ನಾಳೆ ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್‌ ಮೆಟ್ರೋ ಉದ್ಘಾಟನೆಗೊಳ್ಳಲಿದ್ದು, 1136 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ವಿಶಿಷ್ಟ ಮೆಟ್ರೋ ಯೊಜನೆ ಇದಾಗಿದೆ. ಅಲ್ಲದೆ, 78 ಎಲೆಕ್ಟ್ರಿಕ್‌ ಬೋಟ್‌, 38 ನಿಲ್ದಾಣಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.  

ತಿರುವನಂತಪುರಂ (ಏಪ್ರಿಲ್ 24, 2023): ಕೇರಳದ ಕೊಚ್ಚಿಯಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ವಾಟರ್‌ ಮೆಟ್ರೋ ಸಾರಿಗೆಗೆ ಪ್ರಧಾನಿ ನರೇಂದ್ರ ಏಪ್ರಿಲ್‌ 25ರಂದು ಚಾಲನೆ ನೀಡಲಿದ್ದಾರೆ. ಕೊಚ್ಚಿ ಹಾಗೂ ಸುತ್ತಮುತ್ತಲಿನ 10 ದ್ವೀಪಗಳಿಗೆ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಹೈಬ್ರಿಡ್‌ ಬೋಟ್‌ಗಳ ಮೂಲಕ ಸಂಪರ್ಕ ಕಲ್ಪಿಸುವ ಮೆಟ್ರೋ ಇದಾಗಿದೆ.

1136 ಕೋಟಿ ರೂ. ವೆಚ್ಚದಲ್ಲಿ ಈ ವಾಟರ್‌ ಮೆಟ್ರೋ ನಿರ್ಮಾಣವಾಗಿದೆ. ಒಟ್ಟು 36 ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳಿಗೆ 78 ಎಲೆಕ್ಟ್ರಿಕ್‌ ಬೋಟ್‌ಗಳು ಸಂಪರ್ಕ ಕಲ್ಪಿಸಲಿವೆ. ಇದು ಕೇರಳದ ಕನಸಿನ ಯೋಜನೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಯೋಜನೆಗೆ ಕೇರಳ ಸರ್ಕಾರ ಹಾಗೂ ಜರ್ಮನಿಯ ಕೆಎಫ್‌ಡಬ್ಲ್ಯು ಸಂಸ್ಥೆ ಹಣಕಾಸು ಒದಗಿಸಿವೆ.

ಇದನ್ನು ಓದಿ: ಮೋದಿ ಆಡಳಿತದಲ್ಲಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ: ಅತಿ ಉದ್ದದ ರಸ್ತೆ ಜಾಲದಲ್ಲಿ ಭಾರತ ವಿಶ್ವಕ್ಕೇ ನಂ. 2!

ಮೊದಲ ಹಂತದಲ್ಲಿ ಹೈಕೋರ್ಟ್‌ ನಿಲ್ದಾಣದಿಂದ ವೈಟಿಲ ನಿಲ್ದಾಣಕ್ಕೆ ಮೆಟ್ರೋ ಬೋಟ್‌ಗಳು ಸಂಚರಿಸಲಿವೆ. ಕೊಚ್ಚಿಯಲ್ಲಿರುವ ಸಾಮಾನ್ಯ ಮೆಟ್ರೋದಲ್ಲಿ ಸಂಚರಿಸುವವರು ‘ಕೊಚ್ಚಿ 1’ ಕಾರ್ಡ್‌ ಬಳಸಿ ಸುತ್ತಮುತ್ತ ಇರುವ 10 ದ್ವೀಪಗಳಿಗೆ ಪ್ರಯಾಣಿಸಲು ವಾಟರ್‌ ಮೆಟ್ರೋದಲ್ಲೂ ಸಂಚರಿಸಬಹುದಾಗಿದೆ. ಟಿಕೆಟ್‌ಗಳನ್ನು ಡಿಜಿಟಲ್‌ ರೂಪದಲ್ಲೂ ಖರೀದಿಸುವ ವ್ಯವಸ್ಥೆಯಿದೆ.

ಏಪ್ರಿಲ್ 24 ಹಾಗೂ ಏಪ್ರಿಲ್ 25ರಂದು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶ, ಕೇರಳ, ದಾದ್ರಾ ನಗರ್‌ ಹವೇಲಿ ಮತ್ತು ದಮನ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಏಪ್ರಿಲ್ 25ರಂದು ಕೊಚ್ಚಿ ವಾಟರ್‌ ಮೆಟ್ರೋ ಜೊತೆಗೆ ತಿರುವನಂತಪುರಂ ಮತ್ತು ಕಾಸರಗೋಡಿನ ನಡುವೆ ಸಂಚರಿಸುವ ಕೇರಳದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೂ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್‌

ಕೊಚ್ಚಿ ವಾಟರ್ ಮೆಟ್ರೋ: ನೀವು ತಿಳಿದುಕೊಳ್ಳಬೇಕಾದ ಪ್ರಮುಖಾಂಶಗಳು
1. ಮೆಟ್ರೋ ಯೋಜನೆಯು ಎಂಟು ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್‌ಗಳೊಂದಿಗೆ ಪ್ರಾರಂಭವಾಗುತ್ತಿದ್ದು, ಕೊಚ್ಚಿ ಶಿಪ್‌ಯಾರ್ಡ್ ಲಿಮಿಟೆಡ್‌ ಇದನ್ನು ನಿರ್ಮಿಸಿದೆ.

2. ಕೊಚ್ಚಿ ವಾಟರ್ ಮೆಟ್ರೋ ಬಂದರು ನಗರ ಮತ್ತು ಅದರ ಸುತ್ತಮುತ್ತಲಿನ 10 ದ್ವೀಪಗಳನ್ನು ಸಂಪರ್ಕಿಸುತ್ತದೆ.

3. ಕನಸಿನ ಯೋಜನೆಗೆ ಕೇರಳ ಸರ್ಕಾರ ಮತ್ತು ಜರ್ಮನ್ ಸಂಸ್ಥೆ KfW ಹಣ ಹೂಡಿಕೆ ಮಾಡಿದೆ.

4. ಒಟ್ಟಾರೆ KWM (ಕೊಚ್ಚಿ ವಾಟರ್ ಮೆಟ್ರೋ) ಯೋಜನೆಯು 78 ವಿದ್ಯುತ್ ದೋಣಿಗಳು ಮತ್ತು 38 ಟರ್ಮಿನಲ್‌ಗಳನ್ನು ಒಳಗೊಂಡಿದೆ.

5. ಮೊದಲ ಹಂತದಲ್ಲಿ, KWM ಸೇವೆಯು ಹೈಕೋರ್ಟ್-ವೈಪಿನ್ ಟರ್ಮಿನಲ್‌ಗಳು ಮತ್ತು ವೈಟಿಲ - ಕಾಕ್ಕನಾಡ್ ಟರ್ಮಿನಲ್‌ಗಳಿಂದ ಪ್ರಾರಂಭವಾಗುತ್ತದೆ. ಕೇರಳ ಮುಖ್ಯಮಂತ್ರಿ ಪ್ರಕಾರ, ಪ್ರಯಾಣಿಕರು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳದೆ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಹೈಕೋರ್ಟ್ ಟರ್ಮಿನಲ್‌ನಿಂದ ವೈಪಿನ್ ಟರ್ಮಿನಲ್‌ಗೆ ತಲುಪಲು ಸಾಧ್ಯವಾಗುತ್ತದೆ. ವೈಟಿಲದಿಂದ ವಾಟರ್ ಮೆಟ್ರೋ ಮೂಲಕ 25 ನಿಮಿಷಗಳಲ್ಲಿ ಕಾಕ್ಕನಾಡ್ ತಲುಪಬಹುದು.

6. ಕೊಚ್ಚಿ ವಾಟರ್ ಮೆಟ್ರೋದ ಟಿಕೆಟ್ ವಿವರಗಳು: ದೋಣಿ ಪ್ರಯಾಣಕ್ಕೆ ಕನಿಷ್ಠ ಟಿಕೆಟ್ ದರ 20 ರೂಪಾಯಿ. ಸಾಮಾನ್ಯ ಪ್ರಯಾಣಿಕರಿಗೆ ಸಾಪ್ತಾಹಿಕ ಮತ್ತು ಮಾಸಿಕ ಪಾಸ್‌ಗಳಿವೆ. ಕೊಚ್ಚಿ ಒನ್ ಕಾರ್ಡ್ ಬಳಸಿ ಕೊಚ್ಚಿ ಮೆಟ್ರೋ ರೈಲು ಮತ್ತು ಕೊಚ್ಚಿ ವಾಟರ್ ಮೆಟ್ರೋದಲ್ಲಿ ಪ್ರಯಾಣಿಸಬಹುದು. ಕೊಚ್ಚಿ ಒನ್ ಆಪ್ ಮೂಲಕ ಡಿಜಿಟಲ್ ಮೂಲಕವೂ ಟಿಕೆಟ್ ಬುಕ್ ಮಾಡಬಹುದು.

7. ಕೊಚ್ಚಿ ವಾಟರ್ ಮೆಟ್ರೋ ಲಿಥಿಯಂ ಟೈಟಾನೈಟ್ ಸ್ಪಿನೆಲ್ ಬ್ಯಾಟರಿಗಳಿಂದ ಚಲಿಸುತ್ತದೆ.

8. ವಾಟರ್ ಮೆಟ್ರೋವನ್ನು ಪರಿಸರ ಸ್ನೇಹಿ, ವಿದ್ಯುತ್ ಚಾಲಿತ ಮತ್ತು ವಿಕಲಚೇತನರಿಗೆ ಸುರಕ್ಷಿತ ಎಂದು ಹೇಳಲಾಗಿದೆ.

9. ಇದು ವಿಶಾಲವಾದ ಕಿಟಕಿಗಳನ್ನು ಹೊಂದಿರುವ ಹವಾನಿಯಂತ್ರಿತ ದೋಣಿಗಳಾಗಿದ್ದು ಹಿನ್ನೀರಿನ ಅದ್ಭುತ ನೋಟವನ್ನು ನೀಡುತ್ತದೆ.

10. ಕೊಚ್ಚಿ ವಾಟರ್ ಮೆಟ್ರೋ ಯೋಜನೆಯ ಒಟ್ಟಾರೆ ವೆಚ್ಚ ₹1,137 ಕೋಟಿ.

ಇದನ್ನೂ ಓದಿ: ಸೆಪ್ಟೆಂಬರ್‌ಗೆ ಜೋ ಬೈಡೆನ್‌ ಭಾರತಕ್ಕೆ; 2024 ನಮ್ಮ ಬಾಂಧವ್ಯಕ್ಕೆ ದೊಡ್ಡ ವರ್ಷ: ಅಮೆರಿಕ