Manoj Gaur arrest Jaypee Infratech: 12,000 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಮತ್ತು ಮನೆ ಖರೀದಿದಾರರಿಗೆ ವಂಚಿಸಿದ ಪ್ರಕರಣದಲ್ಲಿ ಜೇಪೀ ಇನ್ಫ್ರಾಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಗೌರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. 

ಮನೆ ಖರೀದಿದಾರಿಗೆ ವಂಚನೆ: ಬಿಲ್ಡರ್ಸ್, ಜೇಪೀ ಇನ್ಫ್ರಾಟೆಕ್‌ನ ವ್ಯವಸ್ಥಾಪಕ ನಿರ್ದೇಶಕನ ಬಂಧನ

ನವದೆಹಲಿ: 12,000 ಕೋಟಿ ರೂಗಳ ಅಕ್ರಮ ಹಣ ವರ್ಗಾವಣೆಗೆ ಹಾಗೂ ಮನೆ ಖರೀದಿದಾರರಿಗೆ ವಂಚನೆ ಪ್ರಕರಣದಲ್ಲಿ ಗ್ರೇಟರ್ ನೋಯ್ಡಾದ ಬಿಲ್ಡರ್ಸ್, ಜೇಪೀ ಇನ್ಫ್ರಾಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಗೌರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಮೇ ತಿಂಗಳಲ್ಲಿ ಜೇಪೀ ಇನ್ಫ್ರಾಟೆಕ್ ಲಿಮಿಟೆಡ್, ಜಯಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ ಮತ್ತು ಅವುಗಳಿಗೆ ಸಂಬಂಧಿಸಿದ 15 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿತ್ತು ಮತ್ತು 1.7 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ದಾಳಿ ಸ್ಥಳದಿಂದ ವಶಪಡಿಸಿಕೊಂಡಿತ್ತು.

12,000 ಕೋಟಿ ರೂಗಳ ಅಕ್ರಮ ಹಣ ವರ್ಗಾವಣೆ: ಇಡಿಯಿಂದ ಬಿಲ್ಡರ್ ಮನೋಜ್ ಗೌರ್ ಬಂಧನ

ಈ ಶೋಧದ ಸಮಯದಲ್ಲಿ, ಹಣಕಾಸಿನ ದಾಖಲೆಗಳು ಮತ್ತು ಡಿಜಿಟಲ್ ಡಾಟಾಗಳ ಜೊತೆಗೆ, ಈ ಸಂಸ್ಥೆಗಳ ಪ್ರವರ್ತಕರು, ಅವರ ಕುಟುಂಬ ಸದಸ್ಯರು ಮತ್ತು ಗುಂಪು ಕಂಪನಿಗಳ ಹೆಸರಿನಲ್ಲಿರುವ ಆಸ್ತಿ ದಾಖಲೆಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) 2002ರ ಅಡಿಯಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವೂ ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಮುಂಬೈನಾದ್ಯಂತ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿದೆ.

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರ್ಸನ್ಸ್ ಇಂಡಿಯಾ ಪ್ರೈ., ಗುಲ್ಶನ್ ಹೋಮ್ಜ್ ಪ್ರೈ. ಮತ್ತು ಮಹಾಗುನ್ ರಿಯಲ್ ಎಸ್ಟೇಟ್ ಪ್ರೈ. ಸೇರಿದಂತೆ ಪ್ರಮುಖ ವ್ಯವಹಾರ ಸಹವರ್ತಿಗಳ ಕಚೇರಿಗಳಲ್ಲಿಯೂ ಇಡಿ ಶೋಧ ನಡೆಸಿದೆ. ದೆಹಲಿಯ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಉತ್ತರ ಪ್ರದೇಶ ಪೊಲೀಸರು ಜೆಐಎಲ್, ಜೆಎಎಲ್ ಮತ್ತು ಅವುಗಳ ಪ್ರವರ್ತಕರು ಮತ್ತು ನಿರ್ದೇಶಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ ಹಿನ್ನೆಲೆಯಲ್ಲಿ ಈ ತನಿಖೆ ನಡೆದಿದೆ.

ಪ್ಲಾಟ್‌, ಅಪಾರ್ಟ್‌ಮೆಂಟ್‌ಗಳಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ವಂಚನೆ

ಜೇಪೀ ವಿಶ್‌ಟೌನ್ (ಜೆಐಎಲ್) ಮತ್ತು ಜೇಪೀ ಗ್ರೀನ್ಸ್ (ಜೆಎಎಲ್) ನಂತಹ ಯೋಜನೆಗಳಲ್ಲಿ ವಸತಿ ಅಪಾರ್ಟ್‌ಮೆಂಟ್‌ಗಳು ಮತ್ತು ಪ್ಲಾಟ್‌ಗಳ ಹಂಚಿಕೆಯ ನೆಪದಲ್ಲಿ ಹಣವನ್ನು ಹೂಡಿಕೆ ಮಾಡಲು ಮನೆ ಖರೀದಿದಾರರು ಮತ್ತು ಹೂಡಿಕೆದಾರರನ್ನು ಮೋಸದಿಂದ ಪ್ರೇರೇಪಿಸುವುದು ಸೇರಿದಂತೆ ದೊಡ್ಡ ಪ್ರಮಾಣದ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

2010-11ರಲ್ಲಿ ನಡೆದ ವಂಚನೆ ಪ್ರಕರಣ

2010–11ರ ಅವಧಿಯಲ್ಲಿ ಜೇಪೀ ವಿಶ್ ಟೌನ್‌ನ ಪ್ರವರ್ತಕರು ಮಾಡಿದ ವಂಚನೆಯ ಮೇಲೆ ತನಿಖೆ ಕೇಂದ್ರೀಕೃತವಾಗಿದೆ, ಅಲ್ಲಿ ಫ್ಲಾಟ್‌ಗಳನ್ನು ಮಾರಾಟ ಮಾಡಲಾಗಿತ್ತು ಆದರೆ ವಿತರಿಸಿರಲಿಲ್ಲ, ಮನೆ ಖರೀದಿದಾರರು ವಿಳಂಬವನ್ನು ಪ್ರಶ್ನಿಸಿ ಪ್ರತಿಭಟಿಸಿದಾಗ ಅವರು ನೀಡಿದ ಹಣವನ್ನು ಹಣವನ್ನು ಬೇರೆಡೆಗೆ ತಿರುಗಿಸಿದ್ದಾರೆ. ನಂತರ 2017 ರಲ್ಲಿ ಈ ಸಂಬಂಧ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಬಿಕ್ಕಟ್ಟಿನಲ್ಲಿರುವ ಜೇಪೀ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಜೈಪ್ರಕಾಶ್ ಅಸೋಸಿಯೇಟ್ಸ್, ಸಿಮೆಂಟ್, ನಿರ್ಮಾಣ, ವಿದ್ಯುತ್, ರಿಯಲ್ ಎಸ್ಟೇಟ್ ಮತ್ತು ಆತಿಥ್ಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ. ಮತ್ತೊಂದೆಡೆ ಜೇಪೀ ಗ್ರೂಪ್ ಸಂಸ್ಥೆಯ ಜೇಪೀ ಇನ್ಫ್ರಾಟೆಕ್ ಅನ್ನು ಮುಂಬೈ ಮೂಲದ ಸುರಕ್ಷಾ ಗ್ರೂಪ್ ಈಗಾಗಲೇ ಸ್ವಾಧೀನಪಡಿಸಿಕೊಂಡಿದೆ.

ಇದನ್ನೂ ಓದಿ: ಕಳೆದ 3 ತಿಂಗಳಿಂದ ಆರ್‌ಟಿಒದಿಂದ ಎನ್‌ಒಸಿ ಸ್ಥಗಿತ: ಮರು ನೋಂದಣಿ ಆಗದೇ ವಾಹನ ಮಾರಿದವರಿಗೆ ಸಂಕಷ್ಟ

ಇದನ್ನೂ ಓದಿ: ಚಲಿಸುತ್ತಿದ್ದ ಪಿಕಪ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರೀಡರ್: ಪಿಕಪ್ ನಜ್ಜುಗುಜ್ಜು, ಚಾಲಕ ಸಾವು