ನಿನ್ನೆ ಘಟನೆಯಿಂದ ಯುಪಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಪ್ರಯಾಗ್‌ರಾಜ್ ಸಮೀಪದ ಕಸರಿ ಮಸರಿಯ ಸ್ಮಶಾನದಲ್ಲಿ ಅತೀಕ್ ಹಾಗೂ ಅಶ್ರಫ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇದೇ ಸ್ಮಶಾನದಲ್ಲಿ ಅತೀಕ್ ಪೋಷಕರು ಸೇರಿದಂತೆ ಪೂರ್ವಜರ ಸಮಾಧಿಗಳಿವೆ. ಪೋಷಕರ ಸಮಾದಿ ಬಳಿಯೇ ಅತೀಕ್ ಅಂತ್ಯಕ್ರಿಯೆ ನೇರವೇರಿಸಲಾಗಿದೆ.
ಮಗನ ಎನ್‌ಕೌಂಟರ್ ಬೆನ್ನಲ್ಲೇ ಉತ್ತರ ಪ್ರದೇಶ ಡಾನ್ ಶೂಟೌಟ್‌ಗೆ ಬಲಿ
ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಹಾಗೂ ಈ ಪ್ರಕರಣದ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಆರೋಪಿಯಾಗಿದ್ದ. ಈ ಹಿನ್ನೆಲೆಯಲ್ಲಿ ಈತನ ವಿಚಾರಣೆ ನಡೆದಿತ್ತು. ಅತೀಕ್‌ನನ್ನು ವೈದ್ಯಕೀಯ ಪರೀಕ್ಷೆಗಾಗಿ ರಾತ್ರಿ 10.30ಕ್ಕೆ ಪ್ರಯಾಗ್‌ರಾಜ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಪತ್ರಕರ್ತರು ಅತೀಕ್‌ನ ಹೇಳಿಕೆ ಪಡೆಯುತ್ತಿದ್ದರು. ಈ ವೇಳೆ ಪತ್ರಕರ್ತರ ವೇಷದಲ್ಲಿ ಮೂವರು ಬಂದು ‘ಜೈ ಶ್ರೀರಾಂ’ ಎಂದು ಕೂಗಿದರು. ಆಗ ನೇರವಾಗಿ ಅತೀಕ್ ತಲೆಗೆ ಹಾಗೂ ಅಶ್ರಫ್‌ಗೆ ಪಿಸ್ತೂಲು ಇಟ್ಟು ಗುಂಡು ಹಾರಿಸಿದರು. ಕೂಡಲೇ ಇಬ್ಬರೂ ನೆಲಕ್ಕುರುಳಿದರು. ಆಗಲೂ ಅವರಿಗೆ ಗುಂಡಿಕ್ಕಿದರು. ತಕ್ಷಣ ಹಂತಕರನ್ನು ಪೊಲೀಸರು ಗಟ್ಟಿಯಾಗಿ ಹಿಡಿದುಕೊಂಡು ತಮ್ಮ ವಶಕ್ಕೆ ತೆಗೆದುಕೊಂಡರು. ನಂತರ ಸ್ಥಳವನ್ನು ಸುತ್ತುವರಿದ ಪೊಲೀಸರು ಶವಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. 10 ಸುತ್ತುಗಳ ಗುಂಡು ಹಾರಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರವಷ್ಟೇ ಅತೀಕ್‌ನನ್ನು ಪೊಲೀಸರ ಬಂಧನದಿಂದ ಬಿಡಿಸಲು ಹೊಂಚು ಹಾಕಿದ್ದ ಮಗ ಅಸದ್ ಮತ್ತು ಆತನ ಸಹಚರನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಝಾನ್ಸಿ ಸಮೀಪ ಹತ್ಯೆ ಮಾಡಿದ್ದರು. ಬೆಳಗ್ಗೆಯಷ್ಟೇ ಅತೀಕ್ ಪುತ್ರನ ಅಂತ್ಯಕ್ರಿಯೆ ನಡೆದಿತ್ತು. ಆದರೆ ಇದರಲ್ಲಿ ಪಾಲ್ಗೊಳ್ಳಲು ಆಗದೇ ಅತೀಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದ.
ಪೊಲೀಸರೆದುರೇ ಗ್ಯಾಂಗ್ ಸ್ಟಾರ್ ಹತ್ಯೆ ಪ್ರಕರಣ: ಕಾನೂನು ಹದಗೆಟ್ಟಿದೆ ಎಂದ ಅಖಿಲೇಶ್ ಯಾದವ್
ಉತ್ತರ ಪ್ರದೇಶದಲ್ಲಿ ವಕೀಲ ಉಮೇಶ್ ಪಾಲ್ ಹಾಗೂ ಇಬ್ಬರು ಪೊಲೀಸರ ಹತ್ಯೆಯಾದ ಬಳಿಕ, ಅದೇ ಪ್ರಕರಣ ಸಂಬಂಧ ಒಟ್ಟು 6 ಆರೋಪಿಗಳು ನಾನಾ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಕೇಸಿನ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹಾಗೂ ಆತನ ರಕ್ಷಣೆಗೆ ನಿಯೋಜಿಸಲಾಗಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಕಳೆದ ಫೆ.24 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹಂತಕರ ಕಾರು ಚಾಲಕ ಅರ್ಬಾಜ್‌ನನ್ನು ಫೆ.27 ರಂದು, ಪ್ರಯಾಗ್‌ರಾಜ್‌ನಲ್ಲಿ ಉಸ್ಮಾನ್ ಎಂಬಾತನನ್ನು ಮಾ.6 ರಂದು, ಅತೀಕ್ ಮಗ ಅಸದ್ ಮತ್ತು ಸಹಚರ ಗುಲಾಮ್‌ನನ್ನು ಝಾನ್ಸಿಯಲ್ಲಿ ಏ.13 ರಂದು ಎನ್‌ಕೌಂಟರ್ ಮಾಡಲಾಗಿತ್ತು. ಏ.15 ರಂದು ಅತೀಕ್ ಹಾಗೂ ಸಹೋದರ ಅಶ್ರಫ್‌ರನ್ನು ಮೂವರು ಯುವಕರು ಗುಂಡಿಕ್ಕಿ ಹತ್ಯೆ ಮಾಡಿದರು.
