ಕೋಲ್ಕತ್ತಾದ ಚೋರ್ಬಗನ್ ದುರ್ಗಾ ಪೂಜಾ ಮಂಟಪದಲ್ಲಿ ಅತಿಯಾದ ಜನಸಂದಣಿಯಿಂದಾಗಿ ದೊಡ್ಡ ಅಪಘಾತ ಸಂಭವಿಸಿದ್ದು, 14 ಭಕ್ತರು ಗಾಯಗೊಂಡಿದ್ದಾರೆ. ಕಿರಿದಾದ ಪ್ರವೇಶದ್ವಾರದಿಂದ ಉಂಟಾದ ನೂಕುನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳಿಲ್ಲದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾ ಸಪ್ತಮಿಯ ಸಂಭ್ರಮದ ನಡುವೆ, ಕೋಲ್ಕತ್ತಾದ ಪ್ರಸಿದ್ಧ ಚೋರ್ಬಗನ್ ನಲ್ಲಿನ ದುರ್ಗಾ ಪೂಜೆಯಲ್ಲಿ ಶನಿವಾರ ದೊಡ್ಡ ಅಪಘಡ ಸಂಭವಿಸಿದೆ. ಅತಿಯಾದ ಜನಸಂದಣಿ ಒತ್ತಡದಿಂದಾಗಿ ಭಕ್ತಾದಿಗಳು ಗಾಯಗೊಂಡಿದ್ದಾರೆ. ಅಲ್ಲದೇ ಒಂದು ಹಂತದಲ್ಲಿ ಅವರನ್ನು ಬಹುತೇಕ ತುಳಿದುಹೋಗುವ ಪರಿಸ್ಥಿತಿ ಇತ್ತು. ಜನಸಂದಣಿಯಿಂದ ಅನೇಕ ಭಕ್ತರು ಅಸ್ವಸ್ಥರಾಗಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಮೂಲಗಳ ಪ್ರಕಾರ, ಈ ಅವಘಡದಲ್ಲಿ ಇದುವರೆಗೆ ಒಟ್ಟು 14 ಜನರನ್ನು ಚಿಕಿತ್ಸೆಗಾಗಿ ಕಲ್ಕತ್ತಾ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಕರೆತರಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ, ಅವರಲ್ಲಿ 6 ಜನರ ದೈಹಿಕ ಸ್ಥಿತಿ ತುಂಬಾ ಗಂಭೀರವಾಗಿದೆ ಎನ್ನಲಾಗಿದೆ.
ಭಕ್ತರ ದೂರು ಏನು?
ಶುಕ್ರವಾರದಿಂದ ಪ್ರವೇಶ ಕಿರಿದಾಗಿತ್ತು ಎಂದು ಸ್ಥಳೀಯರು ಮತ್ತು ಭಕ್ತರು ದೂರಿದ್ದಾರೆ. ಚೋರ್ಬಗನ್ ಮಂಟಪದ ಪ್ರವೇಶದ್ವಾರವು ಸಾಕಷ್ಟು ಕಿರಿದಾಗಿದ್ದರಿಂದ, ಜನರ ಹಠಾತ್ ಜನಸಂಣಿ, ಗಂಭೀರ ಸಂಚಾರ ದಟ್ಟಣೆ ಉಂಟುಮಾಡಿ ಈ ದುರಂತಕ್ಕೆ ಕಾರಣವಾಗಿದೆ. ಇದರಿಂದಾಗಿ, ಕ್ಷಣಾರ್ಧದಲ್ಲಿ ಜನದಟ್ಟಣೆ ಉಂಟಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ, ಮಂಟಪದ ಎಲ್ಲಾ ಲೈಟ್ಗಳನ್ನು ತಕ್ಷಣವೇ ಆಫ್ ಮಾಡಲಾಗಿದೆ. ಅಲ್ಲದೇ ಪ್ರವೇಶದ್ವಾರವನ್ನು ತಾತ್ಕಾಲಿಕ ಬಂದ್ ಮಾಡಲಾಗಿದೆ.
ಪೊಲೀಸರ ಹರಸಾಹಸ!
ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಜನದಟ್ಟಣೆ ಚದುರಿಸಲು ಮತ್ತು ಭದ್ರತೆಯನ್ನು ಪುನಃಸ್ಥಾಪಿಸಲು ಹರಸಾಹಸ ಪಡಬೇಕಾಯಿತು. ಹಬ್ಬದ ದಿನಗಳಲ್ಲಿ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆಯಿದ್ದರೂ, ಮಂಟಪದ ನಿರ್ವಹಣಾ ಮಂಡಳಿಯು ಸೂಕ್ತ ತುರ್ತು ನಿರ್ಗಮನ ಮಾರ್ಗಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


