ಸುದ್ದಿಗೆ ಫೇಸ್‌ಬುಕ್, ಗೂಗಲ್ ಹಣ ನೀಡಲಿ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಮಾಧ್ಯಮಗಳ ಸುದ್ದಿ ಬಳಸುವ ಗೂಗಲ್, ಎಫ್‌ಬಿ ಹಣ ನೀಡಬೇಕು, ಡಿಜಿಟಲ್ ಇಂಡಿಯಾ ಕಾಯ್ದೆಯಲ್ಲಿ ಇದಕ್ಕೆ ಪರಿಹಾರ, ಆಸ್ಪ್ರೇಲಿಯಾ, ಕೆನಡಾ ಮುಂತಾದೆಡೆ ಈಗಾಗಲೇ ಹಣ ಪಾವತಿ: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್
ನವದೆಹಲಿ(ಜ.22): ಮುಖ್ಯವಾಹಿನಿಯ ಮಾಧ್ಯಮಗಳು ಸಿದ್ಧಪಡಿಸುವ ಸುದ್ದಿಗಳನ್ನು ಉಚಿತವಾಗಿ ತಮ್ಮ ವೆಬ್‌ಸೈಟುಗಳಲ್ಲಿ ಪ್ರಕಟಿಸಿ ಹಣ ಮಾಡಿಕೊಳ್ಳುವ ಗೂಗಲ್, ಫೇಸ್‌ಬುಕ್ ಮುಂತಾದ ಕಂಪನಿಗಳು ಶೀಘ್ರದಲ್ಲೇ ಭಾರತದಲ್ಲೂ ಮಾಧ್ಯಮ ಸಂಸ್ಥೆಗಳಿಗೆ ಹಣ ನೀಡುವುದು ಕಡ್ಡಾಯವಾಗುವ ಸಾಧ್ಯತೆಯಿದೆ. ‘ಟೆಕ್ ಕಂಪನಿಗಳು ತಮ್ಮ ಆದಾಯವನ್ನು ಮಾಧ್ಯಮ ಸಂಸ್ಥೆಗಳ ಜೊತೆ ಪ್ರಾಮಾಣಿಕವಾಗಿ ಹಂಚಿಕೊಳ್ಳಬೇಕು’ ಎಂದು ಸ್ಪಷ್ಟವಾಗಿ ಹೇಳಿರುವ ಭಾರತ ಸರ್ಕಾರ, ಮುಂಬರುವ ಡಿಜಿಟಲ್ ಇಂಡಿಯಾ ಕಾಯ್ದೆಯಲ್ಲಿ ಇದಕ್ಕೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ ಏರ್ಪಡಿಸಿದ್ದ ಶೃಂಗದಲ್ಲಿ ಈ ಕುರಿತು ಬಲವಾದ ವಾದ ಮಂಡಿಸಿದ್ದಾರೆ.
1 ಲಕ್ಷ ಕೋಟಿ ಮೊಬೈಲ್ ರಫ್ತು ಗುರಿ: ರಾಜೀವ್ ಚಂದ್ರಶೇಖರ್
ಆಸ್ಪ್ರೇಲಿಯಾ, ಕೆನಡಾ, ಫ್ರಾನ್ಸ್, ಯುರೋಪಿಯನ್ ಯೂನಿಯನ್ ದೇಶಗಳಲ್ಲಿ ಈಗಾಗಲೇ ಟೆಕ್ ಕಂಪನಿಗಳು ತಾವು ಬಳಸಿಕೊಳ್ಳುವ ಡಿಜಿಟಲ್ ಅಥವಾ ಇನ್ನಾವುದೇ ಮಾಧ್ಯಮಗಳ ಸುದ್ದಿಗಳಿಗೆ ಹಣ ಪಾವತಿಸುತ್ತವೆ. ಈ ವ್ಯವಸ್ಥೆ ಭಾರತದಲ್ಲೂ ಜಾರಿಗೆ ಬರಬೇಕೆಂದು ಸುದ್ದಿ ಮಾಧ್ಯಮಗಳು ಕೇಳುತ್ತಿದ್ದವು. ಅದಕ್ಕೆ ಕೇಂದ್ರ ಸರ್ಕಾರ ಕಿವಿಗೊಟ್ಟಿದೆ.
ಸುದ್ದಿ ಸೃಷ್ಟಿ, ಹಣ ಗಳಿಕೆ ನಡುವೆ ಅಸಮತೋಲನ:
ಸಂವಾದದಲ್ಲಿ ಮಾತನಾಡಿದ ರಾಜೀವ್ ಚಂದ್ರಶೇಖರ್, ‘ಟೆಕ್ ಕಂಪನಿಗಳು ಉಚಿತವಾಗಿ ಸುದ್ದಿಗಳನ್ನು ಬಳಸಿಕೊಂಡು ಹಣ ಗಳಿಸುತ್ತಿರುವುದರಿಂದ ಸುದ್ದಿಗಳ ಸೃಷ್ಟಿಹಾಗೂ ಹಣ ಗಳಿಕೆಯ ನಡುವೆ ಅಸಮತೋಲನ ಉಂಟಾಗಿದೆ. ಇಂಟರ್ನೆಟ್‌ನ ವಿನ್ಯಾಸ ಈ ಅಸಮತೋಲನವನ್ನು ಇನ್ನಷ್ಟುಹೆಚ್ಚಿಸಿದೆ. ಇದರಿಂದಾಗಿ ಸಣ್ಣಪುಟ್ಟಮಾಧ್ಯಮ ಸಂಸ್ಥೆಗಳು ನಷ್ಟಅನುಭವಿಸುತ್ತಿವೆ. ಮುಂದೆ ಜಾರಿಗೆ ತರಲಿರುವ ಡಿಜಿಟಲ್ ಇಂಡಿಯಾ ಕಾಯ್ದೆಯಲ್ಲಿ ಆಸ್ಪ್ರೇಲಿಯಾ ಮಾದರಿಯಲ್ಲಿ ಇದಕ್ಕೆ ಪರಿಹಾರ ನೀಡಲಾಗುವುದು. ಅಲ್ಲಿ ಫೇಸ್‌ಬುಕ್, ಗೂಗಲ್ ಮುಂತಾದ ಕಂಪನಿಗಳು ತಾವು ಬೇರೆ ಮಾಧ್ಯಮ ಸಂಸ್ಥೆಗಳ ಸುದ್ದಿಯಿಂದ ಗಳಿಸುವ ಆದಾಯವನ್ನು ಮಾಧ್ಯಮ ಸಂಸ್ಥೆಗಳ ಜೊತೆ ಹಂಚಿಕೊಳ್ಳುತ್ತವೆ’ ಎಂದು ಹೇಳಿದರು.
ಮಾಧ್ಯಮಗಳಿಗೆ ಪಾಲು ಸಿಗಬೇಕು:
ಅಪೂರ್ವ ಚಂದ್ರ ಮಾತನಾಡಿ, ‘ಪತ್ರಿಕೋದ್ಯಮದ ಭವಿಷ್ಯ ಮತ್ತು ಡಿಜಿಟಲ್ ಹಾಗೂ ಮುದ್ರಣ ಸೇರಿದಂತೆ ಮಾಧ್ಯಮ ಉದ್ದಿಮೆಗಳ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಟೆಕ್ ಕಂಪನಿಗಳು ವಿವಿಧ ಮಾಧ್ಯಮಗಳ ಸುದ್ದಿಗಳನ್ನು ಬಳಸಿಕೊಂಡು ಗಳಿಸುವ ಆದಾಯವನ್ನು ಮಾಧ್ಯಮ ಸಂಸ್ಥೆಗಳ ಜೊತೆ ಹಂಚಿಕೊಳ್ಳಬೇಕು. ಮಾಧ್ಯಮ ಉದ್ದಿಮೆ ಬೆಳೆಯಬೇಕಾದರೆ ಇಂತಹದ್ದೊಂದು ನ್ಯಾಯಯುತ ಪಾಲು ಮಾಧ್ಯಮಗಳಿಗೆ ಸಿಗಬೇಕು. ಅನೇಕ ದೇಶಗಳು ಈ ಕುರಿತು ಕಾಯ್ದೆ ಜಾರಿಗೆ ತಂದು, ತಮ್ಮಲ್ಲಿನ ಸ್ಪರ್ಧಾ ಆಯೋಗಗಳನ್ನು ಬಲಪಡಿಸಿವೆ’ ಎಂದು ಹೇಳಿದರು.