ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಕೊಕಾರ್‌ನಾಗ್‌ನಲ್ಲಿ ಸೇನೆ ಹಾಗೂ ಭಯೋತ್ಪಾದಕರ ನಡುವಿನ ಎನ್‌ಕೌಂಟರ್‌ ಮುಂದುವರಿದಿದೆ. ಬೆಟ್ಟದ ಮೇಲೆ ಕಾಡಿನಲ್ಲಿ ಅಡಗಿ ಕುಳಿತ ಭಯೋತ್ಪಾದಕರಿಗಾಗಿ ಸೇನೆ, ಡ್ರೋನ್‌ ಹಾಗೂ ರಾಕೆಟ್‌ ಲಾಂಚರ್‌ಗಳನ್ನು ಬಳಸಿಕೊಂಡಿದೆ.

ನವದೆಹಲಿ (ಸೆ.15): ಕಾಶ್ಮೀರದ ಅನಂತನಾಗ್‌ನ ಗದುಲ್ ಕೋಕರ್‌ನಾಗ್‌ನಲ್ಲಿ ಶುಕ್ರವಾರ ನಾಲ್ಕನೇ ದಿನವೂ ಭಯೋತ್ಪಾದಕರ ಎನ್‌ಕೌಂಟರ್ ಮುಂದುವರಿದಿದೆ. ಬುಧವಾರ ಭಯೋತ್ಪಾದಕರ ಗುಂಡಗೆ ಗಾಯಗೊಂಡಿದ್ದ ಯೋಧ ಶುಕ್ರವಾರ ಮೃತಪಟ್ಟಿದ್ದಾರೆ. ಅದರೊಂದಿಗೆ ಇಲ್ಲಿಯವರೆಗಿನ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನಾಪಡೆಗಳ ನಾಲ್ವರು ಸೈನಿಕರು ಸಾವು ಕಂಡಿದ್ದಾರೆ. ಭಯೋತ್ಪಾದಕರು ಅಡಗಿರಬಹುದೆಂದು ಶಂಕಿಸಲಾಗಿರುವ ಸ್ಥಳದಲ್ಲಿ ಭದ್ರತಾ ಪಡೆಗಳು ವಿಪರೀತವಾಗಿ ಗುಂಡಿನ ದಾಳಿ ನಡೆಸುತ್ತಿವೆ. ರಾಜೌರಿಯವರೆಗೂ ಹರಡಿರುವ ಪೀರ್ ಪಂಜಾಲ್‌ನ ದಟ್ಟ ಅರಣ್ಯದಲ್ಲಿ ಎರಡರಿಂದ ಮೂವರು ಭಯೋತ್ಪಾದಕರು ಅಡಗಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಲಷ್ಕರ್-ಎ-ತೊಯ್ಬಾ ಕಮಾಂಡರ್ ಉಜಿರ್ ಖಾನ್ ಆಗಿರಬಹುದು ಎಂದು ಸೇನಾ ಮೂಲಗಳು ತಿಳಿಸಿವೆ. ಬುಧವಾರ ನಡೆದ ಈ ಭಯೋತ್ಪಾದಕರ ದಾಳಿಯಲ್ಲಿ ಸೇನೆಯ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೌಂಚಕ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಡಿಎಸ್‌ಪಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದರು. ಈ ವೇಳೆ ಗಾಯಗೊಂಡಿದ್ದ ಇನ್ನೊಬ್ಬ ಸೈನಿಕ ಶುಕ್ರವಾರ ಹುತಾತ್ಮರಾಗಿದ್ದಾರೆ.

ಬೆಟ್ಟದ ಮೇಲೆ ಕಾಡಿನಲ್ಲಿ ಅಡಗಿ ಕುಳಿತು ದಾಳಿ ಮಾಡುತ್ತಿರುವ ಭಯೋತ್ಪಾದಕರನ್ನು ಹತ್ತಿಕ್ಕಲು, ಸೇನಾ ಕಮಾಂಡೋಗಳು, ಸ್ನಿಫರ್ ಡಾಗ್‌ಗಳು, ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು ಉಗ್ರರಿಗಾಗಿ ಶೋಧ ನಡೆಸುತ್ತಿವೆ. ರಾಕೆಟ್ ಲಾಂಚರ್ ಕೂಡ ಬಳಸಲಾಗುತ್ತಿದೆ. 4 ಕಿಮೀ ವ್ಯಾಪ್ತಿಯಲ್ಲಿ ಭಯೋತ್ಪಾದಕರು ಸುತ್ತುವರಿದಿರಬಹುದು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಯಾವಾಗ ಬೇಕಾದರೂ ಇವರ ಹೆಣ ಬೀಳಬಹುದು. ಡ್ರೋನ್‌ಗಳ ಮೂಲಕ ಬಾಂಬ್ ದಾಳಿ ನಡೆಸಲಾಗುತ್ತಿದೆ. ಮಂಗಳವಾರ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದಾರೆ.

ಕರ್ನಲ್ ಮನ್‌ಪ್ರೀತ್ ಮತ್ತು ಮೇಜರ್ ಆಶಿಶ್ ಅವರ ಅಂತಿಮ ವಿಧಿಗಳನ್ನು ಶುಕ್ರವಾರ ನಡೆಸಲಾಗಿದೆ. ಪಾಣಿಪತ್‌ನ ಮೇಜರ್ ಆಶಿಶ್ ಧೌಂಚಕ್ ಅವರ ಪಾರ್ಥಿವ ಶರೀರವನ್ನು ಅವರ ಸ್ಥಳೀಯ ಗ್ರಾಮ ಬಿಂಜೌಲ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಅವರ ಅಂತಿಮ ಸಂಸ್ಕಾರವನ್ನು ಮಾಡಲಾಯಿತು. ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಹುತಾತ್ಮ ಡಿಎಸ್‌ಪಿ ಹುಮಾಯೂನ್ ಭಟ್ ಅವರ ಅಂತ್ಯಕ್ರಿಯೆಯನ್ನು ಗುರುವಾರ ಅವರ ಹುಟ್ಟೂರು ಬುದ್ಗಾಮ್‌ನಲ್ಲಿ ನಡೆಸಲಾಯಿತು.

ಗುಂಡು ಬಿದ್ದ ತಕ್ಷಣ ಪತ್ನಿಗೆ ವಿಡಿಯೋ ಕಾಲ್‌ ಮಾಡಿದ್ದ ಹುಮಾಯೂನ್‌: ಇನ್ನು ಬುಧವಾರ ಸಾವು ಕಂಡಿದ್ದ ಜಮ್ಮು ಕಾಶ್ಮೀರ ಪೊಲೀಸ್‌ನ ಡಿವೈಎಸ್‌ಪಿ ಹುಮಾಯೂನ್‌ ಭಟ್‌, ಭಯೋತ್ಪಾದಕದಿಂದ ಗುಂಡು ಎದುರಿಸಿದ ಬಳಿಕ ತಕ್ಷಣವೇ ಪತ್ನಿ ಫಾತಿಮಾ ಅವರಿಗೆ ವಿಡಿಯೋ ಕಾಲ್‌ ಮಾಡಿದ್ದರು. ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದ ಅವರು, ನನಗೆ ಗುಂಡು ಬಿದ್ದಿದೆ. ನಾನು ಇನ್ನು ಬದುಕುವುದು ಅನುಮಾನ ಎನ್ನುವಂಥೆ ಕಾಣುತ್ತಿದೆ. ಮಗನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಅನಂತ್‌ನಾಗ್‌ ಎನ್‌ಕೌಂಟರ್‌, ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ವೀರಮರಣ

ವಿಡಿಯೋ ಕಾಲ್‌ ಮುಗಿದ ಬೆನ್ನಲ್ಲಿಯೇ ಹುಮಾಯೂನ್‌ ಪ್ರಜ್ಞೆ ತಪ್ಪಿದ್ದಾರೆ. ಅವರ ಹೊಟ್ಟೆಗೆ ಗುಂಡು ತಗುಲಿತ್ತು. ಹುಮಾಯೂನ್‌ ಇದ್ಧ ಸ್ಥಳವನ್ನು ಪತ್ತೆಹಚ್ಚಲು ಹೆಲಿಕಾಪ್ಟರ್‌ಅನ್ನು ಬಳಸಿಕೊಳ್ಳಲಾಗಿತ್ತು. ಹಾಗಾಗಿ ಅವರ ದೇಹ ಪತ್ತೆ ಹಚ್ಚಲು ಸಮಯ ಹಿಡಿಯತು ಎಂದು ಹುಮಾಯೂನ್‌ ಅವರ ಅತ್ತೆ ಸಯ್ಯದ್‌ ನುಸ್ರತ್‌ ಹೇಳಿದ್ದಾರೆ. ಅವರ ದೇಹ ಪತ್ತೆಯಾದ ಬಳಿಕ ತಕ್ಷಣವೇ ಶ್ರೀನಗರದ ಸೇನಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಪತ್ನಿ ಹಾಗೂ 29 ದಿನದ ಮಗುವನ್ನು ನೋಡಿ ಹುಮಾಯೂನ್‌ ಸಾವು ಕಂಡಿದ್ದಾರೆ. ಸೆಪ್ಟೆಂಬರ್ 27 ರಂದು, ಹುಮಾಯೂನ್-ಫಾತಿಮಾ ಅವರ ಮದುವೆಯ ಒಂದು ವರ್ಷ ಪೂರ್ಣಗೊಳ್ಳಲಿದೆ.ಅವರ ತಂದೆ ಕೂಡ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನಲ್ಲಿ ಐಜಿ ಆಗಿದ್ದಾರೆ.

Video: ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ 6 ವರ್ಷದ ಪುತ್ರನಿಂದ ತಂದೆಗೆ ಕೊನೆ ಸೆಲ್ಯೂಟ್‌, ನೋಡಿ ಕಣ್ಣೀರಿಟ್ಟ ಜನ!