ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಡಿಎಂಕೆ ಸಚಿವ ಕೆ. ಪೊನ್ಮುಡಿ ವಿರುದ್ಧ ಎಫ್‌ಐಆರ್ ದಾಖಲಿಸದ ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ಚೆನ್ನೈ: ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತಮಿಳುನಾಡು ಡಿಎಂಕೆ ಸರ್ಕಾರದ ಸಚಿವ ಕೆ. ಪೊನ್ಮುಡಿ ವಿರುದ್ಧ ಎಫ್‌ಐಆರ್‌ ದಾಖಲಿಸದ ತಮಿಳುನಾಡು ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಕೂಡಲೇ ಸಚಿವ ಪೊನ್ಮುಡಿ ವಿರುದ್ಧ ಎಫ್‌ಐಆರ್ ಹಾಕಿ ಅಥವಾ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಲು ಸಿದ್ಧರಾಗಿ ಎಂದು ತಮಿಳುನಾಡು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಪೊನ್ಮುಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ಆಗ್ರಹಿಸಿದ ನಂತರ ಮದ್ರಾಸ್ ಹೈಕೋರ್ಟ್ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ. 

ಈ ಬಗ್ಗೆ ಕೂಡಲೇ ವಿಚಾರಣೆ ಆರಂಭಿಸುವಂತೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ಈಗ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿದೆ. ಹೀಗಾಗಿ ಈ ವಿಚಾರದ ಬಗ್ಗೆ ನಿಮಗೆ ಯಾವುದೇ ದೂರುಗಳು ಬಾರದೇ ಹೋದರು ಕೂಡ ಈ ಬಗ್ಗೆ ಕೇಸ್‌ ದಾಖಲಿಸಿ ವಿಚಾರಣೆ ನಡೆಸಿ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರಿಗೆ ಸೂಚಿಸಿದೆ. ಅಲ್ಲದೇ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿಕೆ ಮಾಡಿದೆ. 

ತಮಿಳುನಾಡು ಡಿಎಂಕೆ ಸರ್ಕಾರದಿಂದ ಕೇಂದ್ರದ ವಿರುದ್ಧ 'ಸ್ವಾತಂತ್ರ್ಯ ಸಮರ'

ಏಪ್ರಿಲ್ 6 ರಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮಿಳುನಾಡು ಅರಣ್ಯ ಸಚಿವ ಕೆ. ಪೊನ್ಮುಡಿ ಮಹಿಳೆಯರು, ಶೈವರು ಹಾಗೂ ವೈಷ್ಣವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಬಗ್ಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾದಾತ್ಮಕ ಹೇಳಿಕೆಯ ನಂತರ ಡಿಎಂಕೆ ಅವರಿಗೆ ಪಕ್ಷದಲ್ಲಿ ನೀಡಿದ್ದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ತೆಗೆದು ಹಾಕಿತ್ತು. ಆದರೆ ಸಚಿವ ಸ್ಥಾನದಲ್ಲಿ ಉಳಿಸಿಕೊಂಡಿತ್ತು.

ಅಲ್ಲದೇ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕೆ. ಪೊನ್ಮುಡಿ ಅವರು ಕ್ಷಮೆ ಕೇಳಿದ್ದರು. ತಂತೈ ಪೆರಿಯಾರ್ ದ್ರಾವಿಡರ್ ಕಳಗಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಾನು ಬಳಸಿದ ಅನುಚಿತ ಪದಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ದೀರ್ಘಕಾಲದವರೆಗೆ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಯಾಗಿ, ನನ್ನಿಂದಾದ ಈ ತಪ್ಪಿಗೆ ನಾನು ತೀವ್ರವಾಗಿ ವಿಷಾದಿಸುತ್ತೇನೆ ಎಂದು ಅವರು ಕ್ಷಮೆ ಕೇಳಿದ್ದರು. 

ನಾನು ನೀಡಿದ ಹೇಳಿಕೆಗಳಿಗೆ ನನಗೆ ತಕ್ಷಣವೇ ತೀವ್ರ ವಿಷಾದವಾಯಿತು. ನನ್ನ ಭಾಷಣವು ಅನೇಕರಿಗೆ ನೋವುಂಟುಮಾಡಿದೆ ಮತ್ತು ಮುಜುಗರದ ಪರಿಸ್ಥಿತಿಯನ್ನು ಸೃಷ್ಟಿಸಿದೆ ಹೀಗಾಗಿ ನನ್ನ ಮಾತುಗಳಿಂದ ನೋಯಿಸಲ್ಪಟ್ಟ ಎಲ್ಲರಿಗೂ ಮತ್ತೊಮ್ಮೆ ನಾನು ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಸಚಿವ ಕೆ. ಪೊನ್ಮುಡಿ ಹೇಳಿದ್ದರು. 

ಲೈಂಗಿಕ ಭಂಗಿಗೆ ಹಿಂದೂ ತಿಲಕ ಹೋಲಿಕೆ :ತಮಿಳುನಾಡು ಸಚಿವ ಕೆ. ಪೊನ್ಮುಡಿ ವಿವಾದ

ತಮಿಳುನಾಡಿನ ಅರಣ್ಯ ಸಚಿವ ಕೆ. ಪೊನ್ಮುಡಿ ಶೈವ ಮತ್ತು ವೈಷ್ಣವ ಪಂಥದ ಭಿನ್ನತೆಯನ್ನು ಲೈಂಗಿಕ ಭಂಗಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದರು. ಸಚಿವರ ಈ ಹೇಳಿಕೆಯ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಬಿಜೆಪಿ ಮಾತ್ರವಲ್ಲದೆ ಸ್ವತಃ ಡಿಎಂಕೆ ಮುಖಂಡರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜತೆಗೆ ಅವರನ್ನು ಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕಿತ್ತು ಹಾಕಲಾಗಿತ್ತು. ವ್ಯಕ್ತಿಯೊಬ್ಬ ವೇಶ್ಯೆ ಬಳಿ ಹೋಗುತ್ತಾನೆ. ಆಗ ವೇಶ್ಯೆಯು ನಿನ್ನದು ಶೈವಪಂಥವೋ, ವೈಷ್ಣವ ಪಂಥವೋ ಎಂದು ಕೇಳುತ್ತಾಳೆ. ಆಕೆಯ ಪ್ರಶ್ನೆಯಿಂದ ವ್ಯಕ್ತಿ ಗೊಂದಲಕ್ಕೀಡಾಗುತ್ತಾನೆ. ಆಗ ವೇಶ್ಯೆಯು, ‘ಒಂದು ವೇಳೆ ನೀನು ಶೈವ (ಅಡ್ಡನಾಮ) ಪಂಥದವನಾಗಿದ್ದರೆ ಮಲಗಿಕೊಂಡ ಲೈಂಗಿಕ ಭಂಗಿಯಲ್ಲಿ ರತಿಕ್ರೀಡೆ ಆಡುತ್ತೀಯಾ ಮತ್ತು ವೈಷ್ಣವಪಂಥದ (ಉದ್ದನಾಮ) ವ್ಯಕ್ತಿ ಆಗಿದ್ದರೆ ನಿಂತಭಂಗಿಯಲ್ಲಿ ರತಿಕ್ರೀಡೆ ಆಡುತ್ತೀಯಾ’ ಎಂದು ಆಕೆ ಹೇಳುತ್ತಾಳೆ' ಎಂದು ಹೇಳಿದ್ದರು. ಸಚಿವರ ಈ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂಥ ಕೀಳು ಹೇಳಿಕೆ ಖಂಡನಾರ್ಹ ಎಂದು ಡಿಎಂಕೆ ಸಂಸದೆ ಕನಿಮೋಳಿ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದರು.