Asianet Suvarna News Asianet Suvarna News

ಅನಂತ್‌ನಾಗ್‌ನಲ್ಲಿ ಲಷ್ಕರ್‌ ಭಯೋತ್ಪಾದಕ ಉಜೈರ್‌ ಖಾನ್‌ನ ಹತ್ಯೆ ಮಾಡಿದ ಭಾರತೀಯ ಸೇನೆ!

ಜಮ್ಮು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಏಳನೇ ದಿನವೂ ಎನ್‌ಕೌಂಟರ್‌ ಮುಂದುವರಿದಿದೆ. ಮಂಗಳವಾರ ಭಾರತೀಯ ಸೇನೆ ಮಹತ್ವದ ಯಶಸ್ಸು ಸಾಧಿಸಿದ್ದು, ಇಡೀ ಕೋಕರ್‌ನಾಗ್‌ ಘಟನೆಯ ನೇತೃತ್ವ ವಹಿಸಿದ್ದ ಲಷ್ಕರ್‌ ಕಮಾಂಡರ್‌ ಉಜೈರ್‌ ಖಾನ್‌ನನ್ನು ಹತ್ಯೆ ಮಾಡಲು ಯಶಸ್ವಿಯಾಗಿದೆ.
 

Lashkar e Taiba terrorist Uzair Khan killed Dead bodies of two terrorists found san
Author
First Published Sep 19, 2023, 4:02 PM IST

ನವದೆಹಲಿ (ಸೆ.19): ಅನಂತನಾಗ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಉಜೈರ್‌ ಖಾನ್‌ ಬೀದಿ ಹೆಣವಾಗಿದ್ದಾರೆ. ಉಜೈರ್‌ ಖಾನ್‌ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಮಂಗಳವಾರ ಹೇಳಿದ್ದಾರೆ. ಕೋಕರ್‌ನಾಗ್‌ನ ಕಾಡುಗಳ ನಡುವಿನಿಂದ ಉಜೈರ್‌ ಖಾನ್‌ ಶವವನ್ನು ಮಂಗಳವಾರ ಹೊರತೆಗೆಯಲಾಗಿದೆ.  ಎಡಿಜಿಪಿ ವಿಜಯ್ ಪ್ರಕಾರ, ಗದುಲ್ ಕೋಕರ್‌ನಾಗ್‌ನಲ್ಲಿ 2-3 ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಉಜೈರ್ ಹೊರತುಪಡಿಸಿ, ಮತ್ತೊಂದು ಮೃತದೇಹ ಕೂಡ ಪತ್ತೆಯಾಗಿದೆ. ಮೂರನೇ ಉಗ್ರನ ಶವ ಪತ್ತೆಯಾಗುವ ಸಾಧ್ಯತೆಯೂ ಇದೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳದ ಸಮೀಪಕ್ಕೆ ಹೋಗದಂತೆ ಪೊಲೀಸರು ಸ್ಥಳೀಯರಿಗೆ ಮನವಿ ಮಾಡಿದ್ದಾರೆ. ಸೋಮವಾರ ಮುಂಜಾನೆ, ಭದ್ರತಾ ಪಡೆಗಳು ಅರಣ್ಯದಿಂದ ಎರಡು ಶವಗಳನ್ನು ವಶಪಡಿಸಿಕೊಂಡವು. ಅವರಲ್ಲಿ ಒಬ್ಬನನ್ನು ಜವಾನ್ ಪ್ರದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಅನಂತನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನ ಮೊದಲ ದಿನವಾದ ಸೆಪ್ಟೆಂಬರ್ 13 ರಿಂದ ಪ್ರದೀಪ್ ನಾಪತ್ತೆಯಾಗಿದ್ದರು.

ಅದೇ ದಿನ, ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೌಂಚಕ್ ಮತ್ತು ಡಿಎಸ್‌ಪಿ ಹುಮಾಯೂನ್ ಭಟ್ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮರಾಗಿದ್ದರು. ಕಳೆದ ಒಂದು ವಾರದಲ್ಲಿ ಕಾಶ್ಮೀರದ ಮೂರು ಸ್ಥಳಗಳಲ್ಲಿ ಎನ್‌ಕೌಂಟರ್‌ಗಳು ನಡೆದಿವೆ. ಇದರಲ್ಲಿ 5 ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಅನಂತ್‌ನಾಗ್‌ನಲ್ಲಿ 1, ಬಾರಾಮುಲ್ಲಾದಲ್ಲಿ 3 ಮತ್ತು ರಾಜೌರಿಯಲ್ಲಿ 2 ಅಂದರೆ ಒಟ್ಟು 6 ಭಯೋತ್ಪಾದಕರು ಹತರಾಗಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಕಾಶ್ಮೀರ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಇದುವರೆಗಿನ ಸುದೀರ್ಘ ಕಾರ್ಯಾಚರಣೆ ಇದಾಗಿದೆ. ಅದೇ ಸಮಯದಲ್ಲಿ, ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮೂರನೇ ಸುದೀರ್ಘ ಎನ್‌ಕೌಂಟರ್ ಆಗಿದೆ. ಸೆಪ್ಟೆಂಬರ್ 13 ರಂದು ಕಾರ್ಯಾಚರಣೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ 100 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ.

ಆದಷ್ಟು ಬೇಗ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲು ಅನಂತನಾಗ್‌ನಲ್ಲಿ ಇನ್ನೂ 10 ಪ್ಯಾರಾ ಕಮಾಂಡೋಗಳು ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಎಡಿಜಿಪಿ ವಿಜಯ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಮಂಗಳವಾರ ಗದುಲ್ ಎನ್‌ಕೌಂಟರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸಾವಿಗೂ ಮುನ್ನ ಕೊನೆಯದಾಗಿ ಕಂದನ ನೋಡಲು ವಿಡಿಯೋ ಕಾಲ್ ಮಾಡಿದ್ದ ಹುತಾತ್ಮ ಹುಮಾಯುನ್!

ಸೋಮವಾರ, ಅನಂತನಾಗ್‌ನಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ, ಭಯೋತ್ಪಾದಕರು ಶ್ರೀನಗರದಲ್ಲಿ ಸಿಆರ್‌ಪಿಎಫ್ ವಾಹನವನ್ನು ಗುರಿಯಾಗಿಸಿಕೊಂಡಿದ್ದರು. ಸಿಆರ್‌ಪಿಎಫ್ ಬುಲೆಟ್ ಪ್ರೂಫ್ ವಾಹನದ ಮೇಲೆ ಪಿಸ್ತೂಲ್ ಹಿಡಿದ ಭಯೋತ್ಪಾದಕ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಶ್ರೀನಗರ ಪೊಲೀಸರು ತಿಳಿಸಿದ್ದಾರೆ. ಆದರೆ, ಶ್ರೀನಗರ ಜಿಲ್ಲೆಯ ಖನ್ಯಾರ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ದಾಳಿಯನ್ನು ವಿಫಲಗೊಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಿಆರ್‌ಪಿಎಫ್ ವಾಹನದತ್ತ ಗುಂಡು ಹಾರಿಸಿದ ನಂತರ ಭಯೋತ್ಪಾದಕ ಸ್ಥಳದಿಂದ ಪರಾರಿಯಾಗಿದ್ದಾನೆ.

 

ಬೆಟ್ಟದ ಮೇಲೆ ಹೇಡಿಗಳಂತೆ ಅಡಿಗಿ ಕೂತ ಉಗ್ರರು, ಮತ್ತೊಬ್ಬ ಸೈನಿಕ ಹುತಾತ್ಮ!

ಸೋಮವಾರ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಮೂವರು ಶಂಕಿತ ಭಯೋತ್ಪಾದಕರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಬಂಧಿಸಲಾಗಿದೆ. ಅವರನ್ನು ತೌಸಿಫ್-ಉಲ್-ನಬಿ, ಜಹೂರ್-ಉಲ್-ಹಸನ್ ಮತ್ತು ರೆಯಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಮೂವರನ್ನೂ ಜೈಲಿಗೆ ಕಳುಹಿಸಲಾಗಿದೆ.

Follow Us:
Download App:
  • android
  • ios