ಬಿಜೆಪಿ ಎಂದೆಂದಿಗೂ ಯುವ ಸಮುದಾಯದ ಜೊತೆಗೆ ಇದೆ. ಆದರೆ ಇಲ್ಲಿನ ಎರಡು ಸಾಂಪ್ರದಾಯಿಕ ರಾಜಕೀಯ ಕೂಟಗಳು ಯುವ ಸಮೂಹವನ್ನು ಮೇಲೆತ್ತುವ ಕೆಲಸದಲ್ಲಿ ವಿಫಲವಾಗಿವೆ ಎಂದು ಮೋದಿ ಹೇಳಿದ್ದಾರೆ. 

ಕೊಚ್ಚಿ (ಏಪ್ರಿಲ್ 25, 2023): ಕ್ರೈಸ್ತ ಸಮುದಾಯ ಹೆಚ್ಚಿರುವ ಈಶಾನ್ಯ ರಾಜ್ಯಗಳಲ್ಲಿ ಮತ್ತು ಗೋವಾದಲ್ಲಿ ಜನರು ಬಿಜೆಪಿಯನ್ನು ಒಪ್ಪಿದಂತೆ ಮುಂದಿನ ದಿನಗಳಲ್ಲಿ ಕೇರಳವೂ ಬಿಜೆಪಿಯನ್ನು ಒಪ್ಪಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಜ್ಯದ ಅಭಿವೃದ್ಧಿಗೆ ಹಲವು ವರ್ಷಗಳಿಂದ ರಾಜ್ಯಗಳನ್ನು ಆಳಿದ ಸಿಪಿಎಂ ಮತ್ತು ಕಾಂಗ್ರೆಸ್‌ ಮಾರಕವಾಗಿದೆ ಎಂದು ಕಿಡಿಕಾರಿದ್ದಾರೆ.

ಇಲ್ಲಿ ಸೋಮವಾರ ಸಂಜೆ ಯುವ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘ಬಿಜೆಪಿ ಎಂದೆಂದಿಗೂ ಯುವ ಸಮುದಾಯದ ಜೊತೆಗೆ ಇದೆ. ಆದರೆ ಇಲ್ಲಿನ ಎರಡು ಸಾಂಪ್ರದಾಯಿಕ ರಾಜಕೀಯ ಕೂಟಗಳು ಯುವ ಸಮೂಹವನ್ನು ಮೇಲೆತ್ತುವ ಕೆಲಸದಲ್ಲಿ ವಿಫಲವಾಗಿವೆ. ಎರಡೂ ರಾಜಕೀಯ ಪಂಗಡಗಳ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣ ರಾಜ್ಯದ ಯುವ ಸಮೂಹ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದೆ. ಒಂದು ಪಂಗಡ ತನ್ನ ಪಕ್ಷಕ್ಕೆ ಹೆಚ್ಚು ಮಹತ್ವ ನೀಡಿದರೆ, ಮತ್ತೊಂದು ಪಂಗಡ ಒಂದು ಕುಟುಂಬದ ಏಳ್ಗೆಗೆ ಸೀಮಿತಗೊಂಡಿದೆ. ಒಟ್ಟಾರೆ ಯುವ ಸಮೂಹದ ವಿಷಯದಲ್ಲೂ ಎರಡೂ ರಾಜಕೀಯ ಕೂಟಗಳು ವಿಫಲವಾದವು’ ಎಂದು ಹೆಸರು ಹೇಳದೆಯೇ ಸಿಪಿಎಂ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ವಿರುದ್ಧ ಹರಿಹಾಯ್ದರು.

ಇದನ್ನು ಓದಿ: ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!

ನಾವು ರಾಜ್ಯದಿಂದ ರಫ್ತು ಹೆಚ್ಚಳಕ್ಕೆ ಯೋಜನೆ ರೂಪಿಸುತ್ತಿದ್ದರೆ, ಮತ್ತೆ ಕೆಲವರು ರಾಜ್ಯಕ್ಕೆ ಚಿನ್ನ ಕಳ್ಳಸಾಗಣೆ ಮಾಡುವ ಮೂಲಕ ರಾಜ್ಯದ ಯುವಕರ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಹೆಸರು ಹೇಳದೆಯೇ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ಕೇಳಿಬಂದ ಚಿನ್ನ ಕಳ್ಳಸಾಗಣೆ ವಿಷಯವನ್ನು ಪ್ರಸ್ತಾಪಿಸಿದರು.

ದೇಶ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿದೆ ಮತ್ತು ಇದರಲ್ಲಿ ಕೇರಳ ಕೂಡ ಭಾಗಿಯಾಗಬೇಕೆಂಬುದು ನನ್ನ ಬಯಕೆ. ಈ ವಿಷಯದಲ್ಲಿ ಯುವಕರು ರಾಜ್ಯದಲ್ಲಿ ಹೊಸ ಇತಿಹಾಸ ಬರೆಯಬೇಕು. ನೀವು ಇದರ ನೇತೃತ್ವ ವಹಿಸಬೇಕು ಮತ್ತು ನಿಮ್ಮ ಜೊತೆಗಿರಲು ನಾನು ಸಿದ್ಧ ಎಂದು ಮೋದಿ ಘೋಷಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್‌

ಕೇರಳದಲ್ಲಿ ಮೋದಿಗೆ ಭರ್ಜರಿ ಸ್ವಾಗತ: ರೋಡ್‌ಶೋ ಜೊತೆಗೆ ಕಾಲ್ನಡಿಗೆಯಲ್ಲಿ ಸಾಗಿದ ಪ್ರಧಾನಿ
ಎರಡು ದಿನಗಳ ಕೇರಳ ಪ್ರವಾಸಕ್ಕೆ ಸೋಮವಾರ ಇಲ್ಲಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಸಾವಿರಾರು ಜನರು ಸುಮಾರು 2 ಕಿ.ಮೀ. ದೂರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರಧಾನಿಗೆ ಹೂವಿನ ಮಳೆಗರೆದಿದ್ದಾರೆ.

ಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಯಂಕಾಲ 5 ಗಂಟೆಗೆ ಐಎನ್‌ಎಸ್‌ ಗರುಡಾ ನೌಕಾ ದಳದ ಏರ್‌ಸ್ಟೇಷನ್‌ಗೆ ಪ್ರಧಾನಿ ಮೋದಿ ಆಗಮಿಸಿದರು. ಅಲ್ಲಿಂದ ಸಂಜೆ 5.40ರ ಸುಮಾರಿಗೆ ಕಾಲ್ನಡಿಗೆಯಲ್ಲಿ ರೋಡ್‌ ಶೋ ಆರಂಭಿಸಿದ ಮೋದಿ, ಸುಮಾರು ದೂರ ಎನ್‌ಎಸ್‌ಜಿ ಕಮಾಂಡೋಗಳ ಭದ್ರತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರು. ಕೇರಳ ಸಾಂಸ್ಕೃತಿಕ ಉಡುಪಾದ ಕಸವು ಮುಂಡು ಮತ್ತು ಶಾಲು ಧರಿಸಿ ಸಾಗಿದ ಮೋದಿ ಅವರ ಮೇಲೆ ಅಭಿಮಾನಿಗಳು ಹೂವಿನ ಮಳೆಗರೆದರು. ಬಳಿಕ ಕಾರು ಏರಿದ ಪ್ರಧಾನಿ ಮೋದಿ ಅವರು ಸುಮಾರು 2 ಕಿ.ಮೀ. ದೂರ ರೋಡ್‌ಶೋ ನಡೆಸಿದರು.

ಇದನ್ನೂ ಓದಿ: ನಾಳೆ ಮೋದಿಯಿಂದ ದೇಶದ ಮೊದಲ ‘ವಾಟರ್ ಮೆಟ್ರೋ’ಗೆ ಚಾಲನೆ: ಇದು ಕೇರಳದ ಕನಸಿನ ಯೋಜನೆ!

ಈ ವೇಳೆ ಬಿಜೆಪಿಯ ಕಾರ್ಯಕರ್ತರು ಮತ್ತು ಬೆಂಬಲಿಗರು ಪಕ್ಷದ ಟೋಪಿ ಧರಿಸಿ, ಬಾವುಟಗಳನ್ನು ಬೀಸುತ್ತಾ, ಮೋದಿ ಫೋಟೋ ಇರುವ ಭಿತ್ತಚಿತ್ರಗಳನ್ನು ಹಿಡಿದು ಸಂಭ್ರಮಿಸಿದರು. ರೋಡ್‌ಶೋ ಆರಂಭವಾಗುವ ಗಂಟೆಗಳ ಮೊದಲೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಬೆಂಬಲಿಗರು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿ ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಬಿಜೆಪಿ ಸೇರಿದ ಅನಿಲ್‌ ಆ್ಯಂಟನಿ, ರಾಜ್ಯಸಭಾ ಸಂಸದ ಸುರೇಶ್‌ ಗೋಪಿ, ನಟ ಉನ್ನಿ ಮುಕುಂದನ್‌ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.

ಇದನ್ನೂ ಓದಿ: ಸೆಪ್ಟೆಂಬರ್‌ಗೆ ಜೋ ಬೈಡೆನ್‌ ಭಾರತಕ್ಕೆ; 2024 ನಮ್ಮ ಬಾಂಧವ್ಯಕ್ಕೆ ದೊಡ್ಡ ವರ್ಷ: ಅಮೆರಿಕ