Advocate Rakesh Kishore Questions CJI Gavais Dalit Identity Post Buddhism Conversion ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ದಲಿತರೆಂಬ ಕಾರಣಕ್ಕೆ ಶೂ ಎಸೆದಿಲ್ಲ, ಬದಲಿಗೆ ಖಜುರಾಹೊ ವಿಗ್ರಹದ ತೀರ್ಪಿನಿಂದಾಗಿ ಎಂದು ವಕೀಲ ರಾಕೇಶ್ ಕಿಶೋರ್ ಹೇಳಿದ್ದಾರೆ.
ನವದೆಹಲಿ (ಅ.7): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ದಲಿತರಾಗಿರುವ ಕಾರಣ ಹಿರಿಯ ವಕೀಲ ರಾಕೇಶ್ ಕಿಶೋರ್ ಶೂ ಎಸೆದಿದ್ದಾರೆ ಎಂದು ಕೇಳಿಬಂದಿರುವ ಆರೋಪದ ಬಗ್ಗೆ ಮಾತನಾಡಿರುವ ಅವರು, ಸಿಜೆಐ ಸನಾತನ ಧರ್ಮವನ್ನು ಬಿಟ್ಟು ಬೌದ್ಧ ಧರ್ಮ ಸೇರಿದ್ದಾರೆ. ಹೀಗಿದ್ದಾಗ ಅವರು ದಲಿತರಾಗಿಯೇ ಇರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಸಿಜೆಐ ಅವರು ಖುಜರಾಹೋ ವಿಷ್ಣು ವಿಗ್ರಹದ ಕುರಿತಾಗಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಕೆಲಸ ಮಾಡಿದ್ದೇನೆ ಎಂದು ರಾಕೇಶ್ ಕಿಶೋರ್ ಹೇಳಿದ್ದಾರೆ. ಆದರೆ, ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರು ಇದನ್ನು ದಲಿತ ವ್ಯಕ್ತಿಯ ಮೇಲಿನ ದಾಳಿ ಎಂದು ಟೀಕೆ ಮಾಡಲು ಆರಂಭಿಸಿದ್ದಾರೆ.
"... ನನ್ನ ಹೆಸರು ಡಾ. ರಾಕೇಶ್ ಕಿಶೋರ್. ಯಾರಾದರೂ ನನ್ನ ಜಾತಿಯನ್ನು ಹೇಳಬಲ್ಲಿರಾ? ಬಹುಶಃ ನಾನು ಕೂಡ ದಲಿತನೇ. ಅವರು (ಸಿಜೆಐ ಗವಾಯಿ) ದಲಿತರು ಎಂಬ ಅಂಶವನ್ನು ನೀವು ಬಳಸಿಕೊಳ್ಳುತ್ತಿರುವುದು ಏಕಪಕ್ಷೀಯ. ಅವರು ದಲಿತರಲ್ಲ. ಅವರು ಮೊದಲು ಸನಾತನ ಹಿಂದೂ ಆಗಿದ್ದರು. ನಂತರ ಅವರು ತಮ್ಮ ನಂಬಿಕೆಯನ್ನು ತ್ಯಜಿಸಿ ಬೌದ್ಧಧರ್ಮವನ್ನು ಅನುಸರಿಸಿದರು. ಬೌದ್ಧಧರ್ಮವನ್ನು ಅನುಸರಿಸಿದ ನಂತರ ಹಿಂದೂ ಧರ್ಮದಿಂದ ಹೊರಬಂದಿದ್ದೇನೆ ಎಂದು ಅವರು ಭಾವಿಸುತ್ತಾರೆ. ಹೀಗಿದ್ದಾಗ ಅವರು ಇನ್ನೂ ದಲಿತರಾಗಿರುವುದು ಹೇಗೆ? ಇದು ಎಲ್ಲರ ಮನಸ್ಥಿತಿಯ ಬಗ್ಗೆ ಇರುವ ವಿಚಾರ ಎಂದಿದ್ದಾಋಏ.
ದಲಿತ ನ್ಯಾಯಾಧೀಶರ ಮೇಲೆ ದಾಳಿ ಎಂದು ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ, ಅವರು, "ಅವರು ಮೊದಲು ಸನಾತನಿಗಳು, ಆದರೆ ಅವರು ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಈಗ, ಅವರು ಹೇಗೆ ದಲಿತ ವ್ಯಕ್ತಿ? ಇದು ಅವರ ರಾಜಕೀಯ" ಎಂದಿದ್ದಾರೆ.
ಏನಿದು ಖುಜರಾಹೋ ವಿಷ್ಣು ವಿಗ್ರಹದ ವಿವಾದ
ಮಧ್ಯಪ್ರದೇಶದ ಖಜುರಾಹೊದಲ್ಲಿರುವ ಜವರಿ (ವಾಮನ) ದೇವಾಲಯದಲ್ಲಿ 7 ಅಡಿ ಎತ್ತರದ ಭಗ್ನಗೊಂಡ ವಿಷ್ಣುವಿನ ಪ್ರತಿಮೆಯನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸೆಪ್ಟೆಂಬರ್ 16 ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಅರ್ಜಿದಾರರು ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. "ಈ ನಿರ್ಧಾರವು ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಪ್ರತಿಮೆಯು ಅದರ ಮೂಲ ಸ್ಥಿತಿಯಲ್ಲಿಯೇ ಉಳಿಯುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಭಕ್ತರು ಪೂಜೆ ಮಾಡಲು ಬಯಸಿದರೆ ಇತರ ದೇವಾಲಯಗಳಿಗೆ ಹೋಗಬಹುದು" ಎಂದು ಸಿಜೆಐ ಹೇಳಿದ್ದರು.
ಮೊಘಲರ ಆಕ್ರಮಣದ ಸಮಯದಲ್ಲಿ ವಿಗ್ರಹವು ಹಾನಿಗೊಳಗಾಗಿದ್ದು, ಅಂದಿನಿಂದ ಅದು ಹಾಗೆಯೇ ಉಳಿದಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದ್ದರಿಂದ, ಭಕ್ತರ ಪೂಜೆಯ ಹಕ್ಕನ್ನು ರಕ್ಷಿಸಲು ಮತ್ತು ದೇವಾಲಯದ ಪಾವಿತ್ರ್ಯವನ್ನು ಪುನಃಸ್ಥಾಪಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದಿದ್ದರು.
ತಮ್ಮ ಹೇಳಿಕೆಯ ಬಳಿಕ ಸ್ಪಷ್ಟೀಕರಣ ನೀಡಿದ್ದ ಸಿಜೆಐ
ವಿಷ್ಣುವಿನ ವಿಗ್ರಹವನ್ನು ಬದಲಾಯಿಸುವ ಬಗ್ಗೆ ತಮ್ಮ ಹೇಳಿಕೆಗಳನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಸ್ಪಷ್ಟಪಡಿಸಿದರು. "ನನ್ನ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ನಿರೂಪಿಸಲಾಗಿದೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ" ಎಂದು ಅವರು ಹೇಳಿದರು. ನ್ಯಾಯಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್, ಸೋಶಿಯಲ್ ಮೀಡಿಯಾವನ್ನು ಸಾಮಾಜಿಕ ಮಾಧ್ಯಮ ವಿರೋಧಿ ಎಂದು ಕರೆದರು ಮತ್ತು ಆನ್‌ಲೈನ್‌ನಲ್ಲಿ ತಮ್ಮನ್ನೂ ನಕಾರಾತ್ಮಕ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಹೇಳಿದರು. ಈ ನಡುವೆ ಅರ್ಜಿದಾರರ ವಕೀಲ ಸಂಜಯ್ ನುಲಿ ಅವರು ಸಿಜೆಐ ಬಗ್ಗೆಸೋಶಿಯಲ್ ಮೀಡಿಯಾದಲ್ಲಿ ಹರಡಿರುವ ಹೇಳಿಕೆಗಳು ಸುಳ್ಳು ಎಂದು ಹೇಳಿದರು.
