ದೇವರ ನಾಡಲ್ಲಿ ಪ್ರವಾಸಿಗರ ಸೆಳೆಯುತ್ತಿರುವ ಸುಂದರ ಬೀಚ್‌ ತೇಲುವ ಸೇತುವೆ ಈ ಬೀಚ್‌ನ ಪ್ರಮುಖ ಆಕರ್ಷಣೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು  

ಕೊಜಿಕೋಡ್(ಮಾ.28): ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಬೀಚೊಂದರಲ್ಲಿ ತೇಲುವ ಸೇತುವೆಯೊಂದನ್ನು ನಿರ್ಮಿಸಿದ್ದು, ಇದು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೇರಳದ ಕೋಝಿಕ್ಕೋಡ್‌ನ (Kozhikode) ಬೇಪೋರ್ ಬೀಚ್‌ನಲ್ಲಿ (Beypore beach) ರಾಜ್ಯದ ಪ್ರವಾಸೋದ್ಯಮ ಇಲಾಖೆಯಿಂದ ಈ ತೇಲುವ ಸೇತುವೆಯನ್ನು ಸ್ಥಾಪಿಸಲಾಗಿದೆ.

ಈಗ ಕೇರಳದ ಕೋಝಿಕ್ಕೋಡ್‌ನ ಬೇಪೋರ್ ಬೀಚ್‌ಗೆ ಭೇಟಿ ನೀಡುವ ಪ್ರವಾಸಿಗರು ಅಲೆಗಳ ಮೇಲೆ ನಡೆಯುವ ಅನುಭವವನ್ನು ಆನಂದಿಸಬಹುದು.ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಜಿಲ್ಲಾ ಪ್ರವಾಸಿ ಪ್ರಚಾರ ಮಂಡಳಿ (ಡಿಟಿಪಿಸಿ) ಮತ್ತು ಬಂದರು ಇಲಾಖೆಯ ಸಹಾಯದಿಂದ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಈ ತೇಲುವ ಸೇತುವೆಯನ್ನು ಸ್ಥಾಪಿಸಿದೆ. ತೇಲುವ ಸೇತುವೆಯ ಮೇಲೆ ಪ್ರವಾಸಿಗರು ಜಾಲಿ ಮಾಡುತ್ತಿರುವ ವೀಡಿಯೊವನ್ನು ಎಎನ್‌ಐ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಕಿರು ವಿಡಿಯೋದಲ್ಲಿ ಸೇತುವೆಯು ಸಮುದ್ರದ ಅಲೆಗಳ ಉಬ್ಬರಕ್ಕೆ ಮೇಲೇರಿ ಕೆಳಗಿಳಿಯುವುದನ್ನು ನೋಡಬಹುದು.

ಸೇತುವೆಯು 100 ಮೀಟರ್ ಉದ್ದ ಮತ್ತು 3 ಮೀಟರ್ ಅಗಲವನ್ನು ಹೊಂದಿದ್ದು ಮತ್ತು ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ (HDPE) ಬ್ಲಾಕ್‌ಗಳಿಂದ ಮಾಡಲ್ಪಟ್ಟಿದೆ. ಇದು ಒಂದು ಬಾರಿಗೆ 500 ಜನರನ್ನು ಸಾಗಿಸಬಹುದು, ಆದರೆ ಪ್ರಸ್ತುತ ಲೈಫ್ ಜಾಕೆಟ್‌ಗಳನ್ನು ಧರಿಸಿದ 50 ಜನರಿಗೆ ಮಾತ್ರ ಇಲ್ಲಿ ಒಂದು ಬಾರಿ ಭೇಟಿ ನೀಡಲು ಅನುಮತಿ ನೀಡಲಾಗಿದೆ. ಇದಲ್ಲದೆ, ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 15 ಮೀಟರ್ ಅಗಲದ ವೇದಿಕೆ ಇದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಸೇತುವೆಗೆ ಭೇಟಿ ನೀಡಲು ಬಯಸುವವರು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯ ಸಮಯದ ಮಧ್ಯೆ ಬೈಪೋರೆ ಬೀಚ್‌ಗೆ ತೆರಳಬಹುದು.

ಕಳೆದ ತಿಂಗಳು ಇಂಗ್ಲೆಂಡ್ ಅನ್ನು ಕಾಡಿದ್ದ ಯೂನೈಸ್ ಚಂಡಮಾರುತಕ್ಕೆ ಸೇತುವೆಯೊಂದು ಕೊಚ್ಚಿ ಹೋಗುತ್ತಿರುವ ವಿಡಿಯೋವೊಂದು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ಕೈನ್ಯೂಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಸೇತುವೆಯ ಬಳಿ ಚಂಡಮಾರುತದಿಂದಾಗಿ ಮುರಿದು ಬಿದ್ದಂತಹ ಕೆಲ ವಸ್ತುಗಳ ಅವಶೇಷಗಳು ಬಂದು ಸಂಗ್ರಹವಾಗುತ್ತಿದ್ದು, ಅದಾದ ಸ್ವಲ್ಪ ಹೊತ್ತಿನಲ್ಲಿ ಸೇತುವೆಯು ಕುಸಿದು ನೀರಿನಲ್ಲಿ ಕೊಚ್ಚಿ ಹೋಗುತ್ತದೆ.

ಈ ವಿಡಿಯೋವನ್ನು ಎನ್ವಿರಾನ್‌ಮೆಂಟ್‌ ಏಜೆನ್ಸಿಯು ಕೂಡ ಹಂಚಿಕೊಂಡಿದ್ದು, ಮರ್ಸಿ (Mersey) ನದಿಯ ಮೂಲಕ ಪ್ರವಾಹದ ನೀರು ಹರಿದು ಹೋಗುವುದನ್ನು ತೋರಿಸುತ್ತಿದೆ. ಹವಾಮಾನ ಇಲಾಖೆಯು ಉತ್ತರ ಐರ್ಲೆಂಡ್‌ನಲ್ಲಿ ರಭಸವಾಗಿ ಗಾಳಿ ಬೀಸುವ ಬಗ್ಗೆ (amber warning) ಎಚ್ಚರಿಕೆಯನ್ನು ನೀಡಿತ್ತು. ಜೊತೆಗೆ ವೇಲ್ಸ್ (Wales), ಉತ್ತರ ಐರ್ಲೆಂಡ್ (Ireland), ಇಂಗ್ಲೆಂಡ್‌ನ (England) ಕೆಲವು ಭಾಗಗಳು ಮತ್ತು ನೈಋತ್ಯ ಸ್ಕಾಟ್ಲೆಂಡ್‌ನಲ್ಲಿ (Scotland) ಯೆಲ್ಲೋ ಅಲರ್ಟ್‌(Yellow Alert) ಘೋಷಿಸಿತ್ತು. 

ಯೂನೈಸ್ ಚಂಡಮಾರುತ ಕಳೆದ ತಿಂಗಳು ಇಂಗ್ಲೆಂಡ್‌ನಲ್ಲಿ ವಿನಾಶವನ್ನೇ ಉಂಟು ಮಾಡಿತ್ತು. ಇದಾದ ಬಳಿಕ ಬಂದ ಫ್ರಾಂಕ್ಲಿನ್‌ ಚಂಡಮಾರುತವೂ ಕೂಡ (ಫೆ.22) ದೇಶದ ಹಲವೆಡೆ ಭಾರಿ ಹಾನಿ ಉಂಟು ಮಾಡಿದ್ದು, ಲೀಡ್ಸ್‌ನಲ್ಲಿ (Leeds) ಚಂಡ ಮಾರುತಕ್ಕೆ ಸಿಲುಕಿ ಸೇತುವೆಯೊಂದು ಕೊಚ್ಚಿ ಹೋಗಿತ್ತು. ಗಮನಾರ್ಹವಾಗಿ, ಡಡ್ಲಿ ಮತ್ತು ಯುನೈಸ್ ಚಂಡಮಾರುತದ ನಂತರ ಚಂಡಮಾರುತ ಫ್ರಾಂಕ್ಲಿನ್ ಯುರೋಪ್‌ನ್ನು ಬಾಧಿಸಿದ್ದು, ಇದು ಒಂದೇ ವಾರದಲ್ಲಿ ಬಂದ ಮೂರನೇ ಚಂಡಮಾರುತವಾಗಿತ್ತು. 2015 ರಲ್ಲಿ ಚಂಡಮಾರುತಗಳಿಗೆ ನಾಮಕರಣ ಮಾಡುವ ಪ್ರಕ್ರಿಯೆ ಜಾರಿಗೆ ಬಂದಿತ್ತು.

ಯುನೈಸ್ ಚಂಡಮಾರುತವು ಯುರೋಪ್ ಮತ್ತು ಬ್ರಿಟನ್‌ನಲ್ಲಿ ಭಾರಿ ಹಾನಿಯನ್ನುಂಟು ಮಾಡಿತ್ತು. ಬ್ರಿಟನ್‌ನಲ್ಲಿ ಜನರು ರಸ್ತೆಯಲ್ಲಿ ನಿಲ್ಲಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಯ ರಭಸಕ್ಕೆ ಜನರೇ ನಿಯಂತ್ರಣ ಕಳೆದುಕೊಂಡು ಬೀಳುತ್ತಿದ್ದರು. ಬಿರುಗಾಳಿಗೆ ಮರಗಳು ನೆಲಕ್ಕುರುಳಿ ಮನೆಗಳಿಗೆ ಹಾನಿಯಾಗಿತ್ತು. ಪಶ್ಚಿಮ ಯುರೋಪ್‌ನಲ್ಲಿ ವಿಮಾನಗಳು, ರೈಲು, ಹಡಗುಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿತ್ತು. ಲಕ್ಷಾಂತರ ಮಂದಿ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದರು.