ವಾವಾ ಸುರೇಶ್ ಆರೋಗ್ಯದಲ್ಲಿ ಚೇತರಿಕೆ ಮರಳಿದ ಮಾತು, ಪ್ರಜ್ಞೆ ಜನವರಿ 31ರಂದು ಇವರಿಗೆ ಹಾವು ಕಡಿದಿತ್ತು
ಕೇರಳ(ಫೆ.4): ಕೇರಳದ ಸ್ನೇಕ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಹಾವು ರಕ್ಷಕ ವಾವಾ ಸುರೇಶ್ (Vava Suresh) ಚೇತರಿಸಿಕೊಂಡಿದ್ದು ಅವರಿಗೆ ಪ್ರಜ್ಞೆ ಮರಳಿದೆ. ಅವರು ಚೆನ್ನಾಗಿ ಮಾತನಾಡುತ್ತಿದ್ದಾರೆ. ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ವಾರ್ಡ್‌ಗೆ ಶಿಫ್ಟ್ ಮಾಡಲಾಗುವುದು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.
ಇವರಿಗೆ ಹಾವು ಹಿಡಿಯುವ ವೇಳೆ ನಾಗರ ಹಾವು ಕಚ್ಚಿದ ಬಳಿಕ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಈಗ ಇವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯು ಇವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸುರೇಶ್ ಅವರು ಚೇತರಿಸಿಕೊಳ್ಳುತ್ತಿದ್ದು ಅವರಿಗೆ ಪ್ರಜ್ಞೆ ಮರಳಿ ಬಂದಿದೆ. ಇವರ ಮೆದುಳು ಸಹಜ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದೆ. ಅವರು ಚೆನ್ನಾಗಿ ಉಸಿರಾಡುತ್ತಿದ್ದಾರೆ.ಅವರಿಗೆ ಅಳವಡಿಸಿದ ಕೃತಕ ಉಸಿರಾಟ ಯಂತ್ರವನ್ನು ಗುರುವಾರವೇ ತೆಗೆಯಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ ಅವರನ್ನು ಶೀಘ್ರದಲ್ಲೇ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡಲಾಗುವುದು ಎಂದು ಅವರ ಹೆಲ್ತ್ ಬುಲೆಟಿನ್ ತಿಳಿಸಿದೆ.
ಉರಗರಕ್ಷಕ ವಾವಾ ಸುರೇಶ್‌ಗೆ ಕಚ್ಚಿದ ನಾಗರಹಾವು... ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಕೇರಳದಲ್ಲಿ ವಾವಾ ಸುರೇಶ್ ಅವರು ಮನೆ ಮಾತಾಗಿದ್ದರು. ಇದುವರೆಗೆ ಅವರು 50,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು. ಅಲ್ಲದೇ ಇವರ ಸಾಧನೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಹಾಗೂ ಅನಿಮಲ್ ಪ್ಲಾನೆಟ್ ಚಾನೆಲ್‌ನಲ್ಲಿಯೂ ಪ್ರಸಾರವಾಗಿತ್ತು. ಸಾಮಾನ್ಯವಾಗಿ ಸ್ನೇಕ್ ಮ್ಯಾನ್ ಅಫ್ ಕೇರಳ ಎಂದು ಕರೆಯಲ್ಪಡುವ ಸುರೇಶ್ ಇದುವರೆಗೆ 190 ನಾಗರಹಾವುಗಳನ್ನು ರಕ್ಷಣೆ ಮಾಡಿದ್ದರು.
48 ವರ್ಷದ ಇವರಿಗೆ ಕೇರಳದ ಕೊಟ್ಟಾಯಂನಲ್ಲಿ ಜನವರಿ 31ರಂದು ಮಾನವ ವಾಸಸ್ಥಳಕ್ಕೆ ಬಂದಿದ್ದ ನಾಗರಹಾವನ್ನು ಹಿಡಿಯುವ ವೇಳೆ ಅದು ಇವರ ತೊಡೆಗೆ ಕಚ್ಚಿತ್ತು. ಕೂಡಲೇ ಸುರೇಶ್ ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾವಾ ಸುರೇಶ್‌ಗೆ ಹಾವು ಕಡಿದಿರುವುದು ಇದೇ ಮೊದಲಲ್ಲ. ಆದರೆ ಅವರು ಹಾವಿನ ರಕ್ಷಣೆ ಮಾಡುವ ಕಾಯಕ ನಿಲ್ಲಿಸಿರಲಿಲ್ಲ. ಸೋಮವಾರ ಕೊಟ್ಟಾಯಂನ ಕುರಿಚಿ ಬಳಿ ನಾಗರಹಾವು ಕಚ್ಚಿದ ಮೇಲೆಯೂ ಅದನ್ನು ಹಿಡಿದು ಚೀಲಕ್ಕೆ ತುಂಬಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. 2020ರಲ್ಲಿಯೂ ಇವರಿಗೆ ಹಾವೊಂದು ಕಚ್ಚಿದ ಪರಿಣಾಮ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.
ಹಾವಿನ ಬಾತ್‌ರೂಂ ಮೋಹ... ಯಾರೂ ಇಲ್ಲದ ವೇಳೆ ಬಾತ್ ರೂಮ್ ಗೆ ಬರುತ್ತಿದ್ದ ನಾಗರ ಹಾವು..!
ವಾವಾ ಸುರೇಶ್ ಆಸ್ಪತ್ರೆಗೆ ದಾಖಲಾದ ಬಳಿಕ ಅವರು ಹಾವು ಹಿಡಿಯುವ, ಅದು ಅವರಿಗೆ ಕಚ್ಚುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ವಾವಾ ಸುರೇಶ್‌ಗೆ ಹೆಚ್ಚಿನ ಚಿಕಿತ್ಸೆಗೆ ಕೇರಳ ಸರ್ಕಾರ ಅಗತ್ಯ ವ್ಯವಸ್ಥೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿ ಅವರಿಗೆ 2.1 ಮಿಲಿನನ್ ಫಾಲೋವರ್ಸ್‌ಗಳಿದ್ದಾರೆ. ಸಾಮಾಜಿಕ ತಾಲತಾಣಗಳಲ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಈ ಹಿಂದೆ 2014 ರಲ್ಲಿ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಕೂಡ ಇವರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.