ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್
ಪ್ರಧಾನಿ ವಿರುದ್ಧ ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕ್ಸೇವಿಯರ್ ಎಂಬಾತನನ್ನು ನಿನ್ನೆ ಬಂಧಿಸಲಾಗಿದ್ದು, ಈ ಪತ್ರ ಬರೆಯಲು ಕಾರಣ ವೈಯಕ್ತಿಕ ದ್ವೇಷ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.
ತಿರುವನಂತಪುರ (ಏಪ್ರಿಲ್ 23, 2023): ನಾಳೆಯಿಂದ ಪ್ರಧಾನಿ ಮೋದಿ 2 ದಿನಗಳ ಕಾಲ ಕೇರಳ ಪ್ರವಾಸದಲ್ಲಿರಲಿದ್ದಾರೆ. ಆದರೆ, ಇದಕ್ಕೂ ಮೊದಲೇ ಪ್ರಧಾನಿ ಮೋದಿಯನ್ನು ಆತ್ಮಾಹುತಿ ದಾಳಿ ನಡೆಸೋದಾಗಿ ಬೆದರಿಕೆ ಪತ್ರವೊಂದು ಬಂದಿತ್ತು. ಈ ಹಿನ್ನೆಲೆ ಕೇರಳ ಪೊಲೀಸರು ಹೈ ಅಲರ್ಟ್ ಆಗಿದ್ದರು. ಈಗ, ಈ ಬೆದರಿಕೆ ಪತ್ರ ಬರೆದ ಆರೋಪಿಯನ್ನು ಕೇರಳ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಈ ಸಂಬಂಧ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಕೊಚ್ಚಿ ನಗರ ಪೊಲೀಸ್ ಆಯುಕ್ತ ಕೆ. ಸೇತು ರಾಮನ್, “ಪ್ರಧಾನಿ ವಿರುದ್ಧ ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕ್ಸೇವಿಯರ್ ಎಂಬಾತನನ್ನು ನಿನ್ನೆ ಬಂಧಿಸಲಾಗಿತ್ತು. ಈ ಪತ್ರ ಬರೆಯಲು ಕಾರಣ ವೈಯಕ್ತಿಕ ದ್ವೇಷ ಎಂದು ತಿಳಿದುಬಂದಿದೆ. ತನ್ನ ನೆರೆಹೊರೆಯವರನ್ನು ಸಿಕ್ಕಿಸಲು ಆರೋಪಿ ಈ ಪತ್ರ ಬರೆದಿದ್ದಾರೆ. ವಿಧಿವಿಜ್ಞಾನದ ಸಹಾಯದಿಂದ ನಾವು ಆರೋಪಿಯನ್ನು ಪತ್ತೆಹಚ್ಚಿದ್ದೇವೆ’’ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು, ಬೆದರಿಕೆ ಪತ್ರದ ಬೆನ್ನಲ್ಲೇ ಕೇರಳದಲ್ಲಿ ಹೈ ಅಲರ್ಟ್!
ಕೇರಳದ ಕೊಚ್ಚಿಯಲ್ಲಿರುವ ವ್ಯಕ್ತಿಯೊಬ್ಬರು ಮಲಯಾಳಂ ಭಾಷೆಯಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರ ಕಚೇರಿಯಲ್ಲಿ ಸ್ವೀಕರಿಸಲಾಗಿದ್ದು, ಅವರು ಕಳೆದ ವಾರ ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರು..
ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು, ಎನ್. ಕೆ. ಜಾನಿ ಎಂಬ ವ್ಯಕ್ತಿಯನ್ನು ಪತ್ತೆಹಚ್ಚಿದರು. ಏಕೆಂದರೆ, ಅವರ ವಿಳಾಸದಿಂದ ಈ ಪತ್ರವನ್ನು ಕಳಿಸಲಾಗಿತ್ತು ಎಂದು ತಿಳಿದುಬಂದಿತ್ತು. ಈ ಪತ್ರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಗಾದ ಸ್ಥಿತಿಯೇ ಮೋದಿಗೂ ಆಗುತ್ತದೆ ಎಂದು ಬೆದರಿಸಲಾಗಿತ್ತು. ಆದರೆ, ಕೊಚ್ಚಿ ಮೂಲದ ಜಾನಿ ಅವರು ಪತ್ರ ಬರೆದಿರುವುದನ್ನು ಅಲ್ಲಗಳೆದಿದ್ದು, ತಮ್ಮ ವಿರುದ್ಧ ದ್ವೇಷ ಸಾಧಿಸಿದ ವ್ಯಕ್ತಿಯೇ ಹತ್ಯೆ ಬೆದರಿಕೆಯ ಹಿಂದೆ ಇರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಬಡವರ ಶಿಕ್ಷಣಕ್ಕೆ ಬೆಳಕಾಗಿದ್ದ ಆರ್ಚ್ ಬಿಷಪ್ ಮಾರ್ ಜೋಸೆಫ್ ಪೊವಾಥಿಲ್ ನಿಧನ: ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ತಿರುವನಂತಪುರಂ ಸೆಂಟ್ರಲ್ ಸ್ಟೇಷನ್‌ನಲ್ಲಿ ಏಪ್ರಿಲ್ 25 ರಂದು ಉದ್ಘಾಟಿಸಲಿದ್ದಾರೆ. ಈ ವೇಳೆ ಅವರು 3,200 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಮೋದಿ ಕೊಚ್ಚಿ ವಾಟರ್ ಮೆಟ್ರೋವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ರೀತಿಯ ಯೋಜನೆಯು ಕೊಚ್ಚಿಯ ಸುತ್ತಮುತ್ತಲಿನ 10 ದ್ವೀಪಗಳನ್ನು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಹೈಬ್ರಿಡ್ ದೋಣಿಗಳ ಮೂಲಕ ಕೊಚ್ಚಿ ನಗರದೊಂದಿಗೆ ತಡೆರಹಿತ ಸಂಪರ್ಕಕ್ಕಾಗಿ ಸಂಪರ್ಕಿಸುತ್ತದೆ ಎಂದೂ ANI ವರದಿ ಮಾಡಿದೆ.
ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ಮತ್ತಷ್ಟು ಕಿಚ್ಚು; ಕೆಲವೆಡೆ ಪ್ರದರ್ಶನ: ಸತ್ಯ ಹೊರಗೆ ಬಂದೇ ಬರುತ್ತದೆ ಎಂದ ರಾಹುಲ್ ಗಾಂಧಿ
ಈ ಮಧ್ಯೆ, ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಉದ್ದೇಶಕ್ಕಾಗಿ 2060 ಪೊಲೀಸರನ್ನು ನೇಮಿಸಲಾಗಿದೆ. ಇದರ ಭಾಗವಾಗಿ ಮಧ್ಯಾಹ್ನ 2 ಗಂಟೆಯಿಂದ ಟ್ರಾಫಿಕ್ ನಿಯಂತ್ರಣವನ್ನೂ ಹೇರಲಾಗಿದೆ,'' ಎಂದು ಕೆ. ಸೇತು ರಾಮನ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಕನ್ನಡಿಗರು ಸೇರಿ 3000 ಭಾರತೀಯರ ರಕ್ಷಣೆಗೆ ಏರ್‌ಲಿಫ್ಟ್ ಮಾಡಲು ಮೋದಿ ಸೂಚನೆ