ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗುವ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೀಪಸ್ತಂಭ ವಕ್ಫ್ ಮಂಡಳಿಗೆ ಸೇರಿದ್ದು ಮತ್ತು ದೀಪ ಹಚ್ಚುವುದರಿಂದ ಶಾಂತಿಗೆ ಭಂಗವಾಗುತ್ತದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪವನ್ನು ಬೆಳಗಿಸಲು ಅವಕಾಶ ನೀಡಿ ನ್ಯಾಯಮೂರ್ತಿ ಜಿ. ಆರ್​. ಸ್ವಾಮಿನಾಥನ್‌ ಅನುಮತಿ ನೀಡಿದಾಗ, ಎರಡು ತಿಂಗಳ ಹಿಂದೆ ತಮಿಳುನಾಡು ಸರ್ಕಾರ ಹಾಗೂ ಒಂದಿಷ್ಟು ರಾಜಕೀಯ ಪಕ್ಷಗಳು ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿಬಿಟ್ಟಿದ್ದವು. ಅವರ ವಿರುದ್ಧ ವಾಗ್ದಂಡನೆಗೆ ಆಗ್ರಹಿಸಿ ಕರ್ನಾಟಕದ ಕಾಂಗ್ರೆಸ್​ ಮುಖಂಡರೂ ಸೇರಿದಂತೆ ನೂರಕ್ಕೆ ಅಧಿಕ ಸಂಸದರು ಲೋಕಸಭೆಯಲ್ಲಿ ನಿರ್ಣಯ ಮಂಡಿಸಿದ್ದು ಸುದ್ದಿಯಾಗಿತ್ತು. ಏಕಸದಸ್ಯಪೀಠದಲ್ಲಿ ನ್ಯಾಯಮೂರ್ತಿ ಜಿ. ಆರ್​. ಸ್ವಾಮಿನಾಥನ್‌ ಅವರ ಈ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂಥ ಮೇಲ್ಮನವಿ ಸಲ್ಲಿಸಿದ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್​ ಹೈಕೋರ್ಟ್​ ಛೀಮಾರಿ ಹಾಕಿದೆ.

ವಕ್ಫ್​ಗೆ ಸೇರಿದ್ದು

ತಮಿಳುನಾಡು ಸರ್ಕಾರದ ಮುಖ್ಯ ವಾದವಾಗಿದ್ದುದು, ದೇವಾಲಯವು ಜೈನ ದೇವಾಲಯ. ಇಲ್ಲಿಯೇ ಇರುವ ದರ್ಗಾದ ಆಸ್ತಿಯಾಗಿದೆ ಇಲ್ಲಿರುವ ದೀಪಸ್ತಂಭ. ಆದ್ದರಿಂದ ಇದು ವಕ್ಫ್ ಮಂಡಳಿಗೆ ಸೇರಿದ್ದು ಎನ್ನುವುದು. ಇಲ್ಲಿದ್ದ ಮುಖ್ಯ ವಿವಾದ, ಇದು ವಕ್ಫ್​ಗೆ ಸೇರಿದ್ದೋ ಅಥವಾ ದೀಪಸ್ತಂಭವು ತಿರುಪ್ಪರನ್​ಕುಂದ್ರಂ ಬೆಟ್ಟದ ದೇವಾಲಯದ ಬಳಿ ಇರುವ ಕಲ್ಲಿನ ಕಂಬದ ಮೇಲೆ ಇರುವ ಕಾರಣ, ನೂರಾರು ವರ್ಷಗಳಿಂದ ಪೂಜಿಸಿಕೊಂಡು ಬಂದತೆ, ಈಗಲೂ ಹಿಂದೂಗಳು ತಮ್ಮ ಧಾರ್ಮಿಕ ಆಚರಣೆಯ ಭಾಗವಾಗಿರುವ ದೀಪಗಳನ್ನು ಬೆಳಗಿಸುವ ಹಕ್ಕನ್ನು ಹೊಂದಿದ್ದಾರೆಯೇ ಎಂಬುದು.

ಸರ್ಕಾರಕ್ಕೆ ಛೀಮಾರಿ

ಇದರ ವಾದ,ಪ್ರತಿವಾದ ಆಲಿಸಿದ್ದ ಹೈಕೋರ್ಟ್​ನ ನ್ಯಾಯಮೂರ್ತಿ ಜಿ ಜಯಚಂದ್ರನ್ ಮತ್ತು ನ್ಯಾಯಮೂರ್ತಿ ಕೆ.ಕೆ ರಾಮಕೃಷ್ಣನ್ ಅವರ ವಿಭಾಗೀಯ ಪೀಠವು, ತೀರ್ಪನ್ನು ಕಾಯ್ದಿರಿಸಿತ್ತು. ಅದರ ತೀರ್ಪು ಇದೀಗ ಹೊರಬಿದ್ದಿದ್ದು, ತಮಿಳುನಾಡು ಸರ್ಕಾರ ಹಾಗೂ ಹಿಂದೂಗಳು ದೀಪ ಹಚ್ಚಿದರೆ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ವಾದಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಮುಖಭಂಗವಾಗುವ ತೀರ್ಪನ್ನು ನ್ಯಾಯಮೂರ್ತಿಗಳು ನೀಡಿದ್ದಾರೆ.

ಸರ್ಕಾರದ ವಾದ ತಿರಸ್ಕೃತ

ದೀಪಂ ವಕ್ಫ್ ಮಂಡಳಿ ಮತ್ತು ದರ್ಗಾದ ಆಸ್ತಿ ಎಂಬ ಹೇಳಿಕೆಯನ್ನು ಕೋರ್ಟ್​ ತಿರಸ್ಕರಿಸಿದೆ. ಇದೇ ವೇಳೆ, ಕೋರ್ಟ್​, ದೇವಸ್ಥಾನದ ಭೂಪ್ರದೇಶ ಒಳಗೆ ಇರುವ ಬೆಟ್ಟದ ತುದಿಯಲ್ಲಿರುವ ಕಲ್ಲಿನ ಕಂಬದಲ್ಲಿ ವರ್ಷದಲ್ಲಿ ಒಂದು ನಿರ್ದಿಷ್ಟ ದಿನದಂದು ದೀಪ ಹಚ್ಚಲು ಅವಕಾಶ ನೀಡುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂಬ ನಿಮ್ಮ ವಾದ ಹಾಸ್ಯಾಸ್ಪದ ಮತ್ತು ನಂಬಲು ಕಷ್ಟ ಎಂದಿದೆ. ಒಂದು ವೇಳೆ ಇಂಥ ಅಡಚಣೆಯನ್ನು ರಾಜ್ಯವು ಸ್ವತಃ ಪ್ರಾಯೋಜಿಸಿದರೆ ಮಾತ್ರ ಅದು ಸಂಭವಿಸಲು ಸಾಧ್ಯ ಎಂದು ಕಿಡಿ ಕಾರಿರುವ ಕೋರ್ಟ್​, ಯಾವುದೇ ರಾಜ್ಯವು ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಸಾಧಿಸಲು ಆ ಮಟ್ಟಕ್ಕೆ ಇಳಿಯಬಾರದು ಎಂದು ನಾವು ಪ್ರಾರ್ಥಿಸುತ್ತೇವೆ ಎಂದಿದ್ದಾರೆ.

ಪ್ರಾಚೀನ ಹಿಂದೂ ಸಂಪ್ರದಾಯ

ದೀಪಗಳನ್ನು ಬೆಳಗಿಸುವ ಅಭ್ಯಾಸವು ಪ್ರಾಚೀನ ಹಿಂದೂ ಸಂಪ್ರದಾಯವಾಗಿದೆ. ದೂರದಿಂದಲೇ ಭಕ್ತರಿಗೆ ದೀಪಗಳು ಗೋಚರಿಸುವಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಎಷ್ಟೋ ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ಈಗ ಏಕಾಏಕಿ ಶಾಂತಿಗೆ ಭಂಗವಾಗುತ್ತದೆ ಎನ್ನುವ ಮಾತು ಹಾಸ್ಯಾಸ್ಪದ ಎನ್ನಿಸುವುದಿಲ್ಲವೇ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಪ್ರಶ್ನಿಸಿದ್ದಾರೆ. ಆದ್ದರಿಂದ ದೀಪ ಬೆಳಗಲು ಭಕ್ತರಿಗೆ ಅವಕಾಶ ನೀಡಬೇಕು. ಅವರ ಕೋರಿಕೆಯನ್ನು ನಿರಾಕರಿಸುವಂಥ ಯಾವುದೇ ಅಂಶಗಳು ಕೋರ್ಟ್​ಗೆ ಕಾಣಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ. ಕೋರ್ಟ್​ ನಿರ್ದೇಶನವನ್ನು ಪಾಲಿಸಲು ದೇವಸ್ಥಾನಕ್ಕೆ ಪೀಠ ಸೂಚನೆ ನೀಡಿದೆ.

ಇದರ ಹಿನ್ನೆಲೆಗೆ ಹೋಗುವುದಾದರೆ, ತಿರುಪ್ಪರನ್​ಕುಂದ್ರಂ ಬೆಟ್ಟದಲ್ಲಿನ ಕಾಶಿ ವಿಶ್ವನಾಥ ದೇವಾಲಯದ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲು ಈ ಹಿಂದೆ ಹೈಕೋರ್ಟ್​ ಏಕಸದಸ್ಯಪೀಠ ಅನುಮತಿ ನೀಡಿತ್ತು. ಆದರೆ, ತಮಿಳುನಾಡು ಸರ್ಕಾರದ ಇದಕ್ಕೆ ಅನುಮತಿ ನೀಡದೆ, ಅದೇ ಜಾಗದಲ್ಲಿರುವ ದರ್ಗಾದಲ್ಲಿ ಉರುಸ್​ ಆಚರಣೆಗೆ ಅನುಮತಿ ನೀಡಿತ್ತು. ಮಾತ್ರವಲ್ಲದೇ ಈ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳ ವಿರುದ್ಧವೇ ವಾಗ್ದಂಡನೆಗೆ ಮುಂದಾಗಿದ್ದರು ಮುಖಂಡರು!