ಲ್ಯಾಪ್‌ಟಾಪ್ ಬ್ಯಾಟರಿ ಸ್ಫೋಟಗೊಂಡು 20 ವರ್ಷದ ಯುವಕ ಸಾವು, ಸಹೋದರನಿಗೆ ಗಾಯ, ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟರೆ ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ದೆಹಲಿ (ಡಿ.26) ಡಿಜಿಟಲ್ ಯುಗದಲ್ಲಿ ಬಹುತೇಕರು ಲ್ಯಾಪ್‌ಟಾಪ್ ಬಳಸುತ್ತಾರೆ. ಶಾಲಾ ಮಕ್ಕಳಿಂದ ಹಿಡಿದು ವೃತ್ತಿಪರರು ಸೇರಿದಂತೆ ಹಲವರು ಲ್ಯಾಪ್‌ಟಾಪ್ ಬಳಕೆ ಮಾಡುತ್ತಾರೆ. ಇದೀಗ ಇದೇ ಲ್ಯಾಪ್‌ಟಾಪ್ ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಯವಕನೋರ್ವ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. 20 ವರ್ಷದ ಜುನೈದ್ ಸ್ಥಳದಲ್ಲೆ, ಸಹೋದರ ಸಮೀರ್ ಗಾಯಗೊಂಡಿದ್ದಾರೆ. ಸಮೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದಿಢೀರ್ ಕಾಣಿಸಿಕೊಂಡ ಬೆಂಕಿ
ಜುನೈದ್ ಹಾಗೂ ಸಮೀರ್ ಸಹೋದರರು ದೆಹಲಿಯ ಮುಸ್ತಾಫಾಬಾದ್ ವಲಯದಲ್ಲಿ ಲ್ಯಾಪ್‌ಟಾಪ್ ಶಾಪ್ ಇಟ್ಟಿದ್ದಾರೆ. ಲ್ಯಾಪ್‌ಟಾಪ್ ಸರ್ವೀಸ್ ಸೆಂಟರ್ ಮೂಲಕ ರಿಪೇರಿ ಸೇರಿದಂತೆ ಹಾರ್ಡ್‌ವೇರ್ ಕೆಲಸಗಳನ್ನು ಮಾಡುತ್ತಾರೆ. ಈ ಪೈಕಿ ಲ್ಯಾಪ್‌ಟಾಪ್ ಬ್ಯಾಟರಿ ಸಮಸ್ಯೆ ಎಂದು ಬಂದಿದ್ದ ಲ್ಯಾಪ್‌ಟಾಪ್ ಸರ್ವೀಸ್ ಮಾಡುತ್ತಿರುವಾಗ ಈ ಘಟನೆ ನಡೆದಿದೆ. ಲ್ಯಾಪ್‌ಟಾಪ್ ಬ್ಯಾಟರಿ ನಿಲ್ಲುತ್ತಿಲ್ಲ, ಬೇಗ ಬಿಸಿಯಾಗುತ್ತಿದೆ ಎಂಬ ದೂರಿನಲ್ಲಿ ಗ್ರಾಹಕರು ಲ್ಯಾಪ್‌ಟಾಪ್ ಸರ್ವೀಸ್ ಮಾಡಲು ನೀಡಿದ್ದರು. ಈ ಲ್ಯಾಪ್‌ಟಾಪ್ ಬ್ಯಾಟರಿ ಸರ್ವೀಸ್ ಮಾಡುತ್ತಿದ್ದ ವೇಳೆ ಅವಘಡ ನಡೆದಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ
ನಾಲ್ಕು ಮಹಡಿಯ ಕಟ್ಟಡದ ಕೆಳಮಹಡಿಯಲ್ಲಿರುವ ಸರ್ವೀಸ್ ಸೆಂಟರ್‌ನಲ್ಲಿ ಇಬ್ಬರು ಸಹೋದರರು ಸರ್ವೀಸ್ ಸೆಂಟರ್ ನಡೆಸುತ್ತಿದ್ದರು. ಲ್ಯಾಪ್‌ಟಾಪ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ತೀವ್ರಗಾಯಗೊಂಡ ಕಾರಣ ಇಬ್ಬರಿಗೂ ಸ್ಥಳದಿಂದ ಹೊರಬರಲು ಸಾಧ್ಯವಾಗಲಿಲ್ಲ. ಈ ಸ್ಫೋಟದಿಂದ ಸರ್ವೀಸ್ ಸೆಂಟರ್‌ನಲ್ಲಿದ್ದ ಇತರ ಲ್ಯಾಪ್‌ಟಾಪ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಿಗೂ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳಿ ಬೆಂಕಿ ನಂದಿಸಿದೆ. ಇದೇ ವೇಳೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೊರತಂದು ಆಸ್ಪತ್ರೆ ದಾಖಲಿಸಿದ್ದಾರೆ. ಈ ವೇಳೆ ಜುನೈದ್ ಸ್ಥಳದಲ್ಲೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಸಹೋದರ ಸಮೀರ್ ಗಾಯಗೊಂಡಿದ್ದಾರೆ ಜಿಟಿಬಿ ಆಸ್ಪತ್ರೆಯಲ್ಲಿ ಸಮೀರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್ ಅಡಿಯಲ್ಲಿ 106(1), 287 ಹಾಗೂ 324(4)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಲ್ಯಾಪ್‌ಟಾಪ್ ಬ್ಯಾಟರಿ ಸ್ಫೋಟಗೊಳ್ಳುವುದು ವಿರಳ. ಆದರೆ ಬ್ಯಾಟರಿಯಲ್ಲಿ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಬದಲಿಸಬೇಕು ಅಥವಾ ಸರ್ವೀಸ್ ಮಾಡಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಸಮಸ್ಯೆ ಕಂಡು ಬಂದರೆ ಸರಿಪಡಿಸಿ ಬಳಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.


