ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಐಷಾರಾಮಿ ಕಾರು ಕೊಡಿಸಿಲ್ಲ ಅಂತ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಹೈದರಾಬಾದ್‌: ಕೆಲವರಿಗೆ ಒಂದು ಹೊತ್ತಿನ ಊಟಕ್ಕೆ ಹಣವಿಲ್ಲ ಎಂಬ ಚಿಂತೆಯಾದರೆ ಮತ್ತೆ ಕೆಲವರಿಗೆ ಓಡಾಡಲು ಬೈಕ್ ಇಲ್ಲ, ಕಾರಿಲ್ಲ ಎಂಬ ಚಿಂತೆ ಅದೇ ರೀತಿ ಇಲ್ಲೊಬ್ಬ ಯುವಕ ಅಪ್ಪ ಐಷಾರಾಮಿ ಕಾರು ಖರೀದಿಸಿ ನೀಡಿಲ್ಲ ಎಂದು ಸಾವಿಗೆ ಶರಣಾಗಿದ್ದಾನೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೃಷಿ ಭೂಮಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಂದೆಗೆ, ಮಗನಿಗೆ ಶಿಕ್ಷಣ ಕೊಡಿಸಿ ಹೊಟ್ಟೆ ತುಂಬಿಸುವುದೇ ದೊಡ್ಡ ಸಾಹಸವಾಗಿತ್ತು. ಹೀಗಿರುವಾಗ ಐಷಾರಾಮಿ ಕಾರನ್ನು ತೆಗೆದು ಕೊಡುವುದಾದರು ಹೇಗೆ? ಆದರೆ ಅಪ್ಪ ಅಮ್ಮನ ಕಷ್ಟ ಅರಿಯದ ಮಗ ಸೀದಾ ಹೋಗಿ ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾನೆ.

ಚಟಪಲ್ಲಿ ಗ್ರಾಮದಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಕೃಷಿಭೂಮಿಗೆ ಹೋದ ಯುವಕ ಅಲ್ಲಿ ಕೀಟನಾಶಕ ಸೇವಿಸಿದ್ದಾನೆ. ಬಳಿಕ ಮನೆಗೆ ಬಂದು ತಾನು ಕೀಟನಾಶಕ ಸೇವಿಸಿದ್ದಾಗಿ ಹೇಳಿದ್ದಾನೆ. ಬಳಿಕ ಮನೆಯವರು ಆತನನ್ನು ಆಸ್ಪತ್ರೆಗೆ ಸೇವಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.

ಈತ ತನ್ನ ಶಿಕ್ಷಣವನ್ನು ಅರ್ಧಕ್ಕೆ ಮೊಟುಕುಗಳಿಸಿದ್ದ, ಜೊತೆಗೆ ಕುಡಿತಕ್ಕೆ ದಾಸನಾಗಿದ್ದ ಈತನ ಮಾನಸಿಕ ಸ್ಥಿತಿಯೂ ಸರಿ ಇರಲಿಲ್ಲ, ಹೀಗಾಗಿ ಬಡ ಪೋಷಕರ ಬಳಿ ಈತ ದಿನವೂ ಐಷಾರಾಮಿ ವಸ್ತುಗಳನ್ನು ಕೊಡಿಸುವಂತೆ ಹಿಂಸೆ ನೀಡಿ ಜಗಳ ಮಾಡುತ್ತಿದ್ದ, ಆಧುನಿಕ ಮನೆ ಐಷಾರಾಮಿ ಕಾರು ಬೇಕು ಎಂದು ಆತ ಜಗಳ ಮಾಡುತ್ತಿದ್ದ ಎಂದು ಜಗದೇವ್‌ಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈತನ ಪೋಷಕರಿಗೆ ಎರಡು ಎಕರೆ ಕೃಷಿ ಭೂಮಿ ಇತ್ತು. ಆದರೆ ಉತ್ತಮ ಆದಾಯ ಇರಲಿಲ್ಲ, ಹೀಗಾಗಿ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ ಹೀಗಾಗಿ ಮಗನಿಗೆ ತಮ್ಮ ಸ್ಥಿತಿಯನ್ನು ಅರ್ಥ ಮಾಡಿಸಿ ಆತನ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಪೋಷಕರ ಮಾತನ್ನು ಕೇಳುವುದಕ್ಕೆ ಆತ ಸಿದ್ಧನಿರಲಿಲ್ಲ, ಹೀಗಾಗಿ ಅವರು ಮಗನ ಆಸೆಯನ್ನು ಈಡೇರಿಸುವುದಕ್ಕಾಗಿ ಐಷಾರಾಮಿ ಕಾರಿನ ಬದಲು ಮತ್ತೊಂದು ಕಾರನ್ನು ಖರೀದಿಸುವುದಕ್ಕಾಗಿ ಅವರು ಸಿದ್ದಿಪೇಟ್‌ಗೆ ಬಂದಿದ್ದರು. ಆದರ ಆತ ಈ ಕಾರನ್ನು ನಿರಾಕರಿಸಿದ್ದ ಇದಾದ ನಂತರ ಆತ ಅದೇ ದಿನ ಮಧ್ಯಾಹ್ನ ವಿಷ ಸೇವಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.