Asianet Suvarna News Asianet Suvarna News

1 ಲಕ್ಷ ಕೋಟಿ ಮೊಬೈಲ್‌ ರಫ್ತು ಗುರಿ: ರಾಜೀವ್ ಚಂದ್ರಶೇಖರ್

ಕಳೆದ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ಮಾರಾಟವಾದ ಮೊಬೈಲ್‌ ಫೋನ್‌ಗಳು ಮೌಲ್ಯದ ಆಧಾರದಲ್ಲಿ ಶೇ.95ರಷ್ಟು ಮತ್ತು ಉತ್ಪನ್ನದ ಆಧಾರದಲ್ಲಿ ಶೇ.98.8ರಷ್ಟು ಫೋನ್ ಭಾರತದಲ್ಲಿಯೇ ತಯಾರಿಸಲ್ಪಟ್ಟವಾಗಿವೆ-ರಾಜೀವ್ ಚಂದ್ರಶೇಖರ್

1 lakh crore mobile export target: Ministry of Electronics and Information Technology Rajeev Chandrasekhar akb
Author
First Published Jan 16, 2023, 12:09 PM IST

ರಾಜೀವ್ ಚಂದ್ರಶೇಖರ್,  ಲೇಖಕರು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ರಾಜ್ಯ ಖಾತೆ ಸಚಿವರು

ಜಗತ್ತು ಅಭೂತಪೂರ್ವ ವೇಗದಲ್ಲಿ ಡಿಜಿಟಲೀಕರಣಗೊಳ್ಳುತ್ತಿದ್ದಂತೆ, ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯು ಭವಿಷ್ಯದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುತ್ತಿದೆ. ವಾಸ್ತವವಾಗಿ ಎಲೆಕ್ಟ್ರಾನಿಕ್ಸ್‌ ಒಂದು ಸಂಯೋಜಿತ ಉದ್ಯಮವಾಗಿ ಈಗಾಗಲೇ ಜಾಗತಿಕ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದೆ ಎಂಬುದಕ್ಕೆ ಸಾಕಷ್ಟುಪುರಾವೆಗಳಿವೆ. ಉತ್ಪಾದನೆ ಆಧರಿತ ಪ್ರೋತ್ಸಾಹ (ಪಿಎಲ್‌ಐ) ಸ್ಕೀಂಗಳು ಮತ್ತು ಮೊಬೈಲ್‌ ಫೋನ್‌ಗಳ ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸುವ ಮೂಲಕ ನಾವು 2023ಕ್ಕೆ ಪ್ರವೇಶಿಸಿದ್ದೇವೆ. 2026ರ ವೇಳೆಗೆ ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯಲ್ಲಿ ಭಾರತವನ್ನು 300 ಬಿಲಿಯನ್‌ ಡಾಲರ್‌ (24 ಲಕ್ಷ ಕೋಟಿ ರು.) ಹಬ್‌ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಯನ್ನು ನಾನು ಹೊಸದಾಗಿ ರೂಪಿಸಲು ಬಯಸುತ್ತೇನೆ.

80% ಮೊಬೈಲ್‌ ಆಮದಾಗುತ್ತಿದ್ದವು

ಆದರೆ ಇದಕ್ಕಿಂತ ಮೊದಲು, ನಾವು ಇಲ್ಲಿಗೆ ಹೇಗೆ ಬಂದೆವು ಎಂಬುದರ ಕುರಿತಾಗಿ ಒಮ್ಮೆ ಹಿಂದಿರುಗಿ ನೋಡೋಣ. ಉದಾರೀಕರಣ ಆರಂಭವಾದ 90ರ ದಶಕದ ಆದಿಯಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಭಾರತ ಸರ್ಕಾರ ಶೇ.100ರಷ್ಟುಎಫ್‌ಡಿಐಗೆ ಆಹ್ವಾನ ನೀಡಿತು. ಇದರಿಂದಾಗಿ ಫ್ಯುಜಿಸು, ಸೀಮನ್ಸ್‌, ಎರಿಕ್‌ಸನ್‌, ಎಟಿ ಅಂಡ್‌ ಟಿ (ಲ್ಯೂಸೆಂಟ್‌) ಮತ್ತು ನೋರ್ಟೆಲ್‌ ಕಂಪನಿಗಳಿಂದ ಒಂದಷ್ಟುಹೂಡಿಕೆಯನ್ನು ಕಂಡಿತು. ಆ ಹೂಡಿಕೆ ಬಹುಪಾಲು ಆಗಿದ್ದು ನೆಟ್‌ವರ್ಕಿಂಗ್‌ ವಲಯದಲ್ಲಿ. ಬಳಿಕ ಮೋಟರೋಲಾ, ಸೋನಿ ಮತ್ತು ನೋಕಿಯಾ ಕಂಪನಿಗಳು ಮೊಬೈಲ್‌ ಹ್ಯಾಂಡ್‌ಸೆಟ್‌ ಕ್ಷೇತ್ರವನ್ನು ಪ್ರವೇಶಿಸಿದವು. ಆದರೆ ಇವು ಕುಂಟುತ್ತಾ ಸಾಗುತ್ತಿದ್ದವು. 2000ನೇ ಇಸವಿ ಅಂತ್ಯದಲ್ಲಿ ನೋಕಿಯಾ ಮೂಲಕ ಮೊಬೈಲ್‌ ತಯಾರಿಕೆಯಲ್ಲಿ ನಿಜವಾದ ಪರಿಮಾಣಗಳು ಆರಂಭವಾದವು. ಆದಾಗ್ಯೂ ಯುಪಿಎ ಆಳ್ವಿಕೆಯಲ್ಲಿ 2ಜಿ ಹಗರಣ ಮತ್ತು ನೋಕಿಯಾ ಕಂಪನಿ ಪತನದ ನಂತರ ಕ್ಷೇತ್ರವು ಛಿದ್ರವಾಯಿತು. 2014-15ರಲ್ಲಿ ಯುಪಿಎ ಸರ್ಕಾರ ಬಿದ್ದಾಗ ಭಾರತದಲ್ಲಿ ಬಳಕೆಯಾಗುತ್ತಿರುವ ಮೊಬೈಲ್‌ ಫೋನ್‌ಗಳಲ್ಲಿ ಶೇ.80ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.

ರಫ್ತು ಹೆಚ್ಚಳ ಗುರಿಯಾಗಬೇಕು

ಈ ಅವ್ಯವಸ್ಥೆಯನ್ನು ಸರಿಪಡಿಸುವ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೊತ್ತುಕೊಳ್ಳಬೇಕಿತ್ತು. ಹಾಗಾಗಿ ಮೊದಲ ಹಂತದಲ್ಲಿ ಶೇ.78ರಷ್ಟುಆಮದಿನಿಂದ ಸರ್ಕಾರ ಆಮದು ಪರ್ಯಾಯಕ್ಕೆ ಸ್ಥಳಾಂತರಗೊಂಡಿತು. 2017ರಲ್ಲಿ ಹಂತ ಹಂತದ ಉತ್ಪಾದನಾ ಕಾರ್ಯಕ್ರಮಗಳಂತಹ ನೀತಿಗಳ ಮೂಲಕ ಇದನ್ನು ಸಾಧಿಸಲಾಯಿತು. ಇದು ಒಂದು ಕಡೆ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು ಹಾಗೂ ಇನ್ನೊಂದೆಡೆ ಆಮದನ್ನು ಕಡಿಮೆ ಮಾಡುವುದಾಗಿದೆ. 2021ರ ವೇಳೆಗೆ ಈ ನೀತಿಗಳು ಪ್ರಚಂಡ ಫಲಿತಾಂಶವನ್ನು ತೋರಿದವು. ಕಳೆದ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ಮಾರಾಟವಾದ ಮೊಬೈಲ್‌ ಫೋನ್‌ಗಳು ಮೌಲ್ಯದ ಆಧಾರದಲ್ಲಿ ಶೇ.95ರಷ್ಟುಮತ್ತು ಉತ್ಪನ್ನದ ಆಧಾರದಲ್ಲಿ ಶೇ.98.8ರಷ್ಟುಭಾರತದಲ್ಲಿಯೇ ತಯಾರಿಸಲ್ಪಟ್ಟವಾಗಿವೆ. ಉತ್ಪನ್ನಗಳ ಆಧಾರದಲ್ಲಿ ಭಾರತ 2ನೇ ಅತಿದೊಡ್ಡ ಮೊಬೈಲ್‌ ಉತ್ಪಾದಕ ರಾಷ್ಟ್ರವಾಗಿದ್ದರೂ, ಇದು ಜಾಗತಿಕ ಮಾರುಕಟ್ಟೆಯಲ್ಲಿ ಶೇ.6ರಷ್ಟಿದೆ. ಸ್ಪಷ್ಟವಾಗಿ ಇದು ಸಾಕಾಗುವುದಿಲ್ಲ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್‌ಗಳ ನಡುವೆ ಮೊಬೈಲ್‌ ಫೋನ್‌ಗಳು ಜಾಗತಿಕವಾಗಿ ಅತಿ ಹೆಚ್ಚು ರಫ್ತು ಮಾಡಲಾದ ವಸ್ತುಗಳಾಗಿವೆ. ಚೀನಾ ಮತ್ತು ವಿಯೆಟ್ನಾಂ ಎಂಬ 2 ದೇಶಗಳು ಮತ್ತು ಆ್ಯಪಲ್‌, ಸ್ಯಾಮ್‌ಸಂಗ್‌, ಹುವಾಯಿ ಮತ್ತು ಬಿಬಿಕೆ ಎಲೆಕ್ಟ್ರಾನಿಕ್ಸ್‌ (ಒಪ್ಪೋ ಮತ್ತು ವಿವೋ) ಎಂಬ 4 ಕಂಪನಿಗಳು ಜಗತ್ತಿನ ಉತ್ಪಾದನೆಯ ಶೇ.80ರಷ್ಟನ್ನು ನಿಯಂತ್ರಿಸುತ್ತಿವೆ. ನಾವು ಪರಿಣಾಮಕಾರಿಯಾಗಿ ರಫ್ತುಗಳನ್ನು ಗುರಿಯಾಗಿಸಿಕೊಳ್ಳಬೇಕಾಗಿದೆ.

ಐಫೋನ್‌ ಉತ್ಪಾದನೆಗೆ ಅವಕಾಶ

ಈ ಸಮಯದಲ್ಲಿ ಸರ್ಕಾರ ಸ್ಮಾರ್ಚ್‌ಫೋನ್‌ಗಳಲ್ಲಿ ಮೊದಲ ಪಿಎಲ್‌ಐ ಯೋಜನೆಯನ್ನು ರೂಪಿಸಿತು. ಇದರ ಉದ್ದೇಶ ಸ್ಪಷ್ಟವಾಗಿತ್ತು. ಚೀನಾ ಮತ್ತು ವಿಯೆಟ್ನಾಂಗಳಿಗೆ ಎದುರಾಗಿ ಭಾರತದ ವೆಚ್ಚ ಕೊರತೆಯನ್ನು ಸರಿದೂಗಿಸಲು ಅದರಲ್ಲೂ ರಫ್ತು ವಲಯದಲ್ಲಿ ಜಾಗತಿಕ ಮೌಲ್ಯ ಸರಪಳಿ (ಜಿವಿಸಿ)ಗಳನ್ನು ಹೆಚ್ಚು ಆಕರ್ಷಿಸುವುದಾಗಿತ್ತು. ಈ ಯೋಜನೆಗಳು ಜವಾಬ್ದಾರಿಯುತವಾಗಿರಬೇಕು ಮತ್ತು ಡಬ್ಲ್ಯುಟಿಒ ಒಪ್ಪುವಂತಿರಬೇಕು. 15 ಸಾವಿರ ರು. ಮೌಲ್ಯ ಮೇಲ್ಪಟ್ಟು ಉತ್ಪಾದನೆ ಮಾಡುವ ಕಂಪನಿಗಳಿಗೆ ಬಹುಮಾನವನ್ನು ನೀಡಲು ಈ ಪಿಎಲ್‌ಐಗಳನ್ನು ರಚಿಸಲಾಗಿದೆ. ಹಾಗೆಯೇ ಇದು ವರ್ಷದಿಂದ ವರ್ಷಕ್ಕೆ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಲಿದೆ. ಇದು ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ಇದರ 2ನೇ ವರ್ಷದ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ. ಉದಾಹರಣೆಗೆ ವಿಶ್ವದ ಅತ್ಯಂತ ವಿಸ್ತಾರವಾದ ಪೂರೈಕೆ ಜಾಲವನ್ನು ಹೊಂದಿರುವ ಆ್ಯಪಲ್‌, ಈ ವರ್ಷದ ಅಂತ್ಯದ ವೇಳೆಗೆ ಐಫೋನ್‌ ಉತ್ಪಾದನೆಯ ಶೇ.5-7ರಷ್ಟನ್ನು ಭಾರತಕ್ಕೆ ಬದಲಾಯಿಸುವ ಸಾಧ್ಯತೆ ಇದೆ. ಅವರ ವ್ಯವಸ್ಥೆ 2021ರಿಂದ ಪ್ರತ್ಯಕ್ಷವಾಗಿ ಸುಮಾರು 50 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಮಾಡಿದೆ. ಪರೋಕ್ಷವಾಗಿ ಕೊಡುಗೆ ಇನ್ನೂ ದೊಡ್ಡದಿದೆ. ಕಳೆದ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ ಅವಧಿಗೆ ಹೋಲಿಸಿದರೆ ಭಾರತದ ಮೊಬೈಲ್‌ ಫೋನ್‌ ರಫ್ತು 7 ಬಿಲಿಯನ್‌ ಡಾಲರ್‌ (57 ಸಾವಿರ ಕೋಟಿ ರು.)ನಲ್ಲಿ ಮುಕ್ತಾಯವಾಗಲಿದೆ. ಇದು ಕಳೆದ ಅವಧಿಗಿಂತ ದುಪ್ಪಟ್ಟಾಗಿರಲಿದೆ.

ಹೊಸ ವರ್ಷದಲ್ಲಿ ಹೊಸ ಗುರಿಗಳು

2023-24ರ ಆರ್ಥಿಕ ವರ್ಷಕ್ಕೆ ಗುರಿಗಳು ಸ್ಪಷ್ಟವಾಗಿದೆ. ಆದರೆ ಅದು ಸುಲಭವಾಗಿಲ್ಲ. 2024ಕ್ಕೆ ನಾವು 1 ಲಕ್ಷ ಕೋಟಿ ರು. ಮೌಲ್ಯದ ಮೊಬೈಲ್‌ ಫೋನ್‌ ರಫ್ತು ಮಾಡುವ, 75 ಸಾವಿರದಿಂದ 1 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ. ಅಲ್ಲದೇ ಭಾರತದ ರಫ್ತುಗಳಲ್ಲಿ ಮೊಬೈಲ್‌ ಫೋನ್‌ಗಳು ಟಾಪ್‌ 10ರಲ್ಲಿರುವಂತೆ ಪರಿವರ್ತಿಸಲು ಬಯಸುತ್ತೇವೆ. ಅದೇ ಸಮಯದಲ್ಲಿ ಎಲೆಕ್ಟ್ರಾನಿಕ್ಸ್‌ ಅನ್ನು ಭಾರತದ 5ನೇ ಅತಿದೊಡ್ಡ ರಫ್ತು ವಲಯವನ್ನಾಗಿ ಮಾಡಲು ನಿರ್ಧರಿಸಿದ್ದೇವೆ. ನಿಸ್ಸಂದೇಹವಾಗಿ ಇದಕ್ಕೆ ಸರ್ಕಾರ, ರಾಜ್ಯ ಸರ್ಕಾರಗಳು, ಉದ್ಯಮಗಳ ಅಪಾರ ಪ್ರಮಾಣದ ಪ್ರಯತ್ನ ಮತ್ತು ನಮ್ಮ ಅದೃಷ್ಟದ ಅಗತ್ಯವಿದೆ. ಆರ್ಥಿಕತೆ ಹಿಂಜರಿತದ ಪ್ರವೃತ್ತಿಗಳು ಜಾಗತಿಕ ವ್ಯಾಪಾರದ ಮೇಲೆ ಅತಿದೊಡ್ಡ ಪರಿಣಾಮವನ್ನು ಬೀರುತ್ತವೆ. ಪ್ರಸ್ತುತ ನಾವು ಭಾರತದಲ್ಲಿ ಐಟಿ ಹಾರ್ಡ್‌ವೇರ್‌ ಮತ್ತು ಧರಿಸಬಹುದಾದ ಹಾಗೂ ಶ್ರವಣ ಸಾಧನಗಳ ಉತ್ಪಾದನೆಗಾಗಿ ನವೀಕರಿಸಿದ ಯೋಜನೆಗಳನ್ನು ರೂಪಿಸುವತ್ತ ನೋಡುತ್ತಿದ್ದೇವೆ.

ಸರ್ಕಾರದಿಂದ ಸ್ಪರ್ಧಾತ್ಮಕ ವಾತಾವರಣ

ಎಲ್ಲರ ಕೆಲಸಗಳು ಕಡಿತಗೊಂಡಿವೆ. ರಫ್ತನ್ನು ಹೆಚ್ಚು ಮಾಡುವತ್ತ, ಸಿದ್ಧಪಡಿಸಿದ ಉತ್ಪನ್ನಗಳು ಮತ್ತು ಉತ್ಪಾದನಾ ಘಟಕಗಳನ್ನು ಬದಲಾಯಿಸುವತ್ತ, ಅದರಲ್ಲೂ ಮೂಲಭೂತವಾಗಿ ವ್ಯವಸ್ಥೆಯನ್ನು ಮತ್ತಷ್ಟುವಿಸ್ತರಿಸುವತ್ತ ಉದ್ಯಮಗಳು ಗಮನಹರಿಸಬೇಕಿದೆ. ಅವರು ಸಾಧ್ಯವಾದಷ್ಟುವೇಗವಾಗಿ ನೇಮಕ ಮಾಡಿಕೊಳ್ಳಬೇಕು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉದ್ಯಮಕ್ಕೆ ಸಾಧ್ಯವಾದಷ್ಟುಸ್ಪರ್ಧಾತ್ಮಕ ವಾತಾವರಣವನ್ನು ಒದಗಿಸಲು ನಿರ್ಧರಿಸಿದೆ. ವ್ಯಾಪಾರವನ್ನು ಸುಲಭಗೊಳಿಸುವುದು, ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಹಾಗೂ ಸುರಕ್ಷಿತ ಕೆಲಸದ ವಾತಾವರಣವನ್ನು ಸೃಷ್ಟಿಸುವುದರ ಮೇಲೆ ಇಡೀ ಸರ್ಕಾರದ ಮತ್ತು ಟೀಮ್‌ ಇಂಡಿಯಾದ ಗಮನ ಇದೆ.

ಮುಂದಿನ 2 ವರ್ಷಗಳಲ್ಲಿ ಭಾರತ ಹಿಂದೆಂದೂ ಇಲ್ಲದ ರೀತಿಯಲ್ಲಿ ಉತ್ಪಾದನೆಯಲ್ಲಿ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ನಂಬುತ್ತೇವೆ. ಎಲೆಕ್ಟ್ರಾನಿಕ್ಸ್‌ ಅದರಲ್ಲೂ ಮೊಬೈಲ್‌ ಫೋನ್‌ ರಫ್ತಿನಲ್ಲಿ ಧ್ವಜಧಾರಿಯಾಗಬಹುದು. ಭಾರತ ಯಶಸ್ಸನ್ನು ಖಾತ್ರಿಪಡಿಸಲು ನಾವು ಉದ್ಯಮಗಳ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ. ಇದು ಜೀವನದಲ್ಲಿ ಒಮ್ಮೆ ಕೈಗೊಳ್ಳಬಹುದಾದ ಪ್ರಯಾಣವಾಗಿದೆ. ಈ ವೇಳೆ ನಾವು ಉತ್ತಮ ಸಲಹೆಗಳು ಮತ್ತು ರಚನಾತ್ಮಕ ಟೀಕೆಗಳನ್ನು ಕೋರುತ್ತೇವೆ. 


ಹೊಸ ವರ್ಷದ ಶುಭಾಶಯಗಳು....

Follow Us:
Download App:
  • android
  • ios