man steals newspaper in car: 8 ಲಕ್ಷ ಮೌಲ್ಯದ ಕಾರಿನಲ್ಲಿ ಬಂದ ಯುವಕನೊಬ್ಬ 8 ರೂಪಾಯಿಯ ದಿನಪತ್ರಿಕೆಯನ್ನು ಕದ್ದೊಯ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಕೆಲ ಶ್ರೀಮಂತರು ಮಾಡುವ ಇಂತಹ ಸಣ್ಣಪುಟ್ಟ ಕಳ್ಳತನಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಕಾರಲ್ಲಿ ಬಂದು ನ್ಯೂಸ್ ಪೇಪರ್ ಕದ್ದ ಕಳ್ಳ
ಕೆಲವರು ಬಿಂದಾಸ್ ಆಗಿ ಜೀವನ ಮಾಡ್ತಾರೆ ಸಿಕ್ಕಾಪಟ್ಟೆ ಖರ್ಚು ಮಾಡ್ತಾರೆ. ಆದರೆ ಕೆಲ ಸಣ್ಣಪುಟ್ಟ ವಸ್ತುಗಳನ್ನು ಕದಿಯುತ್ತಾರೆ. ಹಾಗೆಯೇ ಕೆಲ ದಿನಗಳ ಹಿಂದೆ ಲಕ್ಸುರಿ ಕಾರಿನಲ್ಲಿ ಬಂದ ಮಹಿಳೆಯರಿಬ್ಬರು ಮನೆ ಮುಂದಿದ್ದ ಹೂಕುಂಡವನ್ನು ಕದ್ದೊಯ್ದ ಘಟನೆ ನಡೆದಿತ್ತು. ಆ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ವೀಡಿಯೋ ನೋಡಿದ ಅನೇಕರು ಕಾರು ಖರೀದಿಸಲು ಹಣವಿರುವ ಇವರಿಗೆ ಒಂದು ಹೂ ಕುಂಡ ಖರೀದಿಸುವ ಯೋಗ್ಯತೆ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಹೀಗಿರುವಾಗ ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಕಾರೊಂದರಲ್ಲಿ ಬಂದ ಟಿಪ್‌ಟಾಪ್ ಆಗಿದ್ದ ಯುವಕನೋರ್ವ ಮನೆ ಮುಂದೆ ಪೇಪರ್ ಹಾಕೋ ಹುಡುಗ ಎಸೆದು ಹೋದ ದಿನ ಪತ್ರಿಕೆಯನ್ನು ಎತ್ತಿಕೊಂಡು ಕಾರು ಸ್ಟಾರ್ಟ್ ಮಾಡಿ ಹೋಗಿದ್ದಾನೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಮಧ್ಯಪ್ರದೇಶದ ಶಿವಪುರಿಯಲ್ಲಿ ಘಟನೆ
ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶ ಶಿವಪುರಿಯಲ್ಲಿ. 8 ಲಕ್ಷ ಮೌಲ್ಯದ ಕಾರಿನಲ್ಲಿ ಬಂದ ಯುವಕನೋರ್ವ 8 ರೂಪಾಯಿಯ ಪೇಪರ್‌ನ್ನು ಕದ್ದುಕೊಂಡು ಹೋಗಿದ್ದಾನೆ. ವಕೀಲರೊಬ್ಬರ ಕಚೇರಿ ಮುಂದೆ ಈ ಘಟನೆ ನಡೆದಿದೆ. ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದ ಯುವಕನೋರ್ವ ಕಚೇರಿ ಮುಂದೆ ಎಸೆದು ಹೋದ ದಿನಪತ್ರಿಕೆಯನ್ನು ಕಬ್ಬಿಣದ ಸರಳುಗಳ ಮಧ್ಯೆ ಕೈ ಹಾಕಿ ಎತ್ತಿಕೊಂಡು ಹೋಗಿದ್ದಾನೆ. ಕಚೇರಿ ಮುಂದೆ ಹಾಕಿದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಆಗಿದ್ದು, ವೀಡಿಯೋ ನೋಡಿದ ಅನೇಕರು 8 ಲಕ್ಷದ ಕಾರು ಖರೀದಿಸಿದವನಿಗೆ 8 ರೂಪಾಯಿ ಪೇಪರ್‌ಗೆ ಗತಿ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ವಿಡಿಯೋ ವೈರಲ್
ವೈರಲ್ ಆದ ವೀಡಿಯೋದಲ್ಲಿ ಆತ ಪೇಪರ್ ತೆಗೆದುಕೊಂಡು ಹೋದ ನಂತರ ವ್ಯಕ್ತಿಯೊಬ್ಬರು ಹೊರಗೆ ಬಂದು ನೋಡುತ್ತಾರೆ. ಅಷ್ಟರಲ್ಲಿ ಈ ಪೇಪರ್ ಕಳ್ಳ ಕಾರಿನೊಳಗೆ ಕುಳಿತಿದ್ದು, ಕೆಲ ಸೆಕೆಂಡ್‌ಗಳಲ್ಲಿ ಅಲ್ಲಿಂದ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ.
ವಕೀಲರ ಕಚೇರಿ ಮುಂದೆಯೇ ಘಟನೆ
ಶಿವಪುರಿಯ ಮಹಲ್ ರಸ್ತೆಯ ಮಹಾರಾಣ ಪ್ರತಾಪ ಕಾಲೋನಿಯಲ್ಲಿ ಮುಂಜಾನೆ 9.55ರ ಸುಮಾರಿಗೆ ನಡೆದಿದೆ. ವಕೀಲ ಸಂಜೀವ್ ಬಿಲ್‌ಗೈ ಅವರು ಈ ವೇಳೆ ಕಚೇರಿ ಒಳಗೆ ತಮ್ಮ ಸಹೋದ್ಯೋಗಿಯ ಜೊತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ವಕೀಲ ಬಿಲಗೈ ಅವರು ಕೇಸ್ ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿ ಕಾರಿನ ನಂಬರ್ ದಾಖಲಿಸಿಕೊಂಡು ಈ ಪೇಪರ್ ಕಳ್ಳನಿಗಾಗಿ ಶೋಧ ನಡೆಸಿದ್ದಾರೆ. ಕಾರಿನಲ್ಲಿ ಬಂದು ಹೀಗೆ ಸಣ್ಣಪುಟ್ಟ ವಸ್ತುಗಳನ್ನು ಕಳ್ಳತನ ಮಾಡುವುದು ಇದೇ ಮೊದಲಲ್ಲ, ಈ ಹಿಂದೆ 2023ರಲ್ಲಿ ಗುರುಗ್ರಾಮದಲ್ಲಿ 40 ಲಕ್ಷ ಮೌಲ್ಯದ ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಜಿ-20 ಕಾರ್ಯಕ್ರಮದ ಭಾಗವಾಗಿ ರಸ್ತೆಯಲ್ಲಿ ಇರಿಸಿದ್ದ 400 ರೂಪಾಯಿ ಮೌಲ್ಯದ ಹೂ ಕುಂಡಗಳನ್ನು ಕದ್ದುಕೊಂಡು ಹೋಗಿದ್ದರು.
ಇತ್ತ ಘಟನೆಯ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ಪೇಪರ್ ಕಳ್ಳನನ್ನು ಸಮರ್ಥಿಸಿಕೊಂಡಿದ್ದಾರೆ. ಆತ ಕದ್ದಿಲ್ಲ ಅಗತ್ಯಕ್ಕಾಗಿ ತೆಗೆದುಕೊಂಡಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ಸಣ್ಣದಾದರು ದೊಡ್ಡದಾದರೂ ಕಳ್ಳತನ ಕಳ್ಳತನವೇ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ…
ಇದನ್ನೂ ಓದಿ: 2 ತಿಂಗಳಿಂದ ಕಾಲೇಜು ಫೀಸು ಕಟ್ಟಿಲ್ಲ ಎಂದ ಕರೀಷ್ಮಾ ಕಪೂರ್ ಪುತ್ರಿಗೆ ದೆಹಲಿ ಕೋರ್ಟ್ ಹೇಳಿದ್ದೇನು?
ಇದನ್ನೂ ಓದಿ: ಲ್ಯಾಂಡ್ ರೋವರ್‌ನ ವೈರಲ್ ಸ್ಟಂಟ್ ಮರು ಸೃಷ್ಟಿಸಲು ಹೋಗಿ ಚೀನಿ ಆಟೋ ಮೇಕರ್ ಸಂಸ್ಥೆ ಎಡವಟ್ಟು: ವೀಡಿಯೋ ವೈರಲ್
