ಕೊಲ್ಲಂನಲ್ಲಿ ಶಾಲಾ ಶೆಡ್ ಮೇಲೆ ಚಪ್ಪಲಿ ತೆಗೆದುಕೊಳ್ಳಲು ಹೋದ ವಿದ್ಯಾರ್ಥಿಗೆ ವಿದ್ಯುತ್ ಶಾಕ್ ತಗುಲಿ ಸಾವು. ತ್ರೀ ಫೇಸ್ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ. ಶಿಕ್ಷಣ ಸಚಿವರಿಂದ ತನಿಖೆಗೆ ಆದೇಶ.

ತಿರುವನಂತಪುರ: ಶಾಲೆಯಲ್ಲಿ ವಿದ್ಯುತ್ ಶಾಕ್ ತಗುಲಿದ ಪರಿಣಾಮ 13 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಕೇರಳದ ಕೊಲ್ಲಂ ಜಿಲ್ಲೆಯ ತೆವಳಕ್ಕರ ಬಾಲಕರ ಶಾಲೆಯಲ್ಲಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಮೃತ ವಿದ್ಯಾರ್ಥಿ ಮಿಥುನ್, 8ನೇ ತರಗತಿಯಲ್ಲಿ ಓದುತ್ತಿದ್ದನು. ಶಾಲೆಯ ಪಕ್ಕದಲ್ಲಿ ಸೈಕಲ್ ನಿಲ್ಲಿಸಲು ಶೆಡ್ ವ್ಯವಸ್ಥೆ ಮಾಡಲಾಗಿದೆ. ಈ ಶೆಡ್ ಮೇಲೆ ಮಿಥುಲ್ ಚಪ್ಪಲಿ ಬಿದ್ದಿತ್ತು. ಈ ಚಪ್ಪಲಿ ತೆಗೆದುಕೊಳ್ಳಲು ಮಿಥುನ್ ಶೆಡ್ ಮೇಲೆ ಏರಿದ್ದನು.

ಈ ವೇಳೆ ತ್ರೀ ಫೇಸ್ ವಿದ್ಯುತ್ ತಂತಿ ತಗುಲಿದೆ. ಕೂಡಲೇ ಶಾಲಾ ಸಿಬ್ಬಂದಿ ಮತ್ತು ಸಹಪಾಠಿಗಳು ಮಿಥುನ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಇತ್ತ ಆಸ್ಪತ್ರೆ ಮುಂದೆ ಮಿಥುನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಲೆಗೆ ರಜೆ ನೀಡಲಾಗಿದೆ ಎಂದು ವರದಿಯಾಗಿದೆ. ಆಸ್ಪತ್ರೆ ಆವರದಲ್ಲಿ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಸಹ ಸೇರಿದ್ದಾರೆ.

ಶಿಕ್ಷಣ ಸಚಿವರಿಂದ ತನಿಖೆಗೆ ಆದೇಶ

ಕೊಲ್ಲಂ ತೆವಳಕ್ಕರ ಬಾಲಕರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಘಟನೆಯ ತನಿಖೆಗೆ ಆದೇಶ ನೀಡಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಘಟನೆ ತೀವ್ರ ದುಃಖದಾಯಕ. ತನಿಖೆ ನಡೆಸಿ ತುರ್ತು ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಸೂಚಿಸಲಾಗಿದೆ. ಕೊಲ್ಲಂ ಜಿಲ್ಲಾ ಉನ್ನತ ಶಿಕ್ಷಣಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕೊಚ್ಚಿಯಲ್ಲಿ ಅಂಗಡಿಗೆ ನುಗಿದ್ದ ಕರ್ನಾಟಕ ಸಾರಿಗೆ ಬಸ್

ಕೊಚ್ಚಿಯ ಆಲುವದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಿಯಾಡ್ ಸಿಗ್ನಲ್ ಬಳಿ ನಿಯಂತ್ರಣ ತಪ್ಪಿದ ಕರ್ನಾಟಕ ಸಾರಿಗೆ ಬಸ್ ಒಂದು ಅಂಗಡಿಗೆ ನುಗ್ಗಿದೆ. ರಸ್ತೆ ಬದಿಯ ಟೀ ಅಂಗಡಿಗೆ ಬಸ್ ನುಗ್ಗಿದ್ದು, ಅದೃಷ್ಟವಶಾತ್ ಅಂಗಡಿಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಎರ್ಣಾಕುಲಂ ಕಡೆಗೆ ಹೋಗುತ್ತಿದ್ದ ಕರ್ನಾಟಕ ಸಾರಿಗೆ ಬಸ್ ಇದಾಗಿದೆ.

ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗೋದನ್ನು ತಪ್ಪಿಸಲು ಹೋಗಿದ್ದ ಸಂದರ್ಭದಲ್ಲಿ ಬಸ್ ಟೀ ಅಂಗಡಿಗೆ ಡಿಕ್ಕಿ ಹೊಡೆದು ನಿಂತಿದೆ. ಈ ಅಪಘಾತದಿಂದ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಬಸ್ ತೆರವುಗೊಳಿಸಿ, ಹೆದ್ದಾರಿಯಲ್ಲಿ ಉಂಟಾಗಿದ್ದ ಟ್ರಾಫಿಕ್ ತಿಳಿಗೊಳಿಸಿದ್ದಾರೆ.

ಅಂಗಡಿಗೆ ನುಗ್ಗಿದ ಕೋಳಿ ವ್ಯಾನ್

ಮಹೀಂದ್ರ ಪಿಕಪ್ ವ್ಯಾನ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಪುನಲೂರ್-ಮೂವಾಟುಪುಳ ಸಂಸ್ಥಾನ ಹೆದ್ದಾರಿಯಲ್ಲಿ ಕೋನ್ನಿ ನೆಡುಮನ್ಕಾವಿಯಲ್ಲಿ ಪಿಕಪ್ ವ್ಯಾನ್ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದೆ. ಅಪಘಾತದಲ್ಲಿ ಪಿಕಪ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಇಂದು ಬೆಳಿಗ್ಗೆ ಆರೂವರೆಗೆ ಈ ಘಟನೆ ನಡೆದಿದೆ.

ಕೋನ್ನಿ ಭಾಗದಿಂದ ಕಲಂಜೂರ್ ಗೆ ಕೋಳಿಗಳನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್ ಅಪಘಾತಕ್ಕೀಡಾಗಿದೆ. ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯದಿರಲು ಪಿಕಪ್ ಚಾಲಕ ವಾಹನವನ್ನು ತಿರುಗಿಸಿದಾಗ ನಿಯಂತ್ರಣ ತಪ್ಪಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಈ ಸಮಯದಲ್ಲಿ ಅಂಗಡಿ ತೆರೆದಿರಲಿಲ್ಲ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಅಂಗಡಿಗೆ ನುಗ್ಗಿದ ಪಿಕಪ್ ವ್ಯಾನ್ ನ ಮುಂಭಾಗ ಜಖಂಗೊಂಡಿದೆ. ಮತ್ತೊಂದು ವಾಹನದಲ್ಲಿ ಕೋಳಿ ಮತ್ತು ಪಂಜರಗಳನ್ನು ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಯಾರಿಗೆ ಎಷ್ಟು ಋಣವೋ: ಊಟಕ್ಕೆಂದು ಕೂತು ಬುತ್ತಿ ಬಿಚ್ಚಿದ್ದಷ್ಟೇ: ಪ್ರಜ್ಞೆ ಕಳೆದುಕೊಂಡು ಬಾಲಕಿ ಸಾವು

YouTube video player