ಅಸ್ಸಾಂನಲ್ಲಿ ಚಿರತೆಯೊಂದು ದಾರಿಯಲ್ಲಿ ಸಾಗುತ್ತಿದ್ದ ಸೈಕಲ್ ಸವಾರನ ಮೇಲೆರಗಿದ್ದು, ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಘಟನೆ ನಡೆದಿದೆ. 

ಅಸ್ಸಾಂ: ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಚಿರತೆ, ಹುಲಿ, ಆನೆಗಳು ಕಾಡಾಂಚಿನ ಗ್ರಾಮಗಳಿಗೆ ಬಂದು ಬೆಳೆ ನಾಶ ಮಾಡುವುದು, ಕುರಿ ಕೋಳಿಗಳನ್ನು ಹೊತ್ತೊಯ್ಯುವುದು ಸಾಮಾನ್ಯ ಎನಿಸಿದೆ. ಈ ಮಧ್ಯೆ ಅಸ್ಸಾಂನಲ್ಲಿ ಚಿರತೆಯೊಂದು ದಾರಿಯಲ್ಲಿ ಸಾಗುತ್ತಿದ್ದ ಸೈಕಲ್ ಸವಾರನ ಮೇಲೆರಗಿದ್ದು, ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ (Kaziranga National Park) ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ (NH) ಭಯಾನಕ ಘಟನೆ ನಡೆದಿದೆ. 

ಸೈಕಲ್ ಸವಾರ ತನ್ನ ಪಾಡಿಗೆ ತಾನು ಯಾವುದೇ ಚಿಂತೆಯಿಲ್ಲದೇ ಹಾಯಾಗಿ ಸೈಕಲ್ ತುಳಿಯುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುತ್ತಾನೆ. ಅಷ್ಟರಲ್ಲಿ ಸಮೀಪದ ಕಾಡಿನಿಂದ ಧುತ್ತನೇ ಚಿರತೆಯೊಂದು ಬಂದು ಆತನ ಮೇಲೆರಗಿದೆ. ನಿರೀಕ್ಷಿಸದೇ ಬಂದ ಅಚಾನಕ್ ದಾಳಿಯಿಂದ ಆಘಾತಕ್ಕೊಳಗಾದ ಆತ ಒಮ್ಮೆಲೆ ಸೈಕಲ್ ಸಮೇತ ಕೆಳಗೆ ಬೀಳುತ್ತಾನೆ. ಅಷ್ಟರಲ್ಲಿ ಈತನ ಹಿಂದೆಯೇ ಕೆಂಪು ಬಣ್ಣದ ಕಾರು ಬಂದಿದ್ದು, ಕಾರನ್ನು ನೋಡಿದ ಚಿರತೆ ಈತನನ್ನು ಬಿಟ್ಟೋಡಿದೆ. ಆದರೆ ಸೈಕಲ್ ಸವಾರ ಮಾತ್ರ ಒಮ್ಮೆಲೇ ಎದುರಾದ ಈ ದಾಳಿಯಿಂದ ಸಂಪೂರ್ಣ ಆಘಾತಕ್ಕೊಳಗಾಗಿದ್ದ. 

Scroll to load tweet…

ಈ ಘಟನೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲ್ದಿಬರಿ ಅನಿಮಲ್ ಕಾರಿಡಾರ್‌ನಲ್ಲಿ ಜನವರಿ 19 ರಂದು ನಡೆದಿದ್ದು, ಈಗ ವೈರಲ್ ಆಗುತ್ತಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಪ್ರಾಧಿಕಾರವು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಆದರೆ, ದಾಳಿಯಲ್ಲಿ ಸೈಕ್ಲಿಸ್ಟ್‌ಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ. 

ಆಗಾಗ ಬಾವಿಗೆ ಬಿಳೋ ಚಿರತೆಗಳು: ನಿನ್ನೆ ಮಂಚ ಕಳ್ಸಿದ್ರು ಇವತ್ತು ಏಣಿ ಇಳ್ಸಿದ್ರು

ಚಿರತೆ ಅತ್ಯಂತ ಚುರುಕು ಹಾಗೂ ಶರವೇಗದಲ್ಲಿ ಚಲಿಸುವ ಪ್ರಾಣಿಯಾಗಿದ್ದು, ಬೇಟೆ ಮೇಲೆ ಕಣ್ಣಿಟ್ಟಿದೆ ಎಂದಾದರೆ ಸಿಗುವವರೆಗೂ ಬಿಡದು ಸಾಮಾನ್ಯವಾಗಿ ಚಿರತೆಗಳು ನೆಲದ ಮೇಲೆ ಓಡಾಡುವ ಜಿಂಕೆ, ಮೊಲ, ಕಾಡೆಮ್ಮೆ ಮುಂತಾದವುಗಳನ್ನು ಬೇಟೆಯಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಚಿರತೆ ಮರದ ಮೇಲೆ ನೇತಾಡುತ್ತಿದ್ದ ಕೋತಿಯೊಂದನ್ನು ಬೇಟೆಯಾಡಿದೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ಪನ್ನಾ ಹುಲಿ ರಕ್ಷಿತಾರಣದಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದೆ. 

ಪ್ರಾಣಿಗಳ ಸಾಮ್ರಾಜ್ಯವು ಬಹಳ ಆಸಕ್ತಿದಾಯಕವಾದ ಪ್ರಪಂಚವಾಗಿದ್ದು, ಪ್ರತಿದಿನ ಒಂದೊಂದು ಅದ್ಭುತಗಳು ನಡೆಯುತ್ತಿರುತ್ತವೆ. ಪ್ರಾಣಿ ಪ್ರಪಂಚದ ಹಲವು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡಿರಬಹುದು. ಅದೇ ರೀತಿ ಈ ಭಯಾನಕ ವಿಡಿಯೋ ಈಗ ವೈರಲ್ ಆಗಿದೆ. ಮಧ್ಯಪ್ರದೇಶದ ಪನ್ನಾ ಹುಲಿ ರಕ್ಷಿತಾರಣ್ಯವೂ ಹುಲಿ, ಸೋಮಾರಿ ಕರಡಿ, ಭಾರತೀಯ ತೋಳ, ಪ್ಯಾಂಗೊಲಿನ್, ಚಿರತೆ, ಘಾರಿಯಲ್, ಮುಂತಾದ ಅನೇಕ ವನ್ಯಜೀವಿ ಪ್ರಭೇದಗಳಿಗೆ ನೆಲೆಯಾಗಿದೆ.

ಹಸಿವಿನಿಂದ ಕಂಗೆಟ್ಟ ಚಿರತೆಯೊಂದು ಮರ ಹತ್ತಿ ಕೋತಿಯನ್ನು ಕೊಂದು ಬಾಯಲ್ಲಿ ಕಚ್ಚಿ ಹಿಡಿದು ಮರದಿಂದ ಕೆಳಗೆ ಇಳಿಯುತ್ತಿರುವ ದೃಶ್ಯ ಇದಾಗಿದೆ. ಮರದಿಂದ ಇಳಿಯುವಾಗ ಚಿರತೆ ತನ್ನ ಬಾಯಿಯಲ್ಲಿ ಬೇಟೆಯನ್ನು ಬಿಗಿಯಾಗಿ ಹಿಡಿದಿರುವುದು ಕಂಡುಬಂದಿದೆ. ಪನ್ನಾ ಹುಲಿ ರಕ್ಷಿತಾರಣ್ಯದ ಅಧಿಕೃತ ಟ್ವಿಟರ್ ಖಾತೆಯಿಂದ ಈ ವೀಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿರತೆ ಬೇಟೆಯಾಡುವ ಅಪರೂಪದ ದೃಶ್ಯ ಎಂದು ಬರೆದು ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋವನ್ನು ಹುಲಿ ಸಂರಕ್ಷಣಾ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಈ ವೀಡಿಯೊವನ್ನು ಇಲ್ಲಿಯವರೆಗೆ 2700 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.