ದೆಹಲಿಯ ಕಾರ್ಡೂಮಾ ನ್ಯಾಯಾಲಯದ ಆವರಣದಲ್ಲಿ ಮಾಜಿ ಸಿಜೆಐ ಬಿಆರ್ ಗವಾಯಿ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವದೆಹಲಿ (ಡಿ.9): ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿದ್ದ ಹಿರಿಯ ವಕೀಲ ರಾಕೇಶ್ ಕಿಶೋರ್ ಅವರ ಮೇಲೆ ಹಲ್ಲೆಯಾಗಿದೆ. ಮಂಗಳವಾರ ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದೊಳಗೆ ಅವರಿಗೆ ಚಪ್ಪಲಿಯಿಂದ ಹಲ್ಲೆ ಮಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರಾಕೇಶ್ ಕಿಶೋರ್ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡುತ್ತಿರುವುದು ಕಾಣಬಹುದಾಗಿದೆ. ಅದರೊಂದಿಗೆ, "ಕೌನ್ ಹೈ ತು, ಸ್**ಲೆ? ಸನಾತನ ಧರಮ್ ಕಿ ಜೈ ಹೋ" ಎಂದು ಹೇಳುವುದನ್ನು ಕೇಳಬಹುದು. ಕಿಶೋರ್ ಜೊತೆಗಿದ್ದ ಮಹಿಳೆ, ಚಪ್ಪಲಿಯಿಂದ ಹೊಡೆಯುತ್ತಿರುವ ವ್ಯಕ್ತಿಗೆ ನಿಲ್ಲಿಸುವಂತೆ ಹೇಳುತ್ತಿರುವುದು ಕಾಣಬಹುದಾಗಿದೆ.
ವಕೀಲರ ಮೇಲಿನ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕಿಶೋರ್, "ಬಹುಶಃ 35 ಅಥವಾ 40 ವರ್ಷ ವಯಸ್ಸಿನ ಯುವ ವಕೀಲನೊಬ್ಬ ತನ್ನ ಚಪ್ಪಲಿಯಿಂದ ನನ್ನ ಮೇಲೆ ಹಲ್ಲೆ ಮಾಡಿದ. ನಂತರ ನಾನು ಅಲ್ಲಿಂದ ಹೊರಟೆ. ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿದ್ದಕ್ಕಾಗಿ ನನ್ನನ್ನು ಶಿಕ್ಷಿಸುತ್ತಿದ್ದೇನೆ ಎಂದು ಹೇಳುತ್ತಿದ್ದ. ಅದಲ್ಲದೆ, ಸಿಜೆಐ ದಲಿತು ಅನ್ನೋ ಕಾರಣಕ್ಕಾಗಿ ನಾನು ಅವರ ಮೇಲೆ ಶೂ ಎಸೆದಿದ್ದೆ ಅಂತಾ ಹೇಳುತ್ತಿದ್ದ. ಆತನ ಬಳಿಕ ನಾವೂ ಕೂಡ ಸನಾತನ ಘೋಷಣೆ ಕೂಗಿದೆವು' ಎಂದು ಹೇಳಿದ್ದಾರೆ.
ತಮ್ಮ ಮೇಲಿನ ದಾಳಿ ಬಗ್ಗೆ ಮಾಜಿ ಸಿಜೆಐ ಹೇಳಿದ್ದೇನು?
ನವೆಂಬರ್ 23 ರಂದು ಸಿಜೆಐ ಆಗಿ ಆರು ತಿಂಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಬಿಆರ್ ಗವಾಯಿ, ತಮ್ಮ ಅಧಿಕಾರಾವಧಿಯ ಅತ್ಯಂತ ನಾಟಕೀಯ ಕ್ಷಣಗಳಲ್ಲಿ ಒಂದನ್ನು ನೆನಪಿಸಿಕೊಂಡರು, ಹಿರಿಯ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಒಳಗೆ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ಘಟನೆಯ ಬಗ್ಗೆ ಮಾತನಾಡಿದರು.ತಮ್ಮ ಕೊನೆಯ ದಿನದಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಮಾಡಬೇಕಾದ ಸರಿಯಾದ ಕೆಲಸ" ಎಂದು ಆ ಘಟನೆಯನ್ನು ನಿರ್ಲಕ್ಷಿಸಲು ನಿರ್ಧರಿಸಿದೆ ಎಂದು ಹೇಳಿದರು.
ಅಕ್ಟೋಬರ್ 5 ರಂದು ಈ ಘಟನೆ ನಡೆದಿದ್ದು, 71 ವರ್ಷದ ವಕೀಲ ರಾಕೇಶ್ ಕಿಶೋರ್ ಕೋರ್ಟ್‌ನ ಒಳಗೆ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ. ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆದೊಯ್ಯುವಾಗ, ಕಿಶೋರ್ "ಭಾರತ ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ" ಎಂದು ಕೂಗಿದರು. ಮಧ್ಯಪ್ರದೇಶದಲ್ಲಿ ಹಾನಿಗೊಳಗಾದ ವಿಷ್ಣು ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ವಿಚಾರಣೆಯ ಸಮಯದಲ್ಲಿ "ಹೋಗಿ ದೇವರನ್ನೇ ಕೇಳಿ" ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ ನಂತರ ಅವರ ಮೇಳೆ ಟೀಕೆಗಳು ವ್ಯಕ್ತವಾಗಿದ್ದವು. ಅದರ ಬೆನ್ನಲ್ಲಿಯೇ ಸಿಜೆಐ ಮೇಲೆ ಈ ದಾಳಿ ನಡೆದಿತ್ತು.


