girl leaves home for ias dream: ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಮಧ್ಯಪ್ರದೇಶದ ಯುವತಿಯೊಬ್ಬಳು, ಪೋಷಕರು ಮದುವೆಗೆ ಒತ್ತಾಯಿಸಿದ್ದರಿಂದ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ತಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

92 ಶೇಕಡಾ ಅಂಕ ಗಳಿಸಿದಾಕೆಗೆ ಐಎಎಸ್ ಆಗುವ ಗುರಿ: ಮಗಳ ಕನಸಿಗೆ ತಂದೆಯ ಆಕ್ಷೇಪ

ಚೆನ್ನಾಗಿ ಓದಿ ಉನ್ನತ ಹುದ್ದೆಗೆ ಏರಬೇಕು ಎಂಬುದು ಅನೇಕರ ಕನಸು. ಹಲವು ಕುಟುಂಬಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಇದಕ್ಕೆ ಅವಕಾಶ ಇರುವುದಿಲ್ಲ. ಎಷ್ಟೇ ಒಳ್ಳೆಯ ಅಂಕ ಗಳಿಸಿದರು ಕೆಲ ಪೋಷಕರು ಹೆಣ್ಣು ಮಕ್ಕಳಿಗೆ 18 ತುಂಬುತ್ತಿದ್ದಂತೆ ಮದುವೆ ಮಾಡಿಸಿ ಕಳಿಸಿ ಬಿಡುತ್ತಾರೆ. ಹೀಗಾಗಿ ಅನೇಕ ಹೆಣ್ಣು ಮಕ್ಕಳು ತಮ್ಮ ಕನಸುಗಳನ್ನು ಕೊಂದು ಬದುಕುತ್ತಿರುತ್ತಾರೆ. ಹಾಗೆಯೇ ಇಲ್ಲೊಬ್ಬಳು ಹೆಣ್ಣು ಮಗಳಿಗೆ ಐಎಎಸ್ ಅಧಿಕಾರಿಯಾಗುವ ಆಸೆ. ಇದಕ್ಕಾಗಿ ಚೆನ್ನಾಗಿ ಓದಿದ ಆಕೆ ಪಿಯುಸಿಯಲ್ಲಿ ಶೇ.92 ಅಂಕಗಳೊಂದಿಗೆ ಪಾಸಾಗಿದ್ದಳು. ಆದರೆ ಮನೆಯಲ್ಲಿ ಹೆಚ್ಚು ಓದಿಸುವುದಕ್ಕೆ ಇಷ್ಟವಿಲ್ಲ, ಪ್ರತಿಭಾವಂತೆಯಾದ ಮಗಳಿಗೆ ಓದುಸಿವುದನ್ನು ಬಿಟ್ಟು ಕೇವಲ ಮದುವೆಯ ಆಯ್ಕೆಯನ್ನು ನೀಡಿದ್ದರು ಆಕೆಯ ತಂದೆ. ಆದರೆ ಹಠ ಬಿಡದ ಹುಡುಗಿ ಕನಸನ್ನು ಬೆನ್ನಟ್ಟಿ ಮನೆ ಬಿಟ್ಟು ಹೊರಟು ಹೋಗಿದ್ದಾಳೆ. ಇತ್ತ ಆಕೆಯ ತಂದೆ ಮಗಳು ನಾಪತ್ತೆಯಾಗಿದ್ದಾಳೆ ಆಕೆಯನ್ನು ಹುಡುಕಿ ಕೊಡಿ ಎಂದು ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ.

ಮದುವೆಗೆ ಮುಂದಾದ ತಂದೆ: ಮನೆ ಬಿಟ್ಟು ಹೋದ ಮಗಳು

ಹೌದು ಅನೇಕರು ಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಹಿಂದೆ ಬಿದ್ದು, ಬದುಕು ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿ ಅರಸುತ್ತಾ ಮನೆ ಬಿಟ್ಟು ಓದಿ ಹೋಗುತ್ತಾರೆ. ಆದರೆ ಭೋಪಾಲ್‌ನ ನಿವಾಸಿ ಸಾಕ್ಷಿ ಎಂಬ ಹರೆಯದ ಹುಡುಗಿಗೆ ಇದ್ದ ಕನಸೇ ಬೇರೆ. ಅದು ಐಎಎಸ್ ಅಧಿಕಾರಿಯಾಗುವುದು. ಆದರೆ ಆಕೆಯ ಕನಸಿಗೆ ನೀರೆರೆದು ಪೋಷಿಸುವ ಬದಲು ತಣ್ಣೀರೆರಚಿದವರು ಆಕೆಯ ಮನೆಯವರೇ ಪಿಯುಸಿಯಲ್ಲಿ 92 ಶೇಕಡಾ ಅಂಕ ಪಡೆದ ಆಕೆಗೆ ಮನೆಯಲ್ಲಿ ಮದುವೆ ಮಾಡುವ ನಿರ್ಧಾರ ಮಾಡುತ್ತಾರೆ. ಆಕೆ ಎಷ್ಟು ಹೇಳಿಕೊಂಡರು ಪೋಷಕರು ಆಕೆಯ ಮಾತನ್ನು ಒಪ್ಪುವುದೇ ಇಲ್ಲ. ಮನೆಯವರು ತನ್ನ ಮಾತು ಕೇಳುವುದಿಲ್ಲ ಎಂಬುದರ ಅರಿವಾಗುತ್ತಿದ್ದಂತೆ ಈ ಬಾಲಕಿ ಮನೆಬಿಟ್ಟು ಬಂದಿದ್ದಾಳೆ.

ತಂದೆಯಿಂದ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್:

ಸ್ವಾಭಿಮಾನಿ ಗಟ್ಟಿಗಿತ್ತಿ ಹೆಣ್ಣು ಮಗಳು ಇಂದೋರ್ ತಲುಪಿದ್ದಾಳೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಅಲ್ಲಿ ಜೀವನೋಪಾಯಕ್ಕಾಗಿ ತಿಂಗಳಿಗೆ 18 ಸಾವಿರ ರೂಪಾಯಿ ವೇತನದ ಕೆಲಸ ಆಕಗೆ ಸಿಕ್ಕಿದೆ. ಕೆಲಸ ಮಾಡುತ್ತಾ ಓದುವ ನಿರ್ಧಾರ ಮಾಡಿದ್ದಾಳೆ. ಆಕೆ ಜನವರಿಯಿಂದ ಮಗಳು ನಾಪತ್ತೆಯಾದ ಬಗ್ಗೆ ಪೋಷಕರು ಎಲ್ಲೆಡೆ ಹುಡುಕಾಟ ನಡೆಸುತ್ತಾರೆ ಸಿಗದೇ ಹೋದಾಗ ಹೈಕೋರ್ಟ್ ಮಗಳು ನಾಪತ್ತೆಯಾಗಿದ್ದಾಳೆ ಹುಡುಕಿ ಕೊಡಿ ಎಂದು ಆಕೆಯ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುತ್ತಾರೆ.

2030ರಲ್ಲಿ ಐಎಎಸ್ ಅಧಿಕಾರಿಯಾಗಿ ಮನೆಗೆ ಮರಳುವುದಾಗಿ ಸಾಕ್ಷಿ ಪತ್ರ

ಇತ್ತ ಸಾಕ್ಷಿಯನ್ನು ಹುಡುಕುವಂತೆ ನ್ಯಾಯಾಲಯವೂ ಪೊಲೀಸರಿಗೆ ಆದೇಶಿಸಿದೆ. ಹೀಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಎಲ್ಲೂ ಸಾಕ್ಷಿಯ ಸುಳಿವೇ ಸಿಗುವುದಿಲ್ಲ. ಈ ನಡುವೆ ಆಕೆಯ ಸ್ನೇಹಿತೆಯರನ್ನು ವಿಚಾರಿಸಿದಾಗ ಆಕೆಯ ಸ್ನೇಹಿತೆಯೊಬ್ಬರು, ಆಕೆ ನೀಡಿದ ಪುಟ್ಟ ಪತ್ರವನ್ನು ನೀಡುತ್ತಾರೆ. ಅದರಲ್ಲಿ ನಾನು 2030 ರಲ್ಲಿ ಐಎಎಸ್ ಅಧಿಕಾರಿಯಾಗಿ ಮನೆಗೆ ಹಿಂತಿರುಗುತ್ತೇನೆ ಎಂದು ಬರೆದಿರುವುದನ್ನು ಪೊಲೀಸರು ಕಂಡುಕೊಂಡರು.

ಆಧಾರ್‌ ಕಾರ್ಡ್ ನವೀಕರಿಸಿದ ಸಾಕ್ಷಿ:

ನಂತರ ಪೊಲೀಸರು ತನಿಖೆಯನ್ನು ಮತ್ತೆ ಮುಂದುವರೆಸಿ ದೇಶಾದೆಲ್ಲೆಡೆ ಇರುವ ಕೋಚಿಂಗ್ ಸೆಂಟರ್‌ಗಳು, ಕಾಲೇಜುಗಳು ಮತ್ತು ಗ್ರಂಥಾಲಯಗಳನ್ನು ಹುಡುಕಿದರು. ಆದರೆ ಆಕೆಯ ಸುಳಿವು ಇಲ್ಲ. ಆದರೆ ಕೆಲವು ದಿನಗಳ ಹಿಂದೆ ಸಾಕ್ಷಿ ತನ್ನ ಆಧಾ‌ರ್ ಕಾರ್ಡನ್ನು ನವೀಕರಿಸಿದ್ದಾಳೆ. ಈ ವೇಳೆ ಆಕೆಗೆ 18 ವರ್ಷ ತುಂಬಿದ್ದು ಬಹಿರಂಗವಾಗಿದೆ ಜೊತೆಗೆ ಆಕೆ ಎಲ್ಲಿದ್ದಾಳೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆಧಾ‌ರ್ ನವೀಕರಿಸಿದ ತಕ್ಷಣ, ಪೊಲೀಸರು ಸಾಕ್ಷಿಯ ಸ್ಥಳವನ್ನು ಪತ್ತೆಹಚ್ಚಿದರು. ಅದು ಆಕೆ ಇಂದೋರ್‌ನಲ್ಲಿ ಇದ್ದಾಳೆ ಎಂಬುದನ್ನು ತೋರಿಸಿತು. ಪೊಲೀಸ್ ತಂಡವು ತಕ್ಷಣ ಇಂದೋರ್‌ಗೆ ಆಗಮಿಸಿ ಸಾಕ್ಷಿಯನ್ನು ಪತ್ತೆ ಮಾಡಿದೆ.

ಕೆಲಸದೊಂದಿಗೆ ಓದುತ್ತಿದ್ದ ಸಾಕ್ಷಿ:

ಜನವರಿಯಲ್ಲಿ ಮನೆಯಿಂದ ಹೊರಟು ಬಂದ ಸಾಕ್ಷಿ ಆರಂಭದಲ್ಲಿ ಲಲಿತಪುರದಲ್ಲಿ ವಾಸಿಸುತ್ತಿದ್ದಳು ಮತ್ತು ನಂತರ ಇಂದೋರ್‌ಗೆ ತೆರಳಿದ್ದಳು. ಅಲ್ಲಿ ಅವರು ತಿಂಗಳಿಗೆ 18,000 ರೂಪಾಯಿ ಸಂಬಳದ ಕೆಲಸವನ್ನು ಶುರು ಮಾಡಿದ್ದರು. ಅಲ್ಲಿ ಬಾಡಿಗೆ ಮನೆಯಲ್ಲಿ ಆಕೆ ವಾಸಿಸುತ್ತಿದ್ದಾಳೆ ಎಂದು ಪೊಲೀಸರು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಜೊತೆಗೆ ಸಾಕ್ಷಿಯನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯವೂ ಆಕೆಯನ್ನು ಪೋಷಕರೊಂದಿಗೆ ಹೋಗುವಂತೆ ಸಲಹೆ ನೀಡಿದೆ. ಆದರೆ ಆಕೆ ಒಪ್ಪಿಲ್ಲ.

ಒಟ್ಟಿನಲ್ಲಿ ಗುರಿಯನ್ನು ಬೆನ್ನಟ್ಟಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅನೇಕರ ಮನೆಯಲ್ಲಿ ಎಷ್ಟು ಸವಲತ್ತುಗಳನ್ನು ನೀಡಿದರು ಮಕ್ಕಳು ಓದುವುದಿಲ್ಲ. ಆದರೆ ಇಲ್ಲಿ ಸಾಕ್ಷಿಎಲ್ಲಾ ಅಡೆತಡೆಗಳ ಮೀರಿ ತನ್ನ ಗುರಿ ಬೆನ್ನತ್ತುವುದಕ್ಕೆ ಮನೆ ಬಿಟ್ಟು ಬಂದಿದ್ದಾಳೆ.

ಇದನ್ನೂ ಓದಿ: 12,000 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಿಲ್ಡರ್ ಜೈಪಿ ಇನ್ಪ್ರಾಟೆಕ್ ನಿರ್ದೇಶಕನ ಬಂಧನ

ಇದನ್ನೂ ಓದಿ: ಕಳೆದ 3 ತಿಂಗಳಿಂದ ಆರ್‌ಟಿಒದಿಂದ ಎನ್‌ಒಸಿ ಸ್ಥಗಿತ: ಮರು ನೋಂದಣಿ ಆಗದೇ ವಾಹನ ಮಾರಿದವರಿಗೆ ಸಂಕಷ್ಟ